ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಧಾರವಾಡ ಅಂದಕೊಡಲೇ ನೆನಪಾಗುವುದು ದ.ರಾ.ಬೇಂದ್ರೆ, ಡಾ.ಮಲ್ಲಿಕಾರ್ಜುನ ಮನಸೂರು, ಪಂ.ಬಸವರಾಜ ರಾಜಗುರು, ಪಂ.ಸವಾಯಿ ಗಂಧರ್ವರು, ಪಂ. ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್... ಹೀಗೆ ಸಾಹಿತ್ಯ, ಸಂಗೀತ, ರಂಗಭೂಮಿಯ ಸಾಂಸ್ಕೃತಿಕ ಬೇರುಗಳು ಧಾರವಾಡದ ನೆಲದಲ್ಲಿ ಚಾಚಿಕೊಂಡಿವೆ. ಆದರೆ, ಈ ಬೇರುಗಳ ಸಹಾಯದಿಂದ ಆಕಾಶಕ್ಕೆ ಬೆಳೆಯಬೇಕಾದ ಸಾಂಸ್ಕೃತಿಕ ಟೊಂಗೆಗಳು ಮಾತ್ರ ಭೂಮಿಗೆ ಸೀಮಿತವಾಗಿವೆ.125ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘ ಸೇರಿದಂತೆ ಇಲ್ಲಿರುವ ರಂಗಾಯಣ, ಬಾಲ ವಿಕಾಸ ಅಕಾಡೆಮಿ, ರಾಜ್ಯದ 2ನೇ ಹಳೆಯ ವಿಶ್ವವಿದ್ಯಾಲಯ ಕರ್ನಾಟಕ ವಿವಿ, ರಾಜ್ಯದ ಖ್ಯಾತನಾಮರ ಹೆಸರಿನಲ್ಲಿರುವ ಐದು ರಾಷ್ಟ್ರೀಯ ಟ್ರಸ್ಟ್‌ಗಳು ಹಾಗೂ ಹತ್ತಾರು ಸಾಂಸ್ಕೃತಿಕ ಸಂಘ-ಸಂಸ್ಥೆಗಳು, ಅಕಾಡೆಮಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಧಾರವಾಡದಲ್ಲಿದ್ದರೂ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ಬೆಳೆಯಬೇಕಿತ್ತೋ ಅದು ಸಾಧ್ಯವಾಗಿಲ್ಲ. ಇದಕ್ಕೆ ಬೇರೆ ಬೇರೆ ಕಾರಣಗಳಿದ್ದರೂ ಮುಖ್ಯವಾಗಿ ಸರ್ಕಾರದ ನಿರ್ಲಕ್ಷ್ಯ ಹಾಗೂ ಸ್ಪಷ್ಟವಾದ ಸಾಂಸ್ಕೃತಿಕ ನೀತಿ ಇಲ್ಲದೇ ಇರುವುದು ಎಂಬುದು ಸ್ಪಷ್ಟ.
