ಬಹುದಿನಗಳ ಬೇಡಿಕೆಯಾಗಿದ್ದ ಧಾರವಾಡಕ್ಕೊಂದು ನಗರಪಾಲಿಕೆ, ಹುಬ್ಬಳ್ಳಿ ನಗರಕ್ಕೊಂದು ಪಾಲಿಕೆ?

| Published : Jan 02 2025, 07:32 AM IST

Janata Curfew Vidhansoudha
ಬಹುದಿನಗಳ ಬೇಡಿಕೆಯಾಗಿದ್ದ ಧಾರವಾಡಕ್ಕೊಂದು ನಗರಪಾಲಿಕೆ, ಹುಬ್ಬಳ್ಳಿ ನಗರಕ್ಕೊಂದು ಪಾಲಿಕೆ?
Share this Article
  • FB
  • TW
  • Linkdin
  • Email

ಸಾರಾಂಶ

ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ ಮತ್ತು ಧಾರವಾಡ ಮಹಾ ನಗರ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚಿಸುವ ಕುರಿತು ಗುರು ವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರು : ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ ಮತ್ತು ಧಾರವಾಡ ಮಹಾ ನಗರ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚಿಸುವ ಕುರಿತು ಗುರು ವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವಿಭಜನೆಯಾಗಬೇಕೆಂದು 2014 ರಲ್ಲೇ ಕೂಗೆದ್ದಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಈ ಕುರಿತ ಆಗ್ರಹ ಗಟ್ಟಿಯಾಗಿ ಕೇಳಿಬರುತ್ತಿದೆ. ಸದ್ಯ ಧಾರವಾಡದ ಜನಸಂಖ್ಯೆ 6.5 ಲಕ್ಷ ದಾಟಿದೆ.

ಪಾಲಿಕೆ ರಚನೆಗೆ 3.5 ಲಕ್ಷ ಜನಸಂಖ್ಯೆ ಇದ್ದರೂ ಸಾಕು. ಹೀಗಾಗಿ ಪ್ರತ್ಯೇಕ ಪಾಲಿಕೆ ರಚನೆ ಮಾಡಿ ಎಂಬ ಬೇಡಿಕೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರಿಂದಲೂ ಕೇಳಿಬರುತ್ತಿತ್ತು. ಈ ಬಹುಕಾಲದ ಬೇಡಿಕೆಗೆ ಇದೀಗ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಧಾರವಾಡಕ್ಕಿದೆ ಪ್ರತ್ಯೇಕ ಪಾಲಿಕೆಯ ಮಾನದಂಡ; ಎಚ್‌.ಕೆ. ಪಾಟೀಲ ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದ ಸರ್ಕಾರ

ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ವಿಷಯವಾಗಿ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ ದೊರಕಿದ್ದು, ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಪ್ರತ್ಯೇಕ ಮಹಾನಗರ ಪಾಲಿಕೆಗೆ ಆಸಕ್ತಿ ತೋರದೇ ಇದ್ದಲ್ಲಿ ಹೈಕೋರ್ಚ್‌ ಮಾದರಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಹೋರಾಟ ವೇದಿಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆದಿಯಾಗಿ ಧಾರವಾಡ ಶಾಸಕರಿಗೆ ಎಚ್ಚರಿಸಿತ್ತು.

