ಮಹಿಳೆಯರ ಬದುಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ದಾರಿ ದೀಪ

| Published : Oct 02 2024, 01:02 AM IST

ಸಾರಾಂಶ

ನ್ಯಾಯಾಲಯದಲ್ಲಿ ನ್ಯಾಯ ಪಡೆದುಕೊಳ್ಳುವುದಕ್ಕೆ ಬಡವ ಶ್ರೀಮಂತರೆಂಬ ಬೇಧಭಾವವಿಲ್ಲದೇ ಎಲ್ಲರಿಗೂ ನ್ಯಾಯ ದೊರೆಯುತ್ತದೆ

ಮುಂಡರಗಿ: ರಾಜ್ಯಾದ್ಯಂತ ಲಕ್ಷಾಂತರ ಮಹಿಳಾ ಸ್ವಸಹಾಯ ಸಂಘಗಳಿಗೆ ಧನಸಹಾಯ ಮಾಡುವ ಮೂಲಕ ಸ್ವಯಂ ಉದ್ಯೋಗ ಮಾಡಲು ಆಸರೆಯಾಗಿ ಮಹಿಳೆಯರ ಬದುಕಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ದಾರಿ ದೀಪವಾಗಿ ನಿಂತಿದೆ ಎಂದು ಮುಂಡರಗಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಕಾಗಿನಕರ್ ಹೇಳಿದರು.

ಅವರು ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ ಮುಂಡರಗಿ ತಾಲೂಕು ಆಶ್ರಯದಲ್ಲಿ ಜರುಗಿದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಸಾಲ ಪಡೆದು ನಂತರ ಅದನ್ನು ಪ್ರಾಮಾಣಿಕವಾಗಿ ದುಡಿದು ಮುಟ್ಟಿಸಿ ಋಣ ಮುಕ್ತವಾಗುತ್ತಾರೆ. ಮಹಿಳೆ ಯಾವತ್ತಿದ್ದರೂ ಹಿಡಿಯ ಕಾರ್ಯ ಸಾಧಿಸದೇ ಬಿಡುವುದಿಲ್ಲ ಎಂದರು.

ನ್ಯಾಯಾಲಯದಲ್ಲಿ ನ್ಯಾಯ ಪಡೆದುಕೊಳ್ಳುವುದಕ್ಕೆ ಬಡವ ಶ್ರೀಮಂತರೆಂಬ ಬೇಧಭಾವವಿಲ್ಲದೇ ಎಲ್ಲರಿಗೂ ನ್ಯಾಯ ದೊರೆಯುತ್ತದೆ. ಕಾನೂನಿನಲ್ಲಿ ಬಡವರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಅಸಹಾಯಕರಿಗೆ, ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಸೇರಿದಂತೆ ₹3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಕಾನೂನು ನೆರವು ದೊರೆಯಲಿದೆ. ಈ ರೀತಿ ಉಚಿತ ಕಾನೂನು ಸಲಹೆ ಬೇಕಾದಲ್ಲಿ ನ್ಯಾಯಾಲಯದಲ್ಲಿರುವ ಸೇವಾ ಸಲಹಾ ಕೇಂದ್ರಕ್ಕೆ ಬಂದು ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಬಿ.ಸಿ.ಟ್ರಸ್ಟ್‌ ನಿರ್ದೇಶಕ ಯೋಗೀಶ ಎ. ಮಾತನಾಡಿ, ಜಿಲ್ಲೆಯಾದ್ಯಂತ ಒಕ್ಕೂಟಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ 6.50 ಲಕ್ಷ ಸ್ವಸಹಾಯ ಸಂಘಗಳಿದ್ದು, 66 ಲಕ್ಷ ಸದಸ್ಯರನ್ನು ಹೊಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಮಹಿಳೆಯರ ಸಬಲೀಕರಣ, ಜನರನ್ನು ದುಶ್ಚಟಗಳಿಂದ ಮುಕ್ತರನ್ನಾಗಿ ಮಾಡುವುದು, ಗ್ರಾಮೀಣ ಪ್ರದೇಶದಲ್ಲಿ ಕೆರೆಗಳ ಅಭಿವೃದ್ದಿ, ಕುಡಿಯುವ ನೀರಿನ ಘಟಕಗಳ ನಿರ್ಮಾಣ, ಶಾಲಾ ಕಟ್ಟಡಗಳ ನಿರ್ಮಾಣ ಸೇರಿದಂತೆ ಅನೇಕ ಜನಪರ ಕಾರ್ಯ ಮಾಡುತ್ತಾ ಬಂದಿದೆ ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಮಹಿಳೆಯರು ಸ್ವಯಂ ಪ್ರೇರಣೆಯಿಂದ ಉದ್ಯೋಗ ಮಾಡಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಸಹಾಯಕವಾಗಿದ್ದು, ಇಡೀ ಶಿರಹಟ್ಟಿ ಕ್ಷೇತ್ರದ ಮುಂಡರಗಿ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಭಾಗಗಳಲ್ಲಿನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಅಲ್ಲದೇ ಬಹುತೇಕ ಗ್ರಾಮಗಳಲ್ಲಿ ಈ ಸಂಸ್ಥೆಯಿಂದ ಅನೇಕ ಜನೋಪಯೋಗಿ ಕಾರ್ಯಗಳಾಗಿವೆ ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಂಡರಗಿ ಎಸ್.ಬಿ.ಐ. ಬ್ಯಾಂಕಿನ ಶಾಖಾ ಪ್ರಬಂಧಕ ಸತೀಶ ರಡ್ಡಿ, ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೋಶಾಧಿಕಾರಿ ಎ.ಕೆ. ಮುಲ್ಲಾನವರ, ಗವಿಸಿದ್ದಯ್ಯ ಹಳ್ಳಿಕೇರಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಚಿತ್ರದುರ್ಗ ರುಡ್ ಸೆಟ್ ಸಂಸ್ಥೆಯ ಎಂ. ಉದಯಕುಮಾರ ವ್ಯಕ್ತಿತ್ವ ವಿಕಾಸನ ಮತ್ತು ನಾಯಕತ್ವ ಗುಣಗಳು ಕುರಿತು ಉಪನ್ಯಾಸ ನೀಡಿದರು. ಮುಂಡರಗಿ ಕ್ಷೇತ್ರ ಯೋಜನಾಧಿಕಾರಿ ವಿಶಾಲಾ ಮಲ್ಲಾಪೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.