ಈ ಹಿನ್ನೆಲೆಯಲ್ಲಿ ಫೆ. 16ರಂದು ನಡೆಯಲಿರುವ ಬಜೆಟ್‌ನಲ್ಲಾದರೂ ಧಾರವಾಡ ಸೇರಿದಂತೆ ರಾಜ್ಯದ ಪೈಕಿ ಸಾಂಸ್ಕೃತಿಕವಾಗಿ ನಗರಗಳಿಗೆ ಪ್ರತ್ಯೇಕವಾಗಿ ಸಾಂಸ್ಕೃತಿಕ ನೀತಿ ರೂಪಿಸಿ, ನಿರ್ಧಿಷ್ಟ ಅನುದಾನ ಒದಗಿಸುವ ಮೂಲಕ ಸಂಸ್ಕೃತಿಯನ್ನು ಜೀವಂತ ಇಡುವ ಕಾರ್ಯ ಮಾಡಬೇಕು ಎನ್ನುವುದು ಧಾರವಾಡದ ಸಾಂಸ್ಕೃತಿಕ ವಲಯದ ಒಕ್ಕೊರಲಿನ ಆಗ್ರಹವಾಗಿದೆ.ಟ್ರಸ್ಟ್‌ಗಳ ಏನ್ ಮಾಡ್ತಿವೆ
ಡಾ. ಮಲ್ಲಿಕಾರ್ಜುನ ಮನಸೂರು, ದ.ರಾ. ಬೇಂದ್ರೆ, ಬಸವರಾಜ ರಾಜಗುರು, ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಬಾವಿ, ಆಲೂರು ವೆಂಕಟರಾವ್ ಹೆಸರಿನಲ್ಲಿ ಐದು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗಳಿವೆ. ಇತ್ತೀಚಿಗೆ ಟ್ರಸ್ಟ್‌ಗಳಿಗೆ ಅನುದಾನ ಕೊರತೆ ಎದುರಾಗಿದ್ದು, ಜನ್ಮದಿನ, ಪುಣ್ಯತಿಥಿ ಹಾಗೂ ಪ್ರಶಸ್ತಿ ಪ್ರದಾನ ಹೊರತು ಪಡಿಸಿ ಮತ್ತಾವ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇಡೀ ದೇಶದಲ್ಲಿಯೇ ಮಾದರಿ ಎನ್ನುವಂತೆ ರಾಜ್ಯದ ಪೈಕಿ ಧಾರವಾಡದಲ್ಲಿ ಬಾಲ ವಿಕಾಸ ಅಕಾಡೆಮಿ ಸ್ಥಾಪಿಸಲಾಯಿತು. ಅದಕ್ಕೂ ಅನುದಾನ ನೀಡದ ಹಿನ್ನೆಲೆಯಲ್ಲಿ ಕ್ರೀಯಾತ್ಮಕ ಕೆಲಸಗಳಾಗುತ್ತಿಲ್ಲ.ಕನ್ನಡ ಸಾಹಿತ್ಯ ಪರಿಷತ್ತಿಗೆ ಹಿರಿಯಣ್ಣನಂತೆ ಧಾರವಾಡದಲ್ಲಿ 1890ರಲ್ಲಿಯೇ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗಿದೆ. ನಗರದ ಕೇಂದ್ರ ಸ್ಥಳದಲ್ಲಿರುವ ಸಂಘದ ಕಾರ್ಯಚಟುವಟಿಕೆಗಳಿಗೆ ಇದೇ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಿದ್ದಾಗ ಐದು ಎಕರೆ ಜಾಗ ಘೋಷಣೆ ಮಾಡಿದ್ದರು. ಆದರೆ, ಇದುವರೆಗೂ ಕಿಕ್ಕಿರಿದ, ಇಕ್ಕಟ್ಟಾದ ಜಾಗದಲ್ಲಿಯೇ ಸಂಘವು ಕಾರ್ಯ ಮಾಡುತ್ತಿದೆ. ವಾರ್ಷಿಕವಾಗಿ ಅನುದಾನವನ್ನು ಕಡಿತಗೊಳಿಸಿದ್ದು ಬೇಸರದ ಸಂಗತಿ.
