ಎನ್‌ಕೌಂಟರ್‌ ಆಗುವುದು ಮೊದಲೇ ಗೊತ್ತಿತ್ತೇ?

| Published : Nov 20 2024, 12:32 AM IST

ಸಾರಾಂಶ

ಸೋಮವಾರ ರಾತ್ರಿಯೇ ಪೀತಾಬೈಲಿನಲ್ಲಿ ಎನ್‌ಕೌಂಟರ್ ಆಗುತ್ತದೆ ಎಂದು ಎಎನ್‌ಎಫ್‌ ಪೊಲೀಸರಿಗೆ ಖಚಿತವಿದ್ದಂತ್ತಿತ್ತು. ಯಾಕೆಂದರೆ ಎನ್‌ಕೌಂಟರ್‌ ನಡೆದ ಮನೆಯವರನ್ನು ಮತ್ತು ಹತ್ತಿರದ ಇನ್ನೆರೆಡು ಮನೆಗಳವರನ್ನು ಸೋಮವಾರವೇ ಪೊಲೀಸರು ಅಲ್ಲಿಂದ ತೆರವುಗೊಳಿಸಿ ಬೇರೆಡೆಗೆ ಕಳಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಮಲೆಕುಡಿಯ ಸಮುದಾಯದ ಈ ಮನೆಗೆ ಈ ಹಿಂದೆಯೂ ವಿಕ್ರಮ್‌ ಗೌಡ ಅಕ್ಕಿ ಬೇಳೆಗಾಗಿ ಬಂದಿದ್ದ. ಆ ಮನೆಯವರು ಕೂಡ ಆತ ಊರಿನವನೇ ಆಗಿದ್ದರಿಂದ ‍ವಿಶ್ವಾಸದಿಂದಿದ್ದರು. ಆದ್ದರಿಂದ ಆತ ಮತ್ತೆ ಆ ಮನೆಗೆ ಅಕ್ಕಿ ಬೇಳೆಗಾಗಿ ಬರುತ್ತಾನೆ ಎಂಬುದು ಪೊಲೀಸರ ಖಚಿತ ಲೆಕ್ಕಾಚಾರವಾಗಿತ್ತು.

ಕಾಡಿನಿಂದ ಕೆಳಗೆ ಬರುವಾಗ ಸಿಗುವ ಆ ಮನೆಯವರನ್ನು ಮೊದಲೇ ತೆರವುಗೊಳಿಸಿ, ಆ ಪ್ರದೇಶದಲ್ಲಿ ಪೊಲೀಸರು ಅಡಗಿ ಕುಳಿತಿದ್ದರು, ತಮ್ಮ ಲೆಕ್ಕಾಚಾರದಂತೆ ಅಲ್ಲಿಗೆ ಬಂದ ವಿಕ್ರಮ್‌ ಗೌಡನನ್ನು ಮನೆಯ ಅಂಗಳದಲ್ಲಿಯೇ ಗುಂಡಿಕ್ಕಿ ಕೆಡವಿದ್ದಾರೆ. ಆತನಿಗೆ ಗಾರ್ಡ್ ಆಗಿ ಸ್ವಲ್ಪ ದೂರದಲ್ಲಿ ನಿಂತಿದ್ದ ಇತರ ನಕ್ಸಲೀಯರು ಗುಂಡಿನ ದಾಳಿಯಾಗುತ್ತಿದ್ದಂತೆ ಕತ್ತಲೆಯಲ್ಲಿ ಕಾಡಿನೊಳಗೆ ಪರಾರಿಯಾಗಿದ್ದಾರೆ.-------------------ಕೆಎಂಸಿ ಮಣಿಪಾಲದಲ್ಲಿ ಪೋಸ್ಟ್‌ ಮಾರ್ಟಂಕಬ್ಬಿನಾಲೆ ಅರಣ್ಯದಿಂದ ನಕ್ಸಲ್ ನಾಯಕ ವಿಕ್ರಮ್ ಗೌಡ ಮೃತದೇಹವನ್ನು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.ಪೊಲೀಸ್ ಭದ್ರತೆಯಲ್ಲಿ ಆಂಬ್ಯುಲೆನ್ಸ್ ಮೂಲಕ ಮೃತದೇಹ ರವಾನಿಸಲಾಯಿತು. ಮಣಿಪಾಲ ಆಸ್ಪತ್ರೆಯಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಮೃತದೇಹ ಮರಣೋತ್ತರ ಪರೀಕ್ಷೆ ನಡೆಯಿತು.