ಸಾರಾಂಶ
ಕನ್ನಡಪ್ರಭ ವಾರ್ತೆ ಜೇವರ್ಗಿ
ಮಾಜಿ ಸಿಎಂ ಧರ್ಮಸಿಂಗ್ ಈ ನಾಡು ಕಂಡ ಅಪರೂಪದ ರಾಜಕಾರಣಿ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಬದುಕು ಆದರ್ಶಪ್ರಾಯವಾಗಿತ್ತು. ಸುಮಾರು 40ವರ್ಷಗಳ ಕಾಲ ರಾಜಕಾರಣ ನಡೆಸಿದ ಧೀಮಂತ ನಾಯಕ. ಎಂದು ಸೊನ್ನ ಸಿದ್ದಲಿಂಗೇಶ್ವರ ವಿರಕ್ತಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.ತಾಲೂಕಿನ ನೆಲೋಗಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡ ದಿ.ಮಾಜಿ ಸಿಎಂ ಎನ್. ಧರ್ಮಸಿಂಗ್ 87ನೇ ವರ್ಷದ ಜನ್ಮದಿನದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವ ರಾಜಕಾರಣಿಗಳಿಗೆ ಧರ್ಮಸಿಂಗ್ ಆದರ್ಶವಾಗಿದ್ದರು. ಅವರು ಸತತ ೮ ಬಾರಿ ಜೇವರ್ಗಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಇದಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಾಗ ವಿವಿಧ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ 18 ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಕೊಡುಗೆ ಅಪಾರವಾಗಿದೆ. 371(ಜೆ) ಕಲಂ ಜಾರಿಗೆ ನಂತರ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಲು ಹೋರಾಟ ನಡೆಸಿದ್ದರು. ನೀರಾವರಿ ಸೌಲಭ್ಯ, ರಸ್ತೆ ನಿರ್ಮಾಣ ಸೇರಿ ಅನೇಕ ಮಹತ್ವದ ಯೋಜನೆ ಜಾರಿಗೆ ತಂದರು. ಸರಳ ಸಜ್ಜನಿಕೆಗೆ ಹೆಸರುವಾಸಿಯಾದ ಧರ್ಮಸಿಂಗ್ ದೀನ, ದಲಿತ ಹಾಗೂ ಹಿಂದುಳಿದವರ ಕಣ್ಮಣಿಯಾಗಿದ್ದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು. ಧರ್ಮಸಿಂಗ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಎಲ್ಲಾ ಪಕ್ಷದ ಮುಖಂಡರ ಜೊತೆ ಉತ್ತಮ ಸ್ನೇಹ, ಬಾಂಧವ್ಯ ಹೊಂದಿದ್ದರು. ಧರ್ಮಸಿಂಗ್ ಪುತ್ಥಳಿಗೆ ನೆಲೋಗಿ ಹನುಮಾನ ದೇವಸ್ಥಾನದ ಅರ್ಚಕ ಉಮೇಶ ಭಟ್ಟ ಜೋಶಿ ಪೂಜೆ ಸಲ್ಲಿಸಿದರು.ಪ್ರಭಾವತಿ ಧರ್ಮಸಿಂಗ್, ಅವರ ಪುತ್ರರಾದ ಶಾಸಕ ಡಾ. ಅಜಯಸಿಂಗ್, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಕಲಬುರಗಿ ದಕ್ಷೀಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಚಂದ್ರಾಸಿಂಗ್, ಶಿವಲಾಲಸಿಂಗ್, ಕಾಶೀಂಪಟೇಲ್ ಮುದವಾಳ, ರಾಜಶೇಖರ ಸೀರಿ, ಮಣೀಂದ್ರಸಿಂಗ್, ಪ್ರಶಾಂತಸಿಂಗ್, ಗೌಡಪ್ಪಗೌಡ ಪೊಲೀಸ್ ಪಾಟೀಲ ಆಂದೋಲಾ, ನೀಲಕಂಠರಾವ್ ಮುಲಗೆ, ಹಣಮಂತರಾವ್ ಭೂಸನೂರ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಗಿರೆಪ್ಪಗೌಡ ಪಾಟೀಲ ಕಲ್ಲಹಂಗರಗಾ, ಮಾಜೀದ್ ಗಿರಣಿ, ರಾಘವೇಂದ್ರ ಕುಲಕರ್ಣಿ ನರಿಬೋಳ, ಮರೆಪ್ಪ ಸರಡಗಿ, ಲಕ್ಷ್ಮೀಕಾಂತ ಕುಲಕರ್ಣಿ ಸೇರಿ ತಾಲೂಕಿನ ಧರ್ಮಸಿಂಗ್ ಅಭಿಮಾನಿಗಳು, ಗ್ರಾಮಸ್ಥರು ಹಾಗೂ ಬಂಧು ಬಳಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.