ಕೈ ಬೀಸಿ ಕರೆಯುತ್ತಿದೆ ಧಾರವಾಡದ ಮಾವು ಮೇಳ

| Published : May 15 2024, 01:36 AM IST

ಸಾರಾಂಶ

ಧಾರವಾಡದ ಆಪೂಸ್‌ ತುಂಬ ಪ್ರಸಿದ್ಧಿ ಪಡೆದಿದ್ದು ಈ ಮೇಳದಲ್ಲಿ ಆಪೂಸ್‌ ಜತೆಗೆ ಕಲಮಿ, ಕೇಸರ, ಮಲಗೋವಾ, ಸುಂದರಶಾ, ಚೈತ್ರಾಪೈರಿ ಅಂತಹ ತರಹೇವಾರಿ ತಳಿಗಳು ಸಹ ಮಾವು ಪ್ರಿಯರನ್ನು ಆಕರ್ಷಿಸುತ್ತಿವೆ.

ಧಾರವಾಡ:

ಸದ್ಯ ಧಾರವಾಡದಲ್ಲಿ ಏನಿದ್ದರೂ ಮಾವಿನ ಹಣ್ಣಿನದ್ದೇ ಸುಗ್ಗಿ ಮತ್ತು ಸುದ್ದಿ. ಈಗಾಗಲೇ ಮೇ ತಿಂಗಳ ಆರಂಭದಿಂದ ಕೋರ್ಟ್‌ ವೃತ್ತದ ಬಳಿಯ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಮಾವು ಬೆಳೆಗಾರರೇ ಮಾವು ಮೇಳ ಶುರು ಮಾಡಿದ್ದು ಯಶಸ್ವಿಯಾಗಿದೆ. ಮುಂದುವರಿದು ತೋಟಗಾರಿಕೆ ಇಲಾಖೆಯು ತನ್ನ ಕಚೇರಿ ಆವರಣದಲ್ಲಿ ಮಂಗಳವಾರದಿಂದ ಆಯೋಜಿಸಿರುವ ಮಾವು ಮೇಳಕ್ಕೂ ಉತ್ತಮ ಸ್ಪಂದನೆ ದೊರೆತಿದೆ.

ಮಾವಿನ ಬೆಳೆಗೆ ಹೆಚ್ಚಿನ ಮಳೆಯ ತೊಂದರೆ ಇಲ್ಲದೇ ಈ ಬಾರಿ ಮಾವಿನ ಹಣ್ಣು ಗುಣಮಟ್ಟದ್ದಾಗಿದೆ. ಅದರಲ್ಲೂ ಧಾರವಾಡದ ಆಪೂಸ್‌ ತುಂಬ ಪ್ರಸಿದ್ಧಿ ಪಡೆದಿದ್ದು ಈ ಮೇಳದಲ್ಲಿ ಆಪೂಸ್‌ ಜತೆಗೆ ಕಲಮಿ, ಕೇಸರ, ಮಲಗೋವಾ, ಸುಂದರಶಾ, ಚೈತ್ರಾಪೈರಿ ಅಂತಹ ತರಹೇವಾರಿ ತಳಿಗಳು ಸಹ ಮಾವು ಪ್ರಿಯರನ್ನು ಆಕರ್ಷಿಸುತ್ತಿವೆ. ಸಮೀಪದ ಜೋಗೆಲ್ಲಾಪುರ, ಕೆಲಗೇರಿ, ಬಾಡ, ಕಲಕೇರಿ, ತೇಗೂರು ಸೇರಿದಂತೆ ಧಾರವಾಡ, ಕಲಘಟಗಿ ತಾಲೂಕುಗಳ ಮಾವು ಬೆಳೆಗಾರರು ಮಾವಿನ ಹಣ್ಣುಗಳನ್ನು ಮೇಳಕ್ಕೆ ತಂದಿದ್ದು, ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕುಟುಂಬ ಸಮೇತ ಮೇಳಕ್ಕೆ ಭೇಟಿ ನೀಡಿ ಮಾವು ಖರೀದಿಸುತ್ತಿದ್ದಾರೆ.

