ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯ ಅಂತಿಮ ಅಧಿಸೂಚನೆ ಹೊರಡಿಸಲು ಜು. 30 ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಈಗ ಮತ್ತೊಂದು ವಾರದ ಕಾಲ ಅಂತಿಮ ಗಡುವು ವಿಸ್ತರಿಸಿ, ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಹೋರಾಟಗಾರರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಧಾರವಾಡ:

ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಯ ಅಂತಿಮ ಅಧಿಸೂಚನೆ ಹೊರಡಿಸಲು ''''''''ಧಾರವಾಡ ಪ್ರತ್ಯೇಕ ಪಾಲಿಕೆ ವೇದಿಕೆ ಹೋರಾಟ ಸಮಿತಿ'' ಇದೀಗ ಮತ್ತೊಂದು ಸಭೆ ನಡೆಸಿ, ಸರ್ಕಾರಕ್ಕೆ ಬಿಗಿಪಟ್ಟು ಹಿಡಿದಿದೆ.

ಅಂತಿಮ ಅಧಿಸೂಚನೆ ಹೊರಡಿಸಲು ಜು. 30 ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಈಗ ಮತ್ತೊಂದು ವಾರದ ಕಾಲ ಅಂತಿಮ ಗಡುವು ವಿಸ್ತರಿಸಿ, ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಪ್ರತ್ಯೇಕ ಪಾಲಿಕೆಗೆ ಯಾವುದೇ ಕಾನೂನು ಅಡೆ-ತಡೆಗಳಿಲ್ಲ. ಕೇವಲ ಸಣ್ಣ, ಪುಟ್ಟ ತಾಂತ್ರಿಕ ಅಡತಡೆ ಇರಬಹುದು. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಅಧಿಸೂಚನೆ ಹೊರಡಿಸಬಹುದು. ಇಲ್ಲದ್ದಿದ್ದರೆ ಬಿಸಿ ಮುಟ್ಟಿಸುವುದೊಂದೆ ಹಾದಿ ಎಂದು ಹೋರಾಟಗಾರ ಬಿ.ಡಿ. ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಿದೆ.

ಜನಾಗ್ರಹದ ಹೋರಾಟ ಜೀವಂತವಾಗಿಡಲು ಮತ್ತು ಸರ್ಕಾರದ ಕಣ್ಣು ತೆರೆಸಲು ಸಮಿತಿಯು, ಹೋರಾಟದ ಹಾದಿ ತುಳಿಯಲು ತೀರ್ಮಾನಿಸಿದೆ. ಭಾನುವಾರ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ. ಆ. 4ರಂದು ಬೆಳಗ್ಗೆ 10ಕ್ಕೆ ಧಾರವಾಡ ಪಾಲಿಕೆ ಕಚೇರಿ ಎದುರು ''''''''ಸತ್ಯಪ್ರತಿಪಾದನೆ ಸತ್ಯಾಗ್ರಹ'''''''' ನಡೆಸುವ ನಂತರ ಬೃಹತ್ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವಂತೆ ತಿರ್ಮಾನಿಸಿದೆ.

ಈ ಹೋರಾಟವು ಪಕ್ಷಾತೀತ ಹಾಗೂ ಜಾತ್ಯತೀತವಾಗಿದ್ದು, ನಗರದ ಎಲ್ಲ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಬೆಂಬಲಿಸಲು ಸಭೆಯಲ್ಲಿ ಮನವಿ ಮಾಡಲಾಗಿದೆ.

ಸಭೆಯಲ್ಲಿ ವೆಂಕಟೇಶ ಮಾಚಕನೂರ, ಮಹಾದೇವ ಹೊರಟ್ಟಿ, ಗುರುರಾಜ ಹುಣಸಿಮರದ, ವಿಠ್ಠಲ್‌ ಕಮ್ಮಾರ, ಎಸ್.ಸಿ. ನೀರಾವರಿ, ಲಕ್ಷ್ಮಣ ಬಕ್ಕಾಯಿ, ಎಚ್.ಎಸ್. ಮಿಟ್ಟಲಕೋಡ, ಮುಖೇಶ ಗೌಡ, ರಸಾಳಕರ, ವಸಂತ ಅರ್ಕಚಾರಿ, ಶಾರುಖ್ ಖುಲದಾಸ್ ಸೇರಿ ಅನೇಕರು ಇದ್ದರು.

ಸರ್ಕಾರವು ಈ ವಾರದ ಗಡುವಿನೊಳಗೆ ಪ್ರತ್ಯೇಕ ಪಾಲಿಕೆ ಅಂತಿಮ ಅಧಿಸೂಚನೆ ಹೊರಡಿಸದಿದ್ದರೆ, ಭವಿಷ್ಯದಲ್ಲಿ ಹೋರಾಟದ ಸ್ವರೂಪವನ್ನೇ ಬದಲಾಯಿಸಿ ತೀವ್ರ ಸ್ವರೂಪದ ಚಳವಳಿ ರೂಪಿಸಲು ಸಮಿತಿ ಸಜ್ಜಾಗಿದೆ. ಧಾರವಾಡದ ಹಿತಾಸಕ್ತಿಗಾಗಿ ನಡೆಯುವ ಈ ಕಾದಾಟಕ್ಕೆ ಮತ್ತೊಮ್ಮೆ ಸಂಘ-ಸಂಸ್ಥೆಗಳು ಸಾರ್ವಜನಿಕರ ಕೂಡ ಬೆಂಬಲಿಸಲು ಕೋರಿದೆ.