ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಜಿಲ್ಲಾ ಆರೋಗ್ಯಾಧಿಕಾರಿಗಳು ಇಲ್ಲಿನ ತಾಲೂಕು ಆಸ್ಪತ್ರೆಯ ಡಯಾಲಿಸಿಸ್ ರೋಗಿಗಳ ಜತೆ ಚೆಲ್ಲಾಟವಾಡುತ್ತಿದ್ದಾರೇಯೇ ಹೊರತು ಇಲ್ಲಿಗೆ ಬೇಕಾಗುವ ವ್ಯವಸ್ಥೆಗಳನ್ನು ಕಲ್ಪಿಸಲು ಗಮನಹರಿಸುತ್ತಿಲ್ಲ ಎಂದು ಮಾಜಿ ಶಾಸಕ ವಸಂತ ಬಂಗೇರ ಆರೋಪಿಸಿದರು.ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮಂಗಳವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ದಿನೇಶ್ ಶೆಟ್ಟಿ ಎಂಬವರು ಸೋಮವಾರ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರದಲ್ಲಿನ ಅವ್ಯವಸ್ಥೆಗಳನ್ನು ತಿಳಿಸಿ, ಚಿಕಿತ್ಸೆ ಪಡೆಯುತ್ತಿರುವ ಹಲವು ಮಂದಿ ಎಚ್‌ಸಿವಿಯಿಂದ ಬಳಲುತ್ತಿದ್ದಾರೆ ಎಂದು ದೂರಿದ್ದರು. ಈ ಬಗ್ಗೆ ಡಿಎಚ್ಒ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಲಾಗಿತ್ತು. ಅವರು ಮಂಗಳವಾರ ಸಂಜೆ 4.30ರ ವೇಳೆಗೆ ಆಸ್ಪತ್ರೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಡಿಎಚ್‌ಒ ಮಧ್ಯಾಹ್ನವೇ ಯಾರಿಗೂ ತಿಳಿಸದೆ ಆಗಮಿಸಿ ವಾಪಸ್ ಹೋಗಿದ್ದಾರೆ. ಈ ಬಗ್ಗೆ ದೂರವಾಣಿ ಕರೆ ಮಾಡಿ ಕೇಳಿದಾಗ ಡಿಸಿ ಮೀಟಿಂಗ್ ಇದೆ ಎಂದು ತಿಳಿಸಿದರು. ಅವರು ಮಧ್ಯಾಹ್ನ ಆಗಮಿಸುವ ಕುರಿತು ಯಾವುದೇ ಸೂಚನೆ ನೀಡದಿರುವುದು ವಿಪರ್ಯಾಸವಾಗಿದೆ. ಬಳಿಕ ಅವರನ್ನು ಸಂಪರ್ಕಕ್ಕೆ ಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ ಎಂದು ವಸಂತ ಬಂಗೇರ ದೂರಿದರು.
ಸರ್ಕಾರದಿಂದ ಔಷಧಿ ವ್ಯವಸ್ಥೆ: ಡಯಾಲಿಸಿಸ್ ಕೇಂದ್ರದಲ್ಲಿರುವ ಎಸ್‌ಸಿವಿ ಪೀಡಿತ ಮಂದಿ ತಮಗೆ ಬೇಕಾಗಿರುವ 28 ದಿನದ ಮಾತ್ರೆಗಳಿಗೆ 17,500 ರು. ವೆಚ್ಚ ಭರಿಸಬೇಕಾಗುತ್ತದೆ. ಒಟ್ಟು 20 ಮಂದಿ ಎಸ್‌ಸಿವಿ ಪೀಡಿತರಿದ್ದಾರೆ. ನಮಗೆ ಇಷ್ಟೊಂದು ಹಣ ಕೊಟ್ಟು ಔಷಧಿ ಖರೀದಿಸುವ ಸಶಕ್ತರಾಗಿಲ್ಲ. ಆದರೆ ಔಷಧಿ ಸೇವಿಸಲೇ ಬೇಕಿದೆ ಎಂದು ರೋಗಿಗಳು ತಮ್ಮಲ್ಲಿ ಅಳಲು ತೋಡಿಕೊಂಡಿದ್ದಾರೆ. ಸುಮಾರು ಮೂರುವರೆ ಲಕ್ಷ ರು.ಗಳ ಮಾತ್ರೆಯನ್ನು ಬುಧವಾರದಂದು ಸ್ವಂತ ದುಡ್ಡಿನಿಂದ ಖರೀದಿಸಿ ರೋಗಿಗಳಿಗೆ ನೀಡುವುದಾಗಿ ವಸಂತ ಬಂಗೇರ ತಿಳಿಸಿದರು.ಬೆಂಗಳೂರಿನ ರೋಟರಿ ಸಂಸ್ಥೆ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಒಟ್ಟು ಆರು ಡಯಾಲಿಸಿಸ್ ಯಂತ್ರಗಳನ್ನು ಸರಕಾರಿ ಆಸ್ಪತ್ರೆಗೆ ನೀಡುವುದಾಗಿ ತಿಳಿಸಿದ್ದು ಅವರನ್ನು ತಕ್ಷಣ ಸಂಪರ್ಕಿಸಿ ವ್ಯವಸ್ಥೆ ಮಾಡುವುದಾಗಿ ಬಂಗೇರ ತಿಳಿಸಿದರು.