ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ಮುಂಗಾರು ಪೂರ್ವ ಮಳೆ ಸುರಿದ ಹಿನ್ನೆಲೆಯಲ್ಲಿ ಬಿತ್ತನೆಗಾಗಿ ಜಿಲ್ಲೆಯ ರೈತರು ಸಿದ್ಧತೆ ನಡೆಸಿದ್ದಾರೆ. ಆದರೆ, ಟ್ರ್ಯಾಕ್ಟರ್‌ ಸೇರಿದಂತೆ ಕೃಷಿ ಯಂತ್ರೋಪಕರಣಗಳಿಗೆ ಡೀಸೆಲ್‌ ಸಿಗದೇ ಇಡೀ ಕೃಷಿ ಚಟುವಟಿಕೆ ಬಂದ್‌ ಆಗಿದೆ!

ಬಿತ್ತನೆ ಕಾರ್ಯಕ್ಕಾಗಿ ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ಅದಕ್ಕೆ ಡೀಸೆಲ್ ಅಗತ್ಯವಿದೆ. ಆದರೆ ಮಧ್ಯಪ್ರಾಚ್ಯದ ಯುದ್ದದ ಬಿಕ್ಕಟ್ಟಿನಿಂದಾಗಿ ಸಮರ್ಪಕ ಇಂಧನ ಪೂರೈಕೆಯಾಗದೇ ಡೀಸೆಲ್‌ ಅಭಾವ ಸೃಷ್ಟಿಯಾಗಿದೆ. ಇದು ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗುತ್ತಿದೆ.

ಜಿಲ್ಲೆಯ ವಿವಿಧ ಪೆಟ್ರೋಲ್ ಬಂಕ್‌ಗಳ ಎದುರು ಜನರು ಕ್ಯಾನ್ ಹಿಡಿದು ಸರದಿ ಸಾಲಿನಲ್ಲಿ ನಿಂತ ದೃಶ್ಯಗಳು, ವಾಹನಗಳ ಉದ್ದನೆಯ ಸಾಲುಗಳು ಕಂಡುಬರುತ್ತಿವೆ. ಜಿಲ್ಲೆಯ ಸವಣೂರು, ಹಾವೇರಿ, ಹಾನಗಲ್ಲ, ಶಿಗ್ಗಾಂವಿ, ರಾಣಿಬೆನ್ನೂರು ಸೇರಿದಂತೆ ಹಲವು ಭಾಗಗಳಲ್ಲಿ ಡೀಸೆಲ್ ಸಿಗದೇ ರೈತರು ಪರದಾಡುತ್ತಿದ್ದಾರೆ. ಕ್ಯಾನ್‌ ಹಿಡಿದು ಬಂಕ್‌ನಿಂದ ಬಂಕ್‌ಗೆ ರೈತರು ಅಲೆದಾಡುತ್ತಿರುವ ದೃಷ್ಯ ಸಾಮಾನ್ಯವಾಗಿದೆ.


ಕೃಷಿ ಚಟುವಟಿಕೆ ಬಂದ್‌: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗಿದ್ದರಿಂದ ರೈತರು ಶೇಂಗಾ, ಸೋಯಾಬಿನ್, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ಅಣಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಸಿಗದಿರುವುದು ರೈತರನ್ನು ಆತಂಕಕ್ಕೆ ತಳ್ಳಿದೆ.

ಕೆಲ ರೈತರು ಬೆಳಗ್ಗೆಯಿಂದಲೇ ಪೆಟ್ರೋಲ್ ಬಂಕ್‌ಗಳ ಎದುರು ಕಾಯುತ್ತಿದ್ದು, ಡೀಸೆಲ್ ಲಭ್ಯವಾಗದಿದ್ದರೆ ಬಿತ್ತನೆ ವಿಳಂಬವಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಮಳೆ ಬಂದಿರುವ ಸಮಯದಲ್ಲೇ ಬಿತ್ತನೆ ಮಾಡಬೇಕು. ಇನ್ನೂ ಎರಡು ದಿನ ವಿಳಂಬವಾದರೂ ಬೆಳೆ ಮೇಲೆ ಪರಿಣಾಮ ಬೀಳುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಕ್ಯಾನ್ ಹಿಡಿದು ಸಾಲಿನಲ್ಲಿ ರೈತ: ಹಾವೇರಿ ನಗರದಲ್ಲಿರುವ ಕೆಲವೇ ಬಂಕ್‌ಗಳಲ್ಲಿ ಡೀಸೆಲ್ ಸಿಗುತ್ತಿದೆ. ಬಂಕ್‌ಗಳಿಗೆ ಆಯಾ ಕಂಪನಿಯಿಂದ ಸಮರ್ಪಕವಾಗಿ ಡೀಸೆಲ್‌ ಪೂರೈಕೆಯಾಗದ್ದರಿಂದ ಸಮಸ್ಯೆ ತೀವ್ರಗೊಂಡಿದೆ. ಶುಕ್ರವಾರ ಗುತ್ತಲ ಭಾಗದ ರೈತರು ಹಾವೇರಿಗೆ ಆಗಮಿಸಿ ಡೀಸೆಲ್‌ ತುಂಬಿಸಿಕೊಂಡು ಹೋಗಿದ್ದಾರೆ.