ಮಾರುಕಟ್ಟೆಗಿಂತ ಕಡಿಮೆ:

ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಡಜನ್‌ (12 ಆಪೂಸ್‌ ಹಣ್ಣುಗಳು) ಮಾವಿಗೆ ₹ 400ರಿಂದ ₹ 600ರ ವರೆಗೆ ಮಾರಾಟವಾಗುತ್ತಿದೆ. ಆದರೆ, ಮೇಳದಲ್ಲಿ ಇಷ್ಟೊಂದು ದರವಿಲ್ಲ. ₹ 350ರಿಂದ ₹ 450ರ ವರೆಗೆ ಮಾರಾಟವಾಗುತ್ತಿದೆ. ಕಲಮಿ ಸೇರಿದಂತೆ ಇತರೆ ತಳಿಗಳ ಮಾವಿನ ದರ ಇನ್ನೂ ಕಡಿಮೆ ಇದೆ.

ಮೊದಲು ತೋಟಗಾರಿಕೆ ಇಲಾಖೆಯಿಂದ ಪ್ರತಿ ವರ್ಷ ಮಾವು ಮೇಳ ಮಾಡುತ್ತಿದ್ದರು. ಮೂರು ವರ್ಷಗಳಿಂದ ಇದು ನಿಂತಿತ್ತು. ಇದೀಗ ಮತ್ತೇ ಆರಂಭಿಸಿದ್ದು ನಮಗೂ ಖುಷಿ ತಂದಿದೆ. ರೈತರಾದ ನಾವು ಮಾರುಕಟ್ಟೆಯಲ್ಲಿ ಹಣ್ಣು ಮಾರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೋಲಸೆಲ್‌ ದರದಲ್ಲಿ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದೇವು. ಇದರಿಂದ ಲಾಭ ಕಡಿಮೆ. ಇಂತಹ ಮೇಳಗಳಲ್ಲಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ನಮಗೂ ಲಾಭ ಹಾಗೂ ಗ್ರಾಹಕರಿಗೂ ಲಾಭ. ಜತೆಗೆ ಗುಣಮಟ್ಟದ ಹಣ್ಣು ಗ್ರಾಹಕರಿಗೆ ತಲುಪಿದಂತಾಗುತ್ತದೆ. ಗ್ರಾಹಕರೊಂದಿಗೆ ಸಂಪರ್ಕವೂ ಬೆಳೆಯಲಿದೆ ಎಂದು ಜೋಗೆಲ್ಲಾಪುರದ ಮಾವು ಬೆಳೆಗಾರ ಶಿವಪ್ಪ ಸೋಮಣ್ಣವರನ್ನ ಮೇಳದ ಲಾಭ ಕುರಿತು ಮಾಹಿತಿ ನೀಡಿದರು.

ಮಾರುಕಟ್ಟೆಗೆ ಹೋಗಿ ಹಣ್ಣು ಖರೀದಿಸಲು ಮನಸ್ಸು ಒಪ್ಪುತ್ತಿಲ್ಲ. ಯಾವ ಹಣ್ಣು ಹೇಗಿರುತ್ತದೆ? ಯಾವ ತಳಿ? ಎಂಬುದು ತಿಳಿಯುವುದಿಲ್ಲ. ಮೇಳದಲ್ಲಿ ನೇರವಾಗಿ ಮಾವು ಬೆಳೆದವರೇ ಇರುವುದರಿಂದ ಅವರಿಂದ ಮಾವಿನ ಹಣ್ಣಿನ ಬಗ್ಗೆ ಮಾಹಿತಿ ಪಡೆದು ನಂಬಿಕೆಯಿಂದ ಹಣ್ಣು ಖರೀದಿಸಬಹುದು. ಜತೆಗೆ ಹಣ್ಣು ರುಚಿ ನೋಡಿಯೂ ಖರೀದಿಸಲು ಇಲ್ಲಿ ಅವಕಾಶವಿದೆ. ದರದಲ್ಲೂ ಮಾರುಕಟ್ಟೆಗಿಂತ ಕಡಿಮೆ ಎಂದು ಕಾಲೇಜು ವಿದ್ಯಾರ್ಥಿನಿಯೊಬ್ಬರು ಮೇಳದ ಕುರಿತು ಪ್ರತಿಕ್ರಯಿಸಿದರು.

