ಚನ್ನಪಟ್ಟಣ: ಮಹಿಳೆಯರ ಆರ್ಥಿಕ ಅಭಿವೃದ್ಧಿ ಜೊತೆಗೆ, ಮಹಿಳೆಯರ ಜ್ಞಾನ ವಿಕಾಸಕ್ಕೆ ಶ್ರಮಿಸುತ್ತಿರುವ ಧರ್ಮಸ್ಥಳ ಸಂಸ್ಥೆಯ ಸೇವೆ ಅನನ್ಯ ಎಂದು ಗೌಡಗೆರೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ತಿಳಿಸಿದರು.

ಚನ್ನಪಟ್ಟಣ: ಮಹಿಳೆಯರ ಆರ್ಥಿಕ ಅಭಿವೃದ್ಧಿ ಜೊತೆಗೆ, ಮಹಿಳೆಯರ ಜ್ಞಾನ ವಿಕಾಸಕ್ಕೆ ಶ್ರಮಿಸುತ್ತಿರುವ ಧರ್ಮಸ್ಥಳ ಸಂಸ್ಥೆಯ ಸೇವೆ ಅನನ್ಯ ಎಂದು ಗೌಡಗೆರೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ತಿಳಿಸಿದರು.

ನಗರದ ಶತಮಾನೋತ್ಸವ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು,

ನಿಜವಾದ ಮಹಿಳಾ ಸಬಲೀಕರಣಕ್ಕೆ ಅವಕಾಶ ಮಾಡಿಕೊಟ್ಟಿರುವ ಕೀರ್ತಿ ಧರ್ಮಸ್ಥಳ ಸಂಸ್ಥೆಗೆ ಸಲ್ಲುತ್ತದೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲಳು. ಹೆಣ್ಣು ಮನೆಯ ಕಣ್ಣಾದಾಗ ಮಾತ್ರ ಸಂಸಾರ ಸುಖವಾಗಿರಲು ಸಾಧ್ಯ. ಮಹಿಳೆಯ ಅಭಿವೃದ್ಧಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಸಹಕಾರ ಮಾಡುತ್ತವೆ. ಆದರೆ, ಅದನ್ನು ಉಪಯೋಗಿಸುವ ಮನಸ್ಥಿತಿ ಅತಿಮುಖ್ಯ ಎಂದು ಹೇಳಿದರು.

ತಹಸೀಲ್ದಾರ್ ಬಿ.ಎನ್.ಗಿರೀಶ್ ಮಾತನಾಡಿ, ಮನೆ ಬೆಳೆದರೆ ಹಳ್ಳಿ ಬೆಳೆದಂತೆ, ಹಳ್ಳಿ ಬೆಳೆದರೆ ದೇಶ ಬೆಳೆಯುತ್ತದೆ. ಮನೆ ಹಾಗೂ ಸಮಾಜವನ್ನು ಬೆಳೆಸುವ ಶಕ್ತಿ ಮಹಿಳೆಯರಿಗಿದೆ. ಸಮಾಜವನ್ನು ಉದ್ಧಾರ ಅಥವಾ ಹಾಳು ಎರಡನ್ನು ಮಾಡುವ ಶಕ್ತಿ ಮಹಿಳೆಯರಿಗಿದೆ. ಮಹಿಳೆಯರು ಸಮಾಜಮುಖಿಯಾದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ಮನೆ ಹಾಗೂ ಸಮಾಜವನ್ನು ಸುಂದರವಾಗಿಸುವ ಶಕ್ತಿ ಮಹಿಳೆಯರಿಗಿದೆ. ಹೆಣ್ಣನ್ನು ಭೂಮಿಗೆ ಹೋಲಿಸಿರುವುದು ಇದೇ ಕಾರಣಕ್ಕೆ ಎಂದರು.ಇತ್ತೀಚೆಗೆ ಕೇವಲ ಸಂಸಾರಗಳಷ್ಟೇ ಹಾಳಾಗುತ್ತಿಲ್ಲ, ಸಂಬಂಧಗಳೂ ಹಾಳಾಗುತ್ತಿವೆ. ಹಣ ಹಾಗೂ ಕೀರ್ತಿಗಿಂತ ಸಂಬಂಧಗಳು ಅತಿಮುಖ್ಯ. ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಂಸ್ಥೆ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಹಣ ಉಳಿತಾಯ ಮಾಡುವ ಜೊತೆಗೆ ಮಹಿಳೆಯರಲ್ಲಿ ಸಹಕಾರ ಮನೋಭಾವ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.

