ಧಾರವಾಡ:

ಹು-ಧಾ ಮಹಾನಗರ ಪಾಲಿಕೆಯಿಂದ ಪ್ರತ್ಯೇಕಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ ವರ್ಷ ಗತಿಸಿದರೂ, ರಾಜಕೀಯ ಬೆಳವಣಿಗೆಗಳಿಂದಾಗಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾನ್ಯತೆಯು ಬರೀ ಘೋಷಣೆಯಾಗಿಯೇ ಉಳಿದಿದೆ.

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾನ್ಯತೆ ದೊರೆತರೆ, ಹೆಚ್ಚಿನ ಅನುದಾನ ಪಡೆದು ಹುಬ್ಬಳ್ಳಿಗೆ ಸಮನಾಗಿ ಅಭಿವೃದ್ಧಿಗೊಳಿಸಬಹುದು, ಅಧಿಕಾರ ವಿಕೇಂದ್ರೀಕರಣದಿಂದ ಧಾರವಾಡ ಜನತೆಯ ಕೆಲಸ-ಕಾರ್ಯಗಳು ಸರಳ, ಸಮಯ ಮಿತಿಯಲ್ಲಾಗುತ್ತವೆ ಎಂಬುದಾಗಿತ್ತು. ಆದರೀಗ ತದ್ವಿರುದ್ಧ ಬೆಳವಣಿಗೆ ಆಗುತ್ತಿದೆ. ಹು-ಧಾ ಮಹಾನಗರ ಪಾಲಿಕೆ ಒಟ್ಟಾಗಿದ್ದರೆ ಮಾತ್ರ ಹೆಚ್ಚಿನ ಅನುದಾನ ಬರಲಿದೆ. ಹೀಗಾಗಿ ಧಾರವಾಡ ನಗರವನ್ನು ಪ್ರತ್ಯೇಕಗೊಳಿಸುವುದು ಬೇಡ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಿಂದ ಬರುತ್ತಿದ್ದು, ಧಾರವಾಡ ಜನತೆಯ ಆತಂಕಕ್ಕೆ ಕಾರಣವಾಗಿದೆ.

ಮೊದಲಿನಿಂದಲೂ ಅಡ್ಡಿ:

ತಕ್ಕಮಟ್ಟಿಗೆ ಜನಸಂಖ್ಯೆ ಇಲ್ಲ, ತೆರಿಗೆ ಸಂಗ್ರಹ ಕಡಿಮೆ, ವ್ಯಾಪ್ತಿ ಪ್ರದೇಶ ಸೇರಿದಂತೆ ಮಾನದಂಡ ವಿಷಯವಾಗಿ ಪ್ರತ್ಯೇಕ ಪಾಲಿಕೆಗೆ ಅನೇಕ ಸುಳ್ಳಿನಿಂದ ಶುರುವಾದ ರಾಜಕೀಯ ಅಡ್ಡಗಾಲು, ತೀವ್ರ ಹೋರಾಟದ ಫಲವಾಗಿ 2024ರ ಜ. 22ರಂದು ರಾಜ್ಯ ಸರ್ಕಾರದ ಪೌರಾಡಳಿತ ಇಲಾಖೆಯು ಪ್ರತ್ಯೇಕ ಪಾಲಿಕೆಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ನಾವೇ ಪ್ರತ್ಯೇಕ ಪಾಲಿಕೆ ತಂದಿದ್ದು ಎನ್ನುವ ರೀತಿಯಲ್ಲಿ ಧಾರವಾಡದಲ್ಲಿ ಆಗ ಬ್ಯಾನರ್‌ ಹಾಕಿದ ಮುಖಂಡರುಗಳೇ ಇಂದು, ಅನುದಾನದ ವಿಷಯದ ಅಡಿ ಹು-ಧಾ ಮಹಾನಗರ ಪಾಲಿಕೆ ಒಡೆಯುವುದೇ ಬೇಡ ಎನ್ನುತ್ತಿರುವುದು ಹೋರಾಟಗಾರರಿಗೆ ಹಾಗೂ ಧಾರವಾಡ ಜನತೆಗೆ ನುಂಗಲಾರದ ತುತ್ತಾಗಿದೆ.


ಇನ್ನು, ಪ್ರತ್ಯೇಕ ಪಾಲಿಕೆಗೆ ಬಿಜೆಪಿ, ಕಾಂಗ್ರೆಸ್‌ ಎನ್ನದೇ ಸರ್ವ ಪಕ್ಷಗಳು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿ ಅಧಿಸೂಚನೆ ಸಹ ಮಾಡಲಾಗಿದೆ. ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ತಿಂಗಳುಗಳೇ ಕಳೆದಿವೆ. ವಿಧಾನಸಭೆ ಒಪ್ಪಿಗೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆಯೋ? ಇಲ್ಲವೋ? ಎಂಬುದು ಹೋರಾಟಗಾರರಿಗೆ ಹಾಗೂ ಜನತೆಗೆ ಗೊತ್ತಾಗುತ್ತಿಲ್ಲ.

