ಸಾರಾಂಶ
ಇದೀಗ ದಸರಾ ಹಾಗೂ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ರೈತರು ಬಗೆಬಗೆಯ ಹೂವನ್ನು ಮಾರುಕಟ್ಟೆಗೆ ತಂದಿದ್ದರು. ಆದರೆ, ಅವರ ಹೂವಿಗೆ ಅತೀ ಕಡಿಮೆ ದರ ಕೇಳಲಾಗುತ್ತಿದೆ. ಇದಕ್ಕೆ ಕಾರಣ ಬೆಂಗಳೂರಿನಿಂದ ಬಂದಿರುವ ಅಪಾರ ಪ್ರಮಾಣದ ಹೂವು
ಧಾರವಾಡ: ಇದೀಗ ರಾಜ್ಯಾದ್ಯಂತ ದಸರಾ ಹಬ್ಬದ ಸಂಭ್ರಮ ಶುರುವಾಗಿದೆ. ಇದೇ ವೇಳೆ ಮಾರುಕಟ್ಟೆಯಲ್ಲಿ ಹೂವು -ಹಣ್ಣುಗಳ ವ್ಯಾಪಾರದ ಭರಾಟೆಯೂ ಜೋರಾಗಿದೆ. ಈ ಬಾರಿಯ ದಸರಾಕ್ಕೆ ಧಾರವಾಡದ ಹೂವು ಬೆಳೆಗಾರರು ಹಾಗೂ ಮಾರಾಟಗಾರರಿಗೆ ಅಚ್ಚರಿಯೊಂದು ಎದುರಾಗಿದೆ. ಸ್ಥಳೀಯ ಮಾರುಕಟ್ಟೆಗೆ ಬೆಂಗಳೂರಿನಿಂದ ಭಾರೀ ಪ್ರಮಾಣದ ಹೂವು ಬಂದಿದ್ದು, ಸ್ಥಳೀಯ ಮಾರಾಟಗಾರರು ಹಾಗೂ ಬೆಳೆಗಾರರನ್ನು ಕಂಗೆಡಿಸಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಹೂವನ್ನು ಧಾರವಾಡ ತಾಲೂಕಿನಲ್ಲಿ ಬೆಳೆಯಲಾಗುತ್ತೆದೆ. ರೈತರು ಕೂಡ ದಸರಾ ಹಾಗೂ ದೀಪಾವಳಿ ಹಬ್ಬ ಹಾಗೂ ಅಮಾವಾಸ್ಯೆಯಂತಹ ಸಂದರ್ಭದಲ್ಲಿ ಹೂವು ಮಾರುಕಟ್ಟೆಗೆ ಬರುವಂತೆ ಬೆಳೆದಿರುತ್ತಾರೆ. ಇದೀಗ ದಸರಾ ಹಾಗೂ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ರೈತರು ಬಗೆಬಗೆಯ ಹೂವನ್ನು ಮಾರುಕಟ್ಟೆಗೆ ತಂದಿದ್ದರು. ಆದರೆ, ಅವರ ಹೂವಿಗೆ ಅತೀ ಕಡಿಮೆ ದರ ಕೇಳಲಾಗುತ್ತಿದೆ. ಇದಕ್ಕೆ ಕಾರಣ ಬೆಂಗಳೂರಿನಿಂದ ಬಂದಿರುವ ಅಪಾರ ಪ್ರಮಾಣದ ಹೂವು.ಬೆಂಗಳೂರಿಂದ ಬಂದ ಹೂವು
ಇಲ್ಲಿನ ಕೆಲ ದಲ್ಲಾಳಿಗಳು ಬೆಂಗಳೂರಿನಿಂದ ವ್ಯಾಪಾರ ಕುದುರಿಸಿ ತರಹೇವಾರಿ ಜಾತಿಗಳ ಹೂವಗಳನ್ನು ತಂದು, ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ರೈತರ ಹೂವಿಗೆ ದರ ಇಲ್ಲದಂತಾಗಿ, ಅವರೆಲ್ಲ ಪರದಾಡುವಂತಾಗಿದೆ. ಜೊತೆಗೆ ಕೆಲ ಹೊತ್ತು ದಲ್ಲಾಳಿಗಳೊಂದಿಗೆ ವಾದ ವಿವಾದ ಮಾಡಿದ್ದೂ ಆಯಿತು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ.ಬಾಡಿದ ಸ್ಥಳೀಯ ಹೂವು
ಸಾಮಾನ್ಯವಾಗಿ ಸೇವಂತಿ ಹೂವು ಕೆಜಿಗೆ ₹80 ರಿಂದ ₹100 ಮಾರಾಟವಾಗುತ್ತದೆ. ಆದರೆ ಬೆಂಗಳೂರಿನಿಂದ ಹೂವು ಸ್ಪರ್ಧೆ ನೀಡಿದ್ದರಿಂದ ಸ್ಥಳೀಯ ಸೇವಂತಿಗೆ ಬೆಲೆ ಇಲ್ಲದಾಗಿದೆ. ಕೆಜಿಗೆ ₹10 ರಿಂದ ₹20ಕ್ಕೆ ಇಳಿದಿದೆ. ಸುಗಂಧಿ ಹೂವು ಕೆಜಿಗೆ ₹150 ರಿಂದ ₹200 ಮಾರಾಟವಾಗಬೇಕಿತ್ತು. ಆದರೆ, ಪ್ರಸ್ತುತ ಅದು ₹40 ರಿಂದ ₹50ಕ್ಕೆ ಕುಸಿದಿದೆ. ಇನ್ನು, ಚೆಂಡು ಹೂವನ್ನಂತೂ ಯಾರೂ ಕೇಳುತ್ತಿಲ್ಲ. ರೈತರು ಮಾರುಕಟ್ಟೆಗೆ ತಂದಿರುವ ಹೂವನ್ನು ಅಲ್ಲಿಯೇ ಬಿಟ್ಟು ಹೋಗುವ ಸ್ಥಿತಿ ಬಂದಿದೆ. ಇದರಿಂದಾಗಿ ರೈತರು ಹೂವು ಕೀಳಲು ಕೂಲಿಕಾರರಿಗೆ ನೀಡಿದ ಹಣವೂ ಮರಳಿ ಬಾರದಂತಾಗಿದೆ ಎಂದು ರೈತ ಮುಳಮುತ್ತಲದ ಶಿವಾಜಿ ಎಂಬುವರು ಬೇಸರ ವ್ಯಕ್ತಪಡಿಸಿದರು.ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ದಸರಾ ಹಬ್ಬಕ್ಕೂ ಕಳೆ ಬರುತ್ತದೆ. ಚೆನ್ನಾಗಿ ಹೂವು ಮಾರಬಹುದು ಎಂದುಕೊಂಡಿದ್ದೆವು. ತಮ್ಮ ಹೂವಿಗೆ ಉತ್ತಮ ದರವೂ ಸಿಗುತ್ತದೆ ಎಂಬ ನಿರೀಕ್ಷೆಯೂ ಇತ್ತು. ಇದೀಗ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಶಿಬಾರಗಟ್ಟಿ ರೈತ ಶಿವಪ್ಪ ಅಳಲು ತೋಡಿಕೊಂಡರು. ಒಟ್ಟಿನಲ್ಲಿ ಹೂವು ಬೆಳೆದ ರೈತರ ಪಾಡಂತೂ ಇದೀಗ ಬೀದಿಗೆ ಬೀಳುವಂತಾಗಿರುವುದು ವಿಪರ್ಯಾಸವೇ ಸರಿ.