ದಿಕ್ಕು-ದೆಸೆ ಇಲ್ಲದ ಕ್ಷೇತ್ರವಾಗಿ ಧಾರವಾಡ ಗ್ರಾಮೀಣ: ಮಾಜಿ ಅಮೃತ ಶಾಸಕ ದೇಸಾಯಿ ಆರೋಪ

| Published : Feb 13 2024, 12:45 AM IST

ದಿಕ್ಕು-ದೆಸೆ ಇಲ್ಲದ ಕ್ಷೇತ್ರವಾಗಿ ಧಾರವಾಡ ಗ್ರಾಮೀಣ: ಮಾಜಿ ಅಮೃತ ಶಾಸಕ ದೇಸಾಯಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಧಿಕಾರಿಗಳು ಲಗಾಮು ಇಲ್ಲದ ಕುದುರೆಯಂತಾಗಿದ್ದು, ರೈತರ ಸಂಕಷ್ಟಗಳನ್ನು ಯಾರು ಕೇಳುವವರು ಎಂದು ಮಾಜಿ ಶಾಸಕ ದೇಸಾಯಿ ಪ್ರಶ್ನಿಸಿದರು.

ಧಾರವಾಡ: ಗ್ರಾಮೀಣ ವಿಧಾನಸಭಾ ಕ್ಷೇತ್ರ ದಿಕ್ಕು -ದೆಸೆ ಇಲ್ಲದ ಕ್ಷೇತ್ರವಾಗಿದ್ದು, ಬರುವ ದಿನಗಳಲ್ಲಿ ಕ್ಷೇತ್ರದ ಜನರು ಇನ್ನಷ್ಟು ಬರಗಾಲದ ಸಂಕಷ್ಟ ಅನುಭವಿಸಬೇಕಾದೀತು ಎಂದು ಮಾಜಿ ಶಾಸಕ ಅಮೃತ ದೇಸಾಯಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಟ್ಟಿ, ಮಾಧನಬಾವಿ, ಕರಡಿಗುಡ್ಡ, ಉಪ್ಪಿನ ಬೆಟಗೇರಿ ಸೇರಿದಂತೆ ಗ್ರಾಮೀಣದಲ್ಲಿ ಜನ-ಜಾನುವಾರುಗಳು ಕುಡಿಯುವ ನೀರು, ಮೇವಿಗಾಗಿ ಪರದಾಡುತ್ತಿದ್ದಾರೆ. ಬರ ನೀಗಿಸುವ ಯಾವುದೇ ಯೋಜನೆಗಳು ಜಾರಿಯಾಗಿಲ್ಲ. ಅಧಿಕಾರಿಗಳು ಲಗಾಮು ಇಲ್ಲದ ಕುದುರೆಯಂತಾಗಿದ್ದು, ರೈತರ ಸಂಕಷ್ಟಗಳನ್ನು ಯಾರು ಕೇಳುವವರು ಎಂದು ಪ್ರಶ್ನಿಸಿದರು.

ಶಾಸಕರ ಪರವಾಗಿ ಮತ್ತಾರೋ ಭೂಮಿ ಪೂಜೆ ಮಾಡುತ್ತಾರೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳಿಗೆ ಯಾರ್‍ಯಾರೋ ಭೂಮಿಪೂಜೆ ಮಾಡುತ್ತಿದ್ದಾರೆ. ಗ್ರಾಮೀಣದಲ್ಲಿ ವಿದ್ಯುತ್‌ ಪ್ರಸಾರ ಕೈ ತಪ್ಪಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಉಸ್ತುವಾರಿ ಸಚಿವರು ಶಾಸಕರ ಭಯಕ್ಕೆ ಹೆದರಿ ಗ್ರಾಮೀಣ ಕ್ಷೇತ್ರಕ್ಕೆ ಹಾಯುತ್ತಿಲ್ಲ. ಬರೀ ಸಭೆಗಳನ್ನು ನಡೆಸುತ್ತಿದ್ದಾರೆಯೇ ಹೊರತು ಯಾವ ಕ್ಷೇತ್ರಕ್ಕೂ ಸಚಿವ ಲಾಡ್‌ ಅವರು ಭೇಟಿ ನೀಡುತ್ತಿಲ್ಲ. ಹೀಗಾಗಿ, ತಳಮಟ್ಟದ ಸಮಸ್ಯೆಗಳು ಸಚಿವರ ಗಮನಕ್ಕೆ ಬರುತ್ತಿಲ್ಲ. ಅಧಿಕಾರಿಗಳಿಂದ ಜನರಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ದೇಸಾಯಿ ಆರೋಪಿಸಿದರು.

ಬಿಜೆಪಿ ಆಡಳಿತದಲ್ಲಿ ತುಪರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ನಂತರ ಯೋಜನೆ ಸ್ಥಗಿತಗೊಂಡಿದೆ. ರೈತರ ಹಿತದೃಷ್ಟಿಯಿಂದ ಯೋಜನೆಗೆ ಬೇಗ ಚಾಲನೆ ನೀಡಬೇಕು. ಗ್ರಾಮೀಣ ಶಾಸಕರು, ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರದ ಕೆಲಸ-ಕಾರ್ಯಗಳ ಬಗ್ಗೆ ಚಿಂತನೆ ಮಾಡದೇ ಬೇರೆ ಕ್ಷೇತ್ರಗಳತ್ತ ಹೆಚ್ಚು ಒಲವು ತೋರುತ್ತಿರುವುದು ಏತಕ್ಕೆ ಎಂದು ಪ್ರಶ್ನಿಸಿದರು.