ಟಾರ್ಗೆಟ್‌ ಧರ್ಮಸ್ಥಳ ವಿರುದ್ಧ ಸಿಡಿದೆದ್ದ ಭಕ್ತರು

| N/A | Published : Aug 12 2025, 12:30 AM IST / Updated: Aug 12 2025, 06:10 AM IST

ಟಾರ್ಗೆಟ್‌ ಧರ್ಮಸ್ಥಳ ವಿರುದ್ಧ ಸಿಡಿದೆದ್ದ ಭಕ್ತರು
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಹಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿ ಧರ್ಮಸ್ಥಳ ಪರ ಭಕ್ತರು ಸೋಮವಾರ ರಾಜ್ಯದ ಹಲವೆಡೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು :  ಧರ್ಮಸ್ಥಳ ಕ್ಷೇತ್ರದ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಹಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿ ಧರ್ಮಸ್ಥಳ ಪರ ಭಕ್ತರು ಸೋಮವಾರ ರಾಜ್ಯದ ಹಲವೆಡೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. 

ಜೊತೆಗೆ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಕುರಿತು ಎಸ್‌ಐಟಿ ರಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಮಧ್ಯೆ, ಆ.24ರಂದು ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣಾ ಸಮಾವೇಶ ನಡೆಸಲು ಚಿಂತನೆ ನಡೆದಿದೆ. ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸಂಜೆ 4 ಗಂಟೆಗೆ ರಾಜ್ಯದ ಪ್ರಮುಖ ಹಿಂದೂ ನಾಯಕರು, ಧಾರ್ಮಿಕ ಮುಖಂಡರು ಸೇರಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಸಮಾವೇಶ ನಡೆಸಲು ಯೋಜಿಸಲಾಗುತ್ತಿದೆ. ಆ ಮೂಲಕ ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಯ ವಿರುದ್ದ ಒಗ್ಗಟ್ಟು ಪ್ರದರ್ಶಿಸಲು ಚಿಂತನೆ ನಡೆದಿದೆ.

ಹಲವೆಡೆ ಪ್ರತಿಭಟನೆ:

ಮಂಡ್ಯದಲ್ಲಿ ಸಿಲ್ವರ್ ಜ್ಯೂಬಿಲಿ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಭಕ್ತರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾಕಾರರು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅನಾಮಿಕ ದೂರುದಾರನನ್ನು ಬಳಸಿಕೊಂಡು ಕ್ಷೇತ್ರದ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿ ಬಿತ್ತರಿಸಲಾಗುತ್ತಿದೆ. ಇದು ಭಕ್ತರಿಗೆ ನೋವುಂಟು ಮಾಡುತ್ತಿದ್ದು, ಈ ಷಡ್ಯಂತ್ರವನ್ನು ನಾವು ಸಹಿಸುವುದಿಲ್ಲ ಎಂದು ಕಿಡಿ ಕಾರಿದರು. ಅಪಪ್ರಚಾರ ಮಾಡುತ್ತಿರುವವರ ಹಿನ್ನೆಲೆ, ಸುಳ್ಳು ಆರೋಪ ಮಾಡಲು ಅವರಿಗೆ ಪ್ರಚೋದನೆ ನೀಡುತ್ತಿರುವವರು, ಈ ತಂಡಕ್ಕೆ ಬರುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಧಾರವಾಡದಲ್ಲಿ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮಹಿಳಾ ಸಂಘಗಳ ಸದಸ್ಯರು, ಎಸ್‌ಡಿಎಂ ಸಮೂಹ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಕಲಾಭವನದ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿದರು. ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ತನಿಖೆಗೆ ಎಸ್‌ಐಟಿ ರಚಿಸುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮುಸ್ಲಿಂ ಮಹಿಳೆಯರೂ ಪಾಲ್ಗೊಂಡಿದ್ದರು.

ಶಿವಮೊಗ್ಗದಲ್ಲಿ ಸೀನಪ್ಪ ಶೆಟ್ಟಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆ ವೇಳೆ ಭಕ್ತರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಮತ್ತು ಡಾ.ವೀರೇಂದ್ರ ಹೆಗ್ಗಡೆ ಅವರ ಭಾವಚಿತ್ರ ಹಿಡಿದಿದ್ದರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಮಧ್ಯೆ, ರಾಮನಗರದಲ್ಲಿ ಧರ್ಮಸ್ಥಳ ಭಕ್ತಾಭಿಮಾನ ವೇದಿಕೆ ವತಿಯಿಂದ ಬುಧವಾರ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

13ನೇ ಪಾಯಿಂಟ್‌ನಲ್ಲಿ ಅಸ್ಥಿ ಶೋಧಕ್ಕೆ ಜಿಪಿಆರ್‌ ಬಳಕೆ ಇಂದಿನಿಂದ ಯಂತ್ರ ಬಳಸಿ ಶೋಧ ಕಾರ್ಯ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ಸಾಕ್ಷಿದಾರ ಗುರುತಿಸಿರುವ 13ನೇ ಸ್ಥಳದಲ್ಲಿ ಡ್ರೋನ್ ಮೌಂಟೆಡ್ ಜಿಪಿಆರ್ (ಗ್ರೌಂಡ್‌ ಪೆನೆಟ್ರೇಟೆಡ್‌ ರಾಡಾರ್‌) ಮೂಲಕ ಮಂಗಳವಾರದಿಂದ ಶೋಧ ಕಾರ್ಯ ನಡೆಯಲಿದೆ. ಈ ಸಂಬಂಧ ಸೋಮವಾರ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಯಿತು. ಕ್ಲಿಷ್ಟಕರವಾದ 13ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ಮುಂದೂಡಲ್ಪಡುತ್ತಿದ್ದು ಮಂಗಳವಾರ ಅಧಿಕೃತವಾಗಿ ಆರಂಭಗೊಳ್ಳುವ ನಿರೀಕ್ಷೆ ಇದೆ.

Read more Articles on