ಸಿಎಂಗೆ ಪತ್ರ:

ಏತನ್ಮಧ್ಯೆ, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಪದಾಧಿಕಾರಿಗಳು ಪ್ರತ್ಯೇಕ ಪಾಲಿಕೆ ವಿಧೇಯಕಕ್ಕೆ ರಾಜ್ಯಪಾಲರ ಒಪ್ಪಿಗೆ ಪಡೆದು ಸರ್ಕಾರಿ ಪ್ರಕಟಣೆ ಹೊರಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹಾಗೂ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಜನರ ಒತ್ತಾಸೆಗೆ ಇಷ್ಟೊಂದು ಸುದೀರ್ಘ ವಿಳಂಬ ಏತಕ್ಕೆ? ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ. ಈ ಹಿಂದೆ ಹು-ಧಾ ಮಹಾನಗರ ಪಾಲಿಕೆಗೆ ಬಂದ ಅನುದಾನ ಧಾರವಾಡಕ್ಕೆ ಸರಿ ಪ್ರಮಾಣದಲ್ಲಿ ಹಂಚಿಕೆಯಾಗುತ್ತಿಲ್ಲ. ಇದರಿಂದಲೇ ಪ್ರತ್ಯೇಕ ಪಾಲಿಕೆ ಕೂಗು ಎದ್ದಿತ್ತು ಎಂಬುದು ಗೊತ್ತಿದ್ದರೂ ಈಗ ಒಗ್ಗಟ್ಟಾಗಿದ್ದರೆ ದೊಡ್ಡ ಮೊತ್ತದ ಅನುದಾನ ಬರಲಿದೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಎಂದು ಧಾರವಾಡ ನಾಗರಿಕರ ಪ್ರಶ್ನೆ.

ಯೂಟರ್ನ್:

ಈ ಹಿಂದೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತ್ಯೇಕ ಪಾಲಿಕೆಗೆ ಒಪ್ಪಿಗೆ ಸೂಚಿಸಿ ಸಹಿ ಹಾಕಿದ ಪಾಲಿಕೆ ಸದಸ್ಯರು, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಹು-ಧಾ ಮಹಾನಗರ ಪಾಲಿಕೆಯೇ ಮುಂದುವರಿಯಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಧಾರವಾಡ ಜನತೆಗೆ ಮತ್ತಷ್ಟು ಆಘಾತ ತಂದಿವೆ. ಹೋರಾಟ ನಿಶ್ಚಿತ...

ತೀವ್ರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ, ಪ್ರತ್ಯೇಕ ಪಾಲಿಕೆ ವಿಧೇಯಕಕ್ಕೆ ರಾಜ್ಯಪಾಲರ ಒಪ್ಪಿಗೆ ಪಡೆದು ಸರ್ಕಾರಿ ಪ್ರಕಟಣೆ ಹೊರಡಿಸುವುದು ಬಾಕಿ ಉಳಿದಿದೆ. ಈ ಮಧ್ಯೆ ತದ್ವಿರುದ್ಧ ಬೆಳವಣಿಗೆ ನಡೆದಿವೆ ಎನ್ನಲಾಗುತ್ತಿದ್ದು, ಹು-ಧಾ ಅವಳಿ ನಗರ ಒಗ್ಗಟ್ಟಾಗಿದ್ದರೆ ಹೆಚ್ಚಿನ ಅನುದಾನ ದೊರೆಯಲಿದೆ ಎಂಬ ನಾಟಕೀಯ ಮಾತಿಗಾಗಿ ಪ್ರತ್ಯೇಕ ಪಾಲಿಕೆ ತಪ್ಪಿಸುವುದು ಬೇಡ. ಒಂದು ವೇಳೆ ತಪ್ಪಿದರೆ ದೊಡ್ಡ ಹೋರಾಟ ಮಾತ್ರ ನಿಶ್ಚಿತ ಎನ್ನುತ್ತಾರೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯ ಮನೋಜ ಪಾಟೀಲ, ಎಂ.ಬಿ. ಕಟ್ಟಿ, ರು.ಮ. ಷಡಕ್ಷರಯ್ಯ, ಜಿ.ಎಸ್‌.ಬ್ಯಾಡಗಿ.