ಮಧ್ಯಾಹ್ನ ಹೆಲಿಕ್ಯಾಪ್ಟರ್ ಮೂಲಕ ಇಲ್ಲಿನ ಕೊಳಗಲ್ ರಸ್ತೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಿ.ಕೆ. ಶಿವಕುಮಾರ್ ಅವರಿಗೆ ನಗರ ಶಾಸಕ ನಾರಾ ಭರತ್ ರೆಡ್ಡಿ, ಗ್ರಾಮೀಣ ಶಾಸಕ ನಾಗೇಂದ್ರ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಸ್ವಾಗತ ಮಾಡಿಕೊಂಡರು.

ಮಂಜುನಾಥ್ ಕೆ.ಎಂ

ಬಳ್ಳಾರಿ: ಬ್ಯಾನರ್ ಗಲಭೆಯಲ್ಲಿ ಮೃತ ಯುವಕ ರಾಜಶೇಖರ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಗರಕ್ಕೆ ಆಗಮಿಸಿದ್ದರಾದರೂ ಇಡೀ ದಿನದ ರಾಜಕೀಯ ಚಟುವಟಿಕೆ ಗಮನಿಸಿದರೆ ಪ್ರಕರಣವನ್ನು ಸಮರ್ಥಿಸಿಕೊಳ್ಳಲೆಂದೇ ಡಿಕೆಶಿ ಬಳ್ಳಾರಿಗೆ ಆಗಮಿಸಿದಂತೆ ಕಂಡು ಬಂತು.

ಮಧ್ಯಾಹ್ನ ಹೆಲಿಕ್ಯಾಪ್ಟರ್ ಮೂಲಕ ಇಲ್ಲಿನ ಕೊಳಗಲ್ ರಸ್ತೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಿ.ಕೆ. ಶಿವಕುಮಾರ್ ಅವರಿಗೆ ನಗರ ಶಾಸಕ ನಾರಾ ಭರತ್ ರೆಡ್ಡಿ, ಗ್ರಾಮೀಣ ಶಾಸಕ ನಾಗೇಂದ್ರ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಸ್ವಾಗತ ಮಾಡಿಕೊಂಡರು. ಅಲ್ಲಿಂದ ನೇರವಾಗಿ ನೂತನ ಜಿಲ್ಲಾಡಳಿತ ಕಚೇರಿಗೆ ತೆರಳಿ ಡಿಸಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಾಲಿಕೆ ಆಯುಕ್ತ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ರಾಯಲ್ ಫೋರ್ಟ್ ಹೋಟೆಲ್‌ಗೆ ಆಗಮಿಸಿದ ಅವರು ಸುದ್ದಿಗೋಷ್ಠಿ ನಡೆಸಿದರಲ್ಲದೆ, ಪ್ರಕರಣದಲ್ಲಿ ನಗರ ಶಾಸಕ ಸೇರಿದಂತೆ ಯಾರದ್ದೂ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಸತ್ಯಶೋಧನಾ ಸಮಿತಿ ವರದಿಯನ್ನು ಬಹಿರಂಗ ಪಡಿಸಿದ ಉಪ ಮುಖ್ಯಮಂತ್ರಿ, ನಗರ ಶಾಸಕ ಭರತ್ ರೆಡ್ಡಿಯವರ ಜನಪ್ರಿಯತೆ ಸಹಿಸಿಕೊಳ್ಳದೇ ಬ್ಯಾನರ್ ಗಲಾಟೆ ಎಬ್ಬಿಸಲಾಗಿದೆ ಎಂದು ತಿಳಿಸಿದರು.

ಸಂಯಮದಿಂದ ವರ್ತಿಸಿ:

ಸುದ್ದಿಗೋಷ್ಠಿ ಬಳಿಕ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಪಕ್ಷದ ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳಬಾರದು. ಸಂಯಮದಿಂದ ವರ್ತಿಸಬೇಕು. ಬಳ್ಳಾರಿ ಶಾಂತಿಯುತವಾಗಿರುವಂತೆ ನೋಡಿಕೊಳ್ಳಬೇಕು. ನಮ್ಮದು ಶಿಸ್ತಿನ ಪಕ್ಷವಾಗಿದ್ದು, ಶಿಸ್ತಿನಿಂದ ವರ್ತಿಸಬೇಕು ಎಂದು ಹೇಳಿದರು.

ಇದೇ ವೇಳೆ ಮೃತ ಯುವಕನ ಆತ್ಮಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು. ಶಾಸಕರಾದ ನಾಗೇಂದ್ರ, ಭರತ್ ರೆಡ್ಡಿ, ಬಾದರ್ಲಿ ಬಸವನಗೌಡ ಮತ್ತಿತರರಿದ್ದರು.

ಏತನ್ಮಧ್ಯೆ, ಬಿಜೆಪಿ ಮುಖಂಡರ ಸುದ್ದಿಗೋಷ್ಠಿ ಸರಣಿ ಮುಂದುವರಿಸಿದ್ದರು. ಬ್ಯಾನರ್ ಗಲಾಟೆಯನ್ನು ಬಿಜೆಪಿಯವರ ಮೇಲೆ ಹಾಕಲು ಹುನ್ನಾರ ನಡೆಸಲಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಆಪಾದಿಸಿದರು.

ರೆಡ್ಡಿ ನಿವಾಸ ಮಹಜರು:

ಘಟನೆ ಹಿನ್ನೆಲೆಯಲ್ಲಿ ಇಲ್ಲಿನ ಸಿರುಗುಪ್ಪ ರಸ್ತೆಯಲ್ಲಿನ ಶಾಸಕ ಜನಾರ್ದನ ರೆಡ್ಡಿ ನಿವಾಸದ ಎದುರು ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮನ ಹಿನ್ನೆಲೆಯಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಡಿಕೆಶಿ ಪರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಕಾರ್ಯಕರ್ತರು ಡಿಕೆಶಿ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಮುಗಿ ಬೀಳುವ ದೃಶ್ಯ ಕಂಡು ಬಂತು.