2023ರಲ್ಲಿ ಧಾರವಾಡಕ್ಕೆ ಕೇಂದ್ರ ಲಲಿತ ಅಕಾಡೆಮಿ ಪ್ರಾದೇಶಿಕ ಕಚೇರಿ ತರಲಾಯಿತು. ಧಾರವಾಡದ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಜಾಗ ನೀಡಲಾಯಿತು. ಅವರು ಹೈಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಸದ್ಯ ಈ ಪ್ರಾದೇಶಿಕ ಕೇಂದ್ರದ ಕಾರ್ಯಚಟುವಟಿಕೆಗಳು ಸ್ತಬ್ದವಾಗಿವೆ. ರಂಗಾಯಣ ಸಂಸ್ಥೆಗೆ ನಿರ್ದೇಶಕರ ನೇಮಕ, ಅನುದಾನ ಕೊರತೆಯಂತಹ ಹಲವು ಕಾರಣಗಳಿಂದ ನಿರೀಕ್ಷಿತ ಮಟ್ಟಕ್ಕೆ ಬೆಳೆಸಲು ಸಾಧ್ಯವಾಗುತ್ತಿಲ್ಲ.ತೀವ್ರ ನಿರೀಕ್ಷೆ ಹುಟ್ಟಿಸಿದ ಗಂಗೂಬಾಯಿ ಗುರುಕುಲ ಮುಚ್ಚುವ ಸ್ಥಿತಿಗೆ ಬಂದಿದೆ. ಅಜ್ಜಿಯ ಧಾರವಾಡದ ಹೊಸಯಲ್ಲಾಪೂರದ ಮನೆಯಂತೂ ಹಾಳು ಬಿದ್ದಿದ್ದು ಇಬ್ಬರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸ್ವತಃ ಸ್ಥಳ ವೀಕ್ಷಣೆ ಮಾಡಿದರೂ ಈ ವರೆಗೂ ಅದರ ನವೀಕರಣ ಹಾಗೂ ಸಂಗೀತ ಶಾಲೆ ಆಗುತ್ತಿಲ್ಲ.
ಧಾರವಾಡದ ದುರಂತ ಎಂದರೆ, ರಂಗಭೂಮಿ ಚಟುವಟಿಕೆ, ಸಂಗೀತ ಕಾರ್ಯಕ್ರಮ ಹಾಗೂ ಇತರೆ ನೂರಾರು ಜನ ಭಾಗವಹಿಸುವ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಕಲಾಭವನ ಹಾಳು ಬಿದ್ದಿದೆ. ಸುಮಾರು ಐದು ಕೋಟಿ ವೆಚ್ಚ ಮಾಡಿ ನವೀಕರಣ ಮಾಡಿತ್ತು. ₹ 50 ಸಾವಿರ ಬಾಡಿಗೆ ನಿಗದಿ ಮಾಡಿದ್ದರಿಂದ ಐದು ವರ್ಷಗಳಲ್ಲಿ ಎರಡು ಸರ್ಕಾರಿ ಕಾರ್ಯಕ್ರಮ ಬಿಟ್ಟರೆ ಮತ್ತಾವ ಕಾರ್ಯಕ್ರಮಗಳು ನಡೆಯಲಿಲ್ಲ. ಹೀಗಾಗಿ, ಹಾಕಿದ ಐದು ಕೋಟಿ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಯಿತು. ಧಾರವಾಡದಲ್ಲಿ ಸಂಗೀತ, ನಾಟಕಕ್ಕೆ ಖಾಸಗಿಯಾಗಿರುವ ಸೃಜನಾ ಬಿಟ್ಟರೆ ಮತ್ತೊಂದಿಲ್ಲ ಎನ್ನುತ್ತಾರೆ ಕುಲಕರ್ಣಿ.ಸಾಂಸ್ಕೃತಿಕವಾಗಿ ಗಟ್ಟಿಯಾಗಿರುವ ಧಾರವಾಡ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಶ್ವತವಾಗಿ ತನ್ನ ಹೆಸರು ಅಚ್ಚಳಿಯದಂತೆ ಉಳಿಸಲು ರಾಜ್ಯ ಸರ್ಕಾರ ಧಾರವಾಡಕ್ಕೆ ಮತ್ತಷ್ಟು ಆರ್ಥಿಕವಾದ ಬೆಂಬಲ ನೀಡುವ ಅಗತ್ಯವಿದೆ ಎನ್ನುವುದು ಧಾರವಾಡದ ಸಾಹಿತಿಗಳ, ಕಲೆಗಾರರ, ಸಂಗೀತಗಾರರ ಆಶಯವಾಗಿದೆ.