ಚಳಿಗೆ ನಡುಗಿದ ಧಾರವಾಡ!

| Published : Nov 18 2025, 01:00 AM IST

ಸಾರಾಂಶ

ಮೈಕೊರೆಯುವ ಚಳಿಯಿಂದಾಗಿ ಮಕ್ಕಳಾದಿಯಾಗಿ ಎಲ್ಲರಿಗೂ ಹೊದಿಕೆ ಹೊದ್ದು ಬೆಚ್ಚಗಿರಬೇಕು ಎನಿಸುತ್ತಿದೆ. ಸಂಜೆ 5 ಗಂಟೆ ಆಗುವುದೇ ತಡ ಸ್ವೆಟರ್‌, ಜಾಕೆಟ್‌ ಅಂತಹ ಬೆಚ್ಚನೆಯ ವಸ್ತುಗಳನ್ನು ಧರಿಸಿ, ಕಿವಿ ಮುಚ್ಚಿಕೊಂಡು ಮನೆಯಲ್ಲಿ ಮುದ್ದೆಯಾಗಿ ಕೂರುವಷ್ಟು ಚಳಿ ಎಲ್ಲರನ್ನೂ ಕಾಡುತ್ತಿದೆ.

ಬಸವರಾಜ ಹಿರೇಮಠ

ಧಾರವಾಡ:

ಮಧ್ಯಾಹ್ನದ ಬಿಸಿಲಿನಲ್ಲೂ ಚಳಿ ಚಳಿ ಅನುಭವ! ಇನ್ನು, ಬೆಳಗ್ಗೆ ಹಾಗೂ ಸಂಜೆ ಹೊತ್ತಂತೂ ಮೈಕೊರೆಯುವ ಚಳಿ ಮತ್ತು ಶೀತ ಗಾಳಿಗೆ ಧಾರವಾಡ ಜನರು ಅಕ್ಷರಶಃ ಮುದ್ದೆಯಾಗಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ತೀವ್ರ ಚಳಿ ಗಾಳಿ ಹಾಗೂ ಥಂಡಿ ವಾತಾವರಣ ಸೃಷ್ಟಿಯಾಗಿದೆ. ಹವಾಮಾನ ಇಲಾಖೆ ಅಂಕಿ-ಅಂಶಗಳ ಪ್ರಕಾರ ಬೀದರ (10 ಡಿಗ್ರಿ) ವಿಜಯಪುರ (11.6 ಡಿಗ್ರಿ) ಹೊರತುಪಡಿಸಿದರೆ ಅತಿ ಕಡಿಮೆ (11.8 ಡಿಗ್ರಿ ಸೆಲ್ಸಿಯಸ್‌) ತಾಪಮಾನ ದಾಖಲಾಗಿದ್ದು ಧಾರವಾಡ ಜಿಲ್ಲೆಯಲ್ಲಿ.

ಮೈಕೊರೆಯುವ ಚಳಿಯಿಂದಾಗಿ ಮಕ್ಕಳಾದಿಯಾಗಿ ಎಲ್ಲರಿಗೂ ಹೊದಿಕೆ ಹೊದ್ದು ಬೆಚ್ಚಗಿರಬೇಕು ಎನಿಸುತ್ತಿದೆ. ಸಂಜೆ 5 ಗಂಟೆ ಆಗುವುದೇ ತಡ ಸ್ವೆಟರ್‌, ಜಾಕೆಟ್‌ ಅಂತಹ ಬೆಚ್ಚನೆಯ ವಸ್ತುಗಳನ್ನು ಧರಿಸಿ, ಕಿವಿ ಮುಚ್ಚಿಕೊಂಡು ಮನೆಯಲ್ಲಿ ಮುದ್ದೆಯಾಗಿ ಕೂರುವಷ್ಟು ಚಳಿ ಎಲ್ಲರನ್ನೂ ಕಾಡುತ್ತಿದೆ. ಕೆಲವರಂತೂ ಮನೆ ಎದುರು ಹಾಗೂ ಓಣಿಗಳಲ್ಲಿ ಕಟ್ಟಿಗೆ ಗೂಡಿಸಿಕೊಂಡು ಬೆಂಕಿ ಹಚ್ಚಿಕೊಂಡು ಕಾಯಿಸಿಕೊಂಡು ಕೂರುತ್ತಿದ್ದಾರೆ. ಬಿಸಿ ಬಿಸಿ ಸೂಪ್‌, ಚಹಾ-ಕಾಫಿ, ಬಿಸಿ ಆಹಾರ ಮಾತ್ರ ಸೇವಿಸುವಂತಾಗಿದೆ.

