ಸಾರಾಂಶ
ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ಕಂಪನಿಗಳಿಂದ ಜನಜೀವನ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸ್ಥಳೀಯರ ಆಕ್ರೋಶ ಹಾಗೂ ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮ ಕುರಿತು ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಪ್ರಶ್ನಿಸಿದ್ದ ಹಿರಿಯ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಅವರಿಗೆ ಸರ್ಕಾರದ ಅಧಿಕಾರಿಗಳು ಅರೆಬರೆ ಮಾಹಿತಿ ನೀಡಿ, ಹಾರಿಕೆಯ ಉತ್ತರ ನೀಡಿದರೇ ?
ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪ್ರತಿನಿಧಿ, ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 833 (899)ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ್ ಅವರು ಅಧಿಕಾರಿಗಳು ನೀಡಿರುವ ಮಾಹಿತಿ ಮೇರೆಗೆ ಲಿಖಿತ ಉತ್ತರಿಸಿದ್ದಾರೆ.ಆದರೆ, ಇಲ್ಲಿನ ಗಂಭೀರ ಸ್ಥಿತಿಗತಿ ಹಾಗೂ ವಾಸ್ತವಾಂಶವನ್ನು ಉತ್ತರದಲ್ಲಿ ಮರೆಮಾಚಲಾಗಿದೆ. ಜನರ ಬದುಕಿನ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಕಂಪನಿಗಳ ವಿರುದ್ಧ "ಮೃದುಧೋರಣೆ " ತಾಳಿದಂತಿದ್ದು, ಎಲ್ಲವನ್ನೂ ಸರಿಪಡಿಸಲಾಗಿದೆ ಎಂಬರ್ಥದಲ್ಲಿ ನೀಡಿದ ಲಿಖಿತ ಉತ್ತರ, ಹಿರಿಯ ಶಾಸಕರಿಗೇ ದಾರಿ ತಪ್ಪಿಸುತ್ತಿರುವಂತಿದೆ ಎನ್ನಲಾಗಿದೆ.
"ಯಾದಗಿರಿಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಿಷಾನಿಲ ಹೊರಸೂಸುವ ಹಾಗೂ ವಿಷತ್ಯಾಜ್ಯದ ನೀರು ನದಿಗೆ ಸೇರಿ, ಕುಡಿಯುವ ನೀರನ್ನು ವಿಷವನ್ನಾಗಿ ಮಾಡಿ, ಮಕ್ಕಳು, ವಯೋವೃದ್ಧರು ಕಣ್ಣು, ಚರ್ಮ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುವಂತೆ ಮಾಡುತ್ತಿರುವ ಈ ರಾಸಾಯಿಕ ಕಂಪನಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ? ಬಂದಿದ್ದಲ್ಲಿ, ಸದರಿ ಕಂಪನಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳೇನು ? ಅಲ್ಲದೆ, ಈ ರಾಸಾಯನಿಕ ಕಂಪನಿಗಳನ್ನು ಬಂದ್ ಮಾಡಿ, ಕಠಿಣ ಕ್ರಮಕ್ಕೆ ಆಗ್ರಹಿಸಿ ಗ್ರಾಮ ಪಂಚಾಯತ್‌ಗಳು ಠರಾವು ಪಾಸ್ ಮಾಡಿರುವ ಬಗ್ಗೆಯೂ ಶಾಸಕ ಬಿ.ಜಿ.ಪಾಟೀಲ್ ಅವರು ಪ್ರಶ್ನಿಸಿದ್ದಾರೆ.ಲಿಖಿತ ಉತ್ತರದಲ್ಲಿ, "ಕನ್ನಡಪ್ರಭ " ಸರಣಿ ವರದಿಗಳನ್ನು ಉಲ್ಲೇಖಿಸಲಾಗಿದ್ದು, ಅದರಂತೆ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ, ಭೇಟಿ- ಪರಿಶೀಲನೆ ಹಾಗೂ ಸುಧಾರಣಾ ಕ್ರಮಗಳ ಬಗ್ಗೆ ತಿಳಿಸಲಾಗಿದೆಯಲ್ಲದೆ, ದುರ್ವಾಸನೆ ತಡೆಗಟ್ಟಲು ಕೈಗಾರಿಕಾ ಪ್ರದೇಶದಲ್ಲಿ ಸುಗಂಧದ್ರವ್ಯ ಸಿಂಪರಣೆಗೆ ಸೂಚಿಸಿರುವ ಬಗ್ಗೆ ತಿಳಿಸಲಾಗಿದೆ. ಸರ್ಕಾರ ನೀಡಿದ ಉತ್ತರಕ್ಕೂ, ಅಲ್ಲಿನ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸ ಹಾಗೂ ವಾಸ್ತವಾಂಶಗಳ ಮರೆಮಾಚಿ ಶಾಸಕರಿಗೆ ಅರೆಬರೆ ಮಾಹಿತಿ ನೀಡಿರುವುದನ್ನು ನೋಡಿದರೆ, ಸಾಮಾನ್ಯ ನಾಗರಿಕರಿಗೆ ಅದ್ಯಾವ ರೀತಿ ಸರ್ಕಾರ ಸ್ಪಂದಿಸುತ್ತಿದೆಯೋ ದೇವರೇ ಬಲ್ಲ.!
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))