ಆರ್ಟ್ ಆಫ್ ಲಿವಿಂಗ್ ಸಂಯೋಜಕಿ ರಾಧಿಕಾ ರವಿಕುಮಾರ್ ಗೌಡ ಮಾತನಾಡಿ, ಈ ಸಮಾಜದಲ್ಲಿ ಮಹಿಳೆಯರಿಗೆ ಇಡೀ ಮೈಯಲ್ಲಾ ಕಣ್ಣಾಗಿರಬೇಕು. ಹೊಗಳಿಕೆ, ತೆಗಳಿಕೆ ಯಾವುದನ್ನು ಸಹ ಸ್ವೀಕರಿಸಬಾರದು. ಯಾರಿಂದ ಏನನ್ನು ಅನಾವಶ್ಯಕ ಸ್ವೀಕಾರ ಬೇಡ. ನಮ್ಮ ನೆಲದ ಸಂಸ್ಕತಿ ಉಳಿಸುವುದರಲ್ಲಿ ಮಹಿಳೆಯರ ಪಾತ್ರ ಅಪಾರ. ಒಂದು ಕುಟುಂಬದ ಅಭಿವೃದ್ಧಿ ಆ ಮನೆಯ ಮಹಿಳೆಯನ್ನು ಅವಲಂಬಿಸಿರುತ್ತದೆ. ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ತಾಯಿಯ ಪಾತ್ರ ಮಹತ್ತವಾದದ್ದು. ನಾವು ಹೇಗೆ ಬೆಳೆಸುತ್ತೆವೆಯೋ ಹಾಗೇ ಮಕ್ಕಳು ಸಹ ಬೆಳೆಯುತ್ತಾರೆ. ಮಕ್ಕಳಲ್ಲಿ ಕೀಳರಿಮೆ ಪ್ರಜ್ಞೆ ಬೆಳೆಸುವುದು ಬಹುದೊಡ್ಡ ತಪ್ಪು. ಕೇವಲ ಅಂಕ ಗಳಿಗೆಯೇ ಒತ್ತಡ ಹಾಕದೇ, ಅವರ ಸಂಪೂರ್ಣ ವಿಕಸನಕ್ಕೆ ಅವಕಾಶ ನೀಡಬೇಕು ಎಂದು ತಿಳಿಸಿದರು.

ಅಭ್ಯುದಯ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಆದ್ಯಕ್ಷೆ ಬಿ.ವಿ.ಗೀತಾಂಜಲಿ ಅಭಿಲಾಷ್ ಮಾತನಾಡಿ, ಧರ್ಮಸ್ಥಳ ಸಂಸ್ಥೆಯಿಂದಾಗಿ ಮಹಿಳೆಯರು ತಮ್ಮ ಕಷ್ಟಕಾಲದಲ್ಲಿ ಖಾಸಗಿಯವರಲ್ಲಿ ಬಡ್ಡಿಗೆ ಕೈಚಾಚುವುದು ತಪ್ಪಿದೆ. ಮಹಿಳೆಯರು ತಮ್ಮ ಬಿಡುವಿಲ್ಲದ ದುಡಿಮೆಯ ನಡುವೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿ. ಕಷ್ಟಪಟ್ಟು ಉಳಿತಾಯ ಮಾಡಿದ ಹಣವನ್ನು ಸಹ ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಜ್ಞಾನ ವಿಕಾಶ ಯೋಜನೆಯ ಪ್ರಾದೇಶಿಕ ಅಧಿಕಾರಿ ಮೂಕಾಂಬಿಕಾ, ಜಿಲ್ಲಾ ಯೋಜನಾ ನಿರ್ದೇಶಕ ಜಯಕರಶೆಟ್ಟಿ, ತಾಲೂಕು ಯೋಜನಾ ನಿರ್ದೇಶಕಿ ರೇಷ್ಮಾ ಸೇರಿದಂತೆ ಇತರರಿದ್ದರು.

ಪೊಟೋ೬ಸಿಪಿಟಿ೫: ಚನ್ನಪಟ್ಟಣದ ಶತಮಾನೋತ್ಸವ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಡಾ.ಮಲ್ಲೇಶ್ ಗುರೂಜಿ ಉದ್ಘಾಟಿಸಿದರು.