ಕಳೆದ ಎರಡ್ಮೂರು ವರ್ಷಗಳ ಕಾಲ ಅತಿವೃಷ್ಟಿಯಿಂದ ಮೇಳ ಮಾಡಲು ಸಾಧ್ಯವಾಗಿಲ್ಲ. ಈ ಬಾರಿ ಅವಕಾಶ ಸಿಕ್ಕಿದ್ದು ಮೇ 14ರಿಂದ 16ರ ವರೆಗೆ ವರೆಗೆ ಆಯೋಜಿಸಲಾಗಿದೆ. ಮಾವು ಕುಟುಂಬ ಎಂಬ ಮಾದರಿ ಎಲ್ಲರ ಗಮನ ಸೆಳೆಯುತ್ತಿದೆ. ಉಳಿದಂತೆ ಹಲವು ತಳಿಗಳ ಮಾವು ಬಂದಿದ್ದು, ಬೆಳೆಗಾರರು ಹಾಗೂ ಗ್ರಾಹಕರು ಸಂತೋಷದಿಂದ ಮಾವು ಮಾರಾಟ, ಖರೀದಿ ಮಾಡುತ್ತಿದ್ದಾರೆ. ಸುತ್ತಲಿನ 30 ಬೆಳೆಗಾರರು ಆಗಮಿಸಿದ್ದು ಗ್ರಾಹಕರ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಣ್ಣು ನೀಡುತ್ತಿದ್ದಾರೆ. ಮೂರು ದಿನಗಳ ಸ್ಪಂದನೆ ನೋಡಿಕೊಂಡು ಮೇಳವನ್ನು ವಿಸ್ತರಿಸುವ ಚಿಂತನೆಯೂ ಇದೆ. ಹು-ಧಾ ಅವಳಿ ನಗರ ಸೇರಿದಂತೆ ಮಾವು ಪ್ರಿಯರು ಮೇಳದ ಲಾಭ ಪಡೆಯಬೇಕು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಇಮ್ತಿಹಾಜ್‌ ಮನವಿ ಮಾಡಿಕೊಂಡರು. ಮೇಳದ ವಿಶೇಷ..

ಮಾವು ಕುಟುಂಬದ ಮಾದರಿಯೇ ಮಾವು ಮೇಳದ ವಿಶೇಷ. ಹಣ್ಣುಗಳ ರಾಜ ಮಾವು. ಮಾವಿನ ರಾಜ ಆಪೂಸ್‌. ರಾಣಿ ಕೇಸರ. ಮಕ್ಕಳಾಗಿ ಇತರೆ ತಳಿಗಳನ್ನು ಚಿತ್ರರೂಪದಲ್ಲಿ ಪ್ರದರ್ಶನ ಮಾಡಿದ್ದು ಮಕ್ಕಳ ಹಾಗೂ ಜನರ ಗಮನ ಸೆಳೆಯುತ್ತಿದೆ. ಮಾವು ಕುಟುಂಬದ ಮಾದರಿ ಬಳಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಮಕ್ಕಳು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು. ದುಬಾರಿ ಹಣ್ಣು.

ವಿಶ್ವದ ಅಂತ್ಯದ ದುಬಾರಿ ಹಣ್ಣು ಎಂದು ಕರೆಯುವ ಮಿಯಾ ಜಾಕಿ ತಳಿ ಸೇರಿದಂತೆ ಮೇಳದಲ್ಲಿ 56 ಬಗೆ ತಳಿಗಳನ್ನು ಕಲಕೇರಿ ರೈತ ಪ್ರಮೋದ ಗಾಂವಕರ ತಂದಿದ್ದಾರೆ. ತಾವು ಬೆಳೆದ ಮಾವನ್ನು ಅಮೇರಿಕಾಗೆ ರಫ್ತು ಮಾಡುತ್ತಿರುವ ಈ ರೈತ ಬರೀ ಆಪೂಸ್‌ ಮಾತ್ರವಲ್ಲದೇ 56 ಬಗೆಯ ತಳಿಗಳನ್ನು ಬೆಳೆದು ಮಾವು ತಳಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಬೆಳೆದಿರುವ ತಳಿ ಹಾಗೂ ಅದರ ವಿಶೇಷತೆಯನ್ನು ತೋಟಗಾರಿಕೆ ಇಲಾಖೆಯು ಮೇಳದಲ್ಲಿ ಚಿತ್ರ-ಮಾಹಿತಿ ಸಹ ಪ್ರದರ್ಶಿಸುತ್ತಿದೆ.