ಧಾರವಾಡ ಪ್ರತ್ಯೇಕ ಪಾಲಿಕೆಗೆ ಇರುವ ಮಾನದಂಡಗಳ ವಿಷಯವಾಗಿ ಮಾಜಿ ಸಚಿವರಾದ ಎಚ್‌.ಕೆ. ಪಾಟೀಲ ಅವರು ಕೇಳಿದ ಪ್ರಶ್ನೆಗೆ ಸರ್ಕಾರದ ಪರವಾಗಿ ನಗರಾಭಿವೃದ್ಧಿ ಸಚಿವರು ಉತ್ತರ ನೀಡಿದ್ದಾರೆ. ಆರ್‌ಟಿಐ ಮೂಲಕ ಈ ಮಾಹಿತಿ ವೇದಿಕೆಗೆ ದೊರಕಿದೆ. ಮೂರು ಲಕ್ಷಕ್ಕಿಂತ ಕಡಿಮೆ ಇಲ್ಲದ ಜನಸಂಖ್ಯೆ ಇರಬೇಕು. ಜನಸಾಂದ್ರತೆಯು ಒಂದು ಚದರ ಕಿಲೋಮೀಟರ್‌ ವಿಸ್ತ್ರೀರ್ಣದಲ್ಲಿ 3 ಸಾವಿರಕ್ಕಿಂತ ಕಡಿಮೆ ಇಲ್ಲದ ನಿವಾಸಿಗಳು ಇರಬೇಕು. ಆದಾಯ ಉತ್ಪಾದನೆಯು ವಾರ್ಷಿಕ .6 ಕೋಟಿಗಳಿಗಿಂತ ಹೆಚ್ಚಿರಬೇಕು ಎಂಬೆಲ್ಲ ಮಾನದಂಡಗಳಿವೆ. ಜನಸಂಖ್ಯೆ, ತೆರಿಗೆ ಆದಾಯ ಸೇರಿದಂತೆ ಧಾರವಾಡ ಎಲ್ಲ ರೀತಿಯ ಮಾನದಂಡಗಳಲ್ಲೂ ಪೂರೈಸುತ್ತದೆ. ಇಷ್ಟುದಿನಗಳ ಕಾಲ ಸ್ಥಳೀಯ ಜನಪ್ರತಿನಿಧಿಗಳು ಮಾನದಂಡದ ಬಗ್ಗೆ ಮಾತನಾಡುತ್ತಿದ್ದು, ಈಗ ಸರ್ಕಾರವೇ ಅದನ್ನು ಸ್ಪಷ್ಟಪಡಿಸಿದೆ. ಆದ್ದರಿಂದ ಇನ್ನಾದರೂ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಗೆ ಆಸಕ್ತಿ ತೋರಬೇಕೆಂದು ವೇದಿಕೆಯ ಸದಸ್ಯರಾದ ರವಿ ಮಾಳಗೇರ, ಎಂ.ಬಿ. ಕಟ್ಟಿ, ಶಂಕರ ನೀರಾವರಿ, ವಸಂತ ಅರ್ಕಾಚಾರ, ವೀರಣ್ಣ ಕಮ್ಮಾರ, ಜಿ.ಎಸ್‌. ಬ್ಯಾಡಗಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದರು.

ಈ ಮಾನದಂಡಗಳೊಂದಿಗೆ ಸ್ಥಳೀಯ ಸಾರ್ವಜನಿಕರ ಹಾಗೂ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯ ಪಡೆದು ಆಡಳಿತ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ಸಾಧಕ-ಬಾಧಕಗಳನ್ನು ಕುಲಂಕಷವಾಗಿ ಪರಿಶೀಲಿಸಲಾಗುವುದು ಎಂದೂ ನಗರಾಭಿವೃದ್ಧಿ ಸಚಿವರು ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ. ಈಗ ಮಾನದಂಡ ಪೂರೈಸಿದ್ದು ಸಾರ್ವಜನಿಕರ ಒತ್ತಾಸೆಯೂ ಇದಾಗಿದೆ. ಆದರೆ, ಜನಪ್ರತಿನಿಧಿಗಳ ಅದರಲ್ಲೂ ಪ್ರಮುಖವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ ಪಾತ್ರ ಜಾಸ್ತಿ ಇದೆ. ಜೊತೆಗೆ ಮೇಯರ್‌ ಈರೇಶ ಅಂಚಟಗೇರಿ ಅವರು ಮಹಾನಗರ ಪಾಲಿಕೆಯ ಸದಸ್ಯರೊಂದಿಗೆ ಚರ್ಚಿಸಿ ಠರಾವು ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಇದು ಪ್ರಕ್ರಿಯೆ. ಆದರೆ, ಸ್ಥಳೀಯ ಜನಪ್ರತಿನಿಧಿಗಳು ಈ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ತಮ್ಮದೇ ರಾಜಕೀಯದಲ್ಲಿ ತೊಡಗಿದ್ದಾರೆ. ಸಾರ್ವಜನಿಕರ ಆಶೋತ್ತರಗಳಿಗೆ ಬೆಲೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇನ್ಮುಂದೆ ನಡೆಯುವ ಪ್ರತಿ ಸಭೆ-ಸಮಾವೇಶದಲ್ಲಿ ಅವರನ್ನು ಪ್ರಶ್ನಿಸಲಾಗುವುದು. ಜೊತೆಗೆ ಹೈಕೋರ್ಚ್‌ ಮಾದರಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದರು.

ಮಾಜಿ ಸಿಎಂ ಯಡಿಯೂರಪ್ಪನವರ ಇಚ್ಛಾಶಕ್ತಿ ಫಲವಾಗಿ ಒಂದೇ ರಾತ್ರಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಾಗಿ ಇಡೀ ಊರೇ ಅಭಿವೃದ್ಧಿಯಾಯಿತು. ಅದೇ ರೀತಿ ನಮ್ಮ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕಿದೆ. ಇಲ್ಲದೇ ಹೋದಲ್ಲಿ ಅವರು ಭಾಗವಹಿಸುವ ಕಾರ‍್ಯಕ್ರಮಗಳಲ್ಲಿ ಕಪ್ಪು ಬಟ್ಟೆತೋರಿಸಿ ಪ್ರತಿಭಟಿಸುವ ಚಿಂತನೆಯೂ ಇದೆ ಎಂದು ಎಚ್ಚರಿಸಿದ್ದರು