ವಾಯು ವಿಹಾರಕ್ಕೂ ಬ್ರೇಕ್:

ಥಂಡಿಯ ವಾತಾರವಣಕ್ಕೆ ಮಕ್ಕಳು ಹಾಗೂ ವಯೋವೃದ್ಧರಂತೂ ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ. ಬೆಳಗಿನ ಎಳೆಯ ಬಿಸಿಲು ಬೀಳುವ ವರೆಗೂ ಮನೆ ಬಿಟ್ಟು ಹೊರ ಹೋಗದ ಸ್ಥಿತಿ. ಎಂತಹ ಮಳೆ ಇದ್ದರೂ ವಾಯುವಿಹಾರಕ್ಕೆ ಹೋಗುತ್ತಿದ್ದವರು ತಮ್ಮ ಸಮಯ ಬದಲಿಸಿದ್ದಾರೆ. ಬೆಳಗ್ಗೆ 6ಕ್ಕೆ ಹೋಗುವವರು 8ರ ನಂತರ ಸ್ವೆಟರ್‌ ಸಮೇತ ಹೊರಟಿದ್ದಾರೆ. ಕೆಲವರಂತೂ ಚಳಿಯ ಗಾಳಿಗಾಗಿ ವಾಯುವಿಹಾರದ ಬದಲು ಮನೆಯಲ್ಲಿಯೇ ದೈಹಿಕ ವ್ಯಾಯಾಮಕ್ಕೆ ತೃಪ್ತಿಪಡುತ್ತಿದ್ದಾರೆ.

ಧೂಳು, ಅಲರ್ಜಿ:

ನಿರಂತರ ಮಳೆಯಿಂದಾಗಿ ಧಾರವಾಡ ನಗರ ಹಾಗೂ ಜಿಲ್ಲೆಯಲ್ಲಿ ಯಾವ ರಸ್ತೆಗಳು ಸರಿ ಇಲ್ಲ. ತಗ್ಗು-ಗುಂಡಿಗಳಿಗೆ ಮಣ್ಣು ಸುರಿದ ಕಾರಣ ಚಳಿ ಮತ್ತು ಗಾಳಿಯ ಜತೆಗೆ ರಸ್ತೆಯಲ್ಲಿ ವಿಪರೀತ ಧೂಳು ಏಳುತ್ತಿದೆ. ಜತೆಗೆ ನಿರ್ಜಲೀಕರಣದಿಂದ ಸಾಕಷ್ಟು ಜನರಿಗೆ ಅಲರ್ಜಿ ರೋಗಗಳು ಶುರುವಾಗಿವೆ. ಮಕ್ಕಳಂತೂ ನೆಗಡಿ, ಕಫಕ್ಕೆ ತುತ್ತಾಗುತ್ತಿದ್ದಾರೆ. ವಯೋವೃದ್ಧರಿಗೂ ನಾನಾ ರೀತಿಯ ದೈಹಿಕ ಸಮಸ್ಯೆಗಳು ಕಾಣುತ್ತಿದ್ದು, ಹೃದಯಾಘಾತಗಳಾಗುವ ಸಾಧ್ಯತೆಗಳಿಂದಾಗಿ ಆದಷ್ಟು ಬೆಚ್ಚನೆ ಆಹಾರ, ಬಿಸಿನೀರು ಸೇವಿಸಬೇಕು. ಚಳಿಗಾಲ ಮುಗಿಯುವ ವರೆಗೂ ಬೆಳಗ್ಗೆ 8ರೊಳಗೆ ಸಂಜೆ 7ರ ನಂತರ ಹೊರ ಹೋಗದಂತೆಯೂ ವೈದ್ಯರು ಸಲಹೆ ನೀಡಿದ್ದಾರೆ.