ಶನಿವಾರ ಬೆಳಗ್ಗೆ ಇಲ್ಲಿಯ ಹಿರೇಗೌಡ್ರ ಬಂಕ್‌ನಲ್ಲಿ ಮಾತ್ರ ಡೀಸೆಲ್‌ ಲಭ್ಯವಿದ್ದ ಕಾರಣ ಅಲ್ಲಿಗೆ ನೂರಾರು ರೈತರು ದಾಂಗುಡಿ ಇಟ್ಟು ಮಧ್ಯಾಹ್ನದವರೆಗೂ ಕ್ಯಾನ್‌ ತುಂಬಿಸಿಕೊಂಡು ಹೋಗಿದ್ದಾರೆ. ಆ ವೇಳೆಗಾಗಲೇ ಅಲ್ಲಿ ಡೀಸೆಲ್‌ ಖರ್ಚಾಗಿದೆ. ಆಗ ಹಾನಗಲ್ಲ ರಸ್ತೆ ಕೊಟ್ಟೂರೇಶ್ವರ ಬಂಕ್‌ಗೆ ಡೀಸೆಲ್‌ ಪೂರೈಕೆಯಾದ್ದರಿಂದ ಅಲ್ಲಿ ರೈತರು ದಾಳಿ ಇಟ್ಟಿದ್ದಾರೆ. ಸಂಜೆವರೆಗೂ ಕ್ಯಾನ್‌ಗಳನ್ನು ಸರದಿ ಸಾಲಿನಲ್ಲಿ ಇಟ್ಟು ಕಾಯುತ್ತಾ ನಿಂತಿದ್ದಾರೆ. ಇಷ್ಟೇಯಲ್ಲದೇ ಗ್ರಾಮೀಣ ಭಾಗದಲ್ಲಿರುವ ಹಾವೇರಿ ತಾಲೂಕಿನ ಹೊಸರಿತ್ತಿ, ಗುತ್ತಲ ಭಾಗದ ಕೆಲವೆಡೆ ಬೈಕ್, ಕಾರು, ಟ್ರ್ಯಾಕ್ಟರ್‌ಗಳ ಉದ್ದನೆಯ ಸಾಲುಗಳು ಕಂಡುಬಂದರೆ, ಇನ್ನೂ ಕೆಲವರು ಕ್ಯಾನ್ ಹಿಡಿದು ಡೀಸೆಲ್ ಪಡೆಯಲು ಗಂಟೆಗಟ್ಟಲೆ ಕಾಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ನೋ ಸ್ಟಾಕ್‌ ಬೋರ್ಡ್‌ ಅಳವಡಿಸಲಾಗಿದೆ. ಬಂಕ್‌ಗಳಲ್ಲಿ ಉದ್ದನೆಯ ಸಾಲು ನೋಡಿ ಕಾರು, ಬೈಕ್‌ಗಳ ಮಾಲಿಕರು ಪೆಟ್ರೋಲ್‌ ಕೂಡ ಹಾಕಿಸದೇ ವಾಪಸ್‌ ಹೋಗುತ್ತಿದ್ದಾರೆ. ಇಂಧನ ಅಭಾವದಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ತೈಲ ಕಂಪನಿಗಳು ತಕ್ಷಣ ಕ್ರಮ ಕೈಗೊಂಡು ಸಮರ್ಪಕವಾಗಿ ಡೀಸೆಲ್ ಹಾಗೂ ಪೆಟ್ರೋಲ್ ಪೂರೈಕೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಅತ್ತ ಬಿತ್ತನೆ ಬೀಜ ಸಿಗುತ್ತಿಲ್ಲ, ಇದೇ ಸಂದರ್ಭದಲ್ಲಿ ಡೀಸೆಲ್‌ ಕೂಡ ಇಲ್ಲದಿದ್ದರೆ ಉಳುಮೆ ಮಾಡುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.