ಸಾರಾಂಶ
ಸಾಗರ: ಧರ್ಮಸ್ಥಳ ಯೋಜನೆ, ವ್ಯಸನಮುಕ್ತ ಹಾಗೂ ಸನ್ಮಾರ್ಗಯುತ ಬದುಕಿಗೆ ಮಾರ್ಗದರ್ಶನ ಮಾಡುತ್ತದೆ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಸ್ಮರಣೆ ಮತ್ತು ಬೃಹತ್ ವ್ಯಸನಮುಕ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳ ಯೋಜನೆಯಿಂದ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ ಎಂದರು.ಗಾಂಧೀಜಿಯವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಜೊತೆಗೆ ಮದ್ಯವರ್ಜನಾ ಶಿಬಿರಗಳಲ್ಲಿ ಪಾಲ್ಗೊಂಡು ಮದ್ಯದ ಚಟ ಬಿಟ್ಟವರು ಬದುಕನ್ನು ಅತ್ಯಂತ ಸುಂದರಗೊಳಿಸಿಕೊಳ್ಳುವತ್ತ ಗಮನ ಹರಿಸಬೇಕು. ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವತ್ತ ಗಮನ ಹರಿಸಬೇಕು. ಯೋಜನೆಯ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕ ದಿನೇಶ್ ಎಂ.ಕೆ. ಮಾತನಾಡಿ, ಗಾಂಧೀಜಿಯವರು ಮದ್ಯವ್ಯಸನ ಮುಕ್ತ ಸಂದೇಶಕ್ಕಾಗಿ ಸಂಕಲ್ಪ ಕೈಗೊಂಡಿದ್ದರು. ಡಾ.ವೀರೇಂದ್ರ ಹೆಗ್ಗಡೆಯವರು ಗಾಂಧೀಜಿಯವರ ಕನಸು ನನಸು ಮಾಡಲು ಯೋಜನೆ ಮೂಲಕ ಪ್ರಯತ್ನಶೀಲರಾಗಿದ್ದಾರೆ. ಮನುಷ್ಯನಲ್ಲಿರುವ ದುಶ್ಚಟ ದೂರವಾದರೆ ಆತ ಬಡತನದಿಂದ ಹೊರಗೆ ಬರುತ್ತಾನೆ ಎಂದರು.ಜಿಲ್ಲಾ ಜನಜಾಗೃತಿ ವೇದಿಕೆಯ ಮಲ್ಲಿಕಾರ್ಜುನ ಹಕ್ರೆ ಮಾತನಾಡಿದರು. ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕಾಳಿಂಗ ರಾಜ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ಅರವಿಂದ ರಾಯ್ಕರ್, ಪ್ರೇಮ ಕುಮಾರ್, ಗೌರಿ, ದೇವರಾಜ್ ಕುರುವರಿ, ಕಸ್ತೂರಿ ಸಾಗರ್, ಪ್ರಮೀಳಾ ಎಸ್., ಎ.ಸಿ.ಚನ್ನವೀರಪ್ಪ, ದಿನಕರ ಭಾವೆ ಹಾಜರಿದ್ದರು. ದಯಾನಂದ ಪೂಜಾರಿ ಸ್ವಾಗತಿಸಿದರು. ಕಮಲಾಕ್ಷಿ ವಂದಿಸಿದರು. ರಾಧಾ ಕೃಷ್ಣಮೂರ್ತಿ ನಿರೂಪಿಸಿದರು.