ಹಿಂಗಾರಿಗೆ ಪೂರಕ ಚಳಿ:

2025ರ ಮುಂಗಾರು ಹಿಂಗಾರು ಹಂಗಾಮಿನಲ್ಲಿ ಮಳೆರಾಯನ ಪಾತ್ರ ಸಾಕಷ್ಟಿದೆ. ಮುಂಗಾರು ಹಾಗೂ ಹಿಂಗಾರಿನಲ್ಲೂ ಅತಿವೃಷ್ಟಿ ಸೃಷ್ಟಿಸಿ ದೀಪಾವಳಿಯಲ್ಲೂ ಮಳೆ ಇತ್ತು. ಕೆಲ ದಿನಗಳಿಂದ ವಾತಾವರಣದಲ್ಲಿ ತುಸು ಬದಲಾಗಿದ್ದು, ಮಳೆ ಸರಿದು ಚಳಿಯ ಗಾಳಿ ಶುರುವಾಗಿದೆ. ಕಡಲೆ, ಗೋದಿ, ಜೋಳದಂತಹ ಹಿಂಗಾರು ಬೆಳೆಗೆ ಅತ್ಯುತ್ತಮ ವಾತಾವರಣ ಇದು. ಕಡಲೆ ಹೂ ಬಿಡುತ್ತಿದ್ದು ಚಳಿಯಿಂದ ಬೆಳೆಗಳು ಉತ್ಕೃಷ್ಟವಾಗಿವೆ. ಇದಕ್ಕಿಂತ ಹೆಚ್ಚಾಗಿ ಮಾವಿನ ಗಿಡಗಳು ಹೂ ಬಿಡುವ ಸಮಯ ಇದಾಗಿದ್ದು, ಚಳಿ ಇದ್ದಷ್ಟು ಮಾವು ಅತ್ಯುದ್ಭುತವಾಗಿ ಹೂ ಬಿಡುವ ಪ್ರಕ್ರಿಯೆ ಇನ್ನಷ್ಟೇ ಶುರುವಾಗಲಿದೆ ಎಂದು ಕೃಷಿ ತಜ್ಞರು ಅಭಿಪ್ರಾಯ ಪಡುತ್ತಾರೆ. ಚಳಿಯಿಂದ ರಕ್ಷಣೆ ಇರಲಿ..

ಮಳೆಗಾಲ ಹಾಗೂ ಬೇಸಿಗೆ ಹಂಗಾಮಿಗೆ ಹೋಲಿಸಿದರೆ ಚಳಿಗಾಲದಲ್ಲಿ ರೋಗಗಳು ಕಡಿಮೆ. ಆದರೆ, ಸುರಕ್ಷತಾ ಕ್ರಮ ಕೈಗೊಂಡರೆ ಮಾತ್ರ. ಕಳೆದ ಎರಡ್ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಚಳಿ ತುಸು ಜಾಸ್ತಿ ಇದೆ. ಧೂಳಿನ ವಾತಾವರಣ, ಅತಿಯಾದ ಚಳಿಯಿಂದ ಕಫ, ನೆಗಡಿ ಅಂತಹ ರೋಗಗಳು ಬರುವುದು ಸಾಮಾನ್ಯ. ಮೈ ಕೊರೆಯುವ ಚಳಿಯಿಂದ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಚಳಿಗಾಲವನ್ನು ಆನಂದಿಸುವವರು ಬೆಳಗ್ಗೆ ಹಾಗೂ ಸಂಜೆ ಮಾತ್ರ ಇಡೀ ಮೈ ಪೂರ್ಣ ಮುಚ್ಚುವ ಬಟ್ಟೆ ಧರಿಸಬೇಕು. ಬಿಸಿ-ಬಿಸಿ ಆಹಾರ ಹಾಗೂ ಬಿಸಿ ನೀರು ಸೇವನೆ ಕಡ್ಡಾಯವಾಗಿರಲಿ ಎಂದು ಮಕ್ಕಳ ವೈದ್ಯರಾದ ಡಾ. ರಾಜನ್‌ ದೇಶಪಾಂಡೆ ಸಲಹೆ ನೀಡುತ್ತಾರೆ.