ಸರಕಾರಿ ಶಾಲೆಗಳೆಂದರೆ ಬರೀ ಕಪ್ಪು ಹಲಗೆ ಮತ್ತು ಸೀಮೆ ಸುಣ್ಣಕ್ಕಷ್ಟೇ ಸೀಮಿತ ಎಂಬ ಹಳೆಯ ಕಲ್ಪನೆ ಈಗ ಬದಲಾಗುತ್ತಿದ್ದು, ಗ್ರಾಮೀಣ ಭಾಗದ ಬಡ ಮಕ್ಕಳಿಗೂ ಹೈಟೆಕ್ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.
4 ಸಾವಿರ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಶಿಕ್ಷಣದ ಭಾಗ್ಯ । ಸಿಎಸ್ಆರ್ ಸಹಯೋಗದೊಂದಿಗೆ ಅನುಷ್ಠಾನವಿಶೇಷ ವರದಿ
ಕನ್ನಡಪ್ರಭ ವಾರ್ತೆ ಗದಗಸರಕಾರಿ ಶಾಲೆಗಳೆಂದರೆ ಬರೀ ಕಪ್ಪು ಹಲಗೆ ಮತ್ತು ಸೀಮೆ ಸುಣ್ಣಕ್ಕಷ್ಟೇ ಸೀಮಿತ ಎಂಬ ಹಳೆಯ ಕಲ್ಪನೆ ಈಗ ಬದಲಾಗುತ್ತಿದ್ದು, ಗ್ರಾಮೀಣ ಭಾಗದ ಬಡ ಮಕ್ಕಳಿಗೂ ಹೈಟೆಕ್ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಗದಗ ಜಿಲ್ಲೆಯ 16 ಸರಕಾರಿ ಶಾಲೆಗಳಲ್ಲಿ ಸೆರೆಂಟಿಕಾ ರೆನಿವೇಬಲ್ಸ್ ಸಂಸ್ಥೆಯ ಸಿಎಸ್ಆರ್ ಸಹಯೋಗದೊಂದಿಗೆ, ಸೆಲ್ಕೋ ಸೋಲಾರ್ ಹಾಗೂ ಮೆಂಡಾ ಫೌಂಡೇಶನ್ ಜಂಟಿಯಾಗಿ ಡಿಜಿಟಲ್ ಶಿಕ್ಷಣ ಬೆಂಬಲ ಯೋಜನೆಯನ್ನು ಅನುಷ್ಠಾನಗೊಳಿಸಿವೆ.
ಗದಗ ತಾಲೂಕಿನ 11 ಹಾಗೂ ಲಕ್ಷ್ಮೇಶ್ವರ ತಾಲೂಕಿನ 5 ಸರಕಾರಿ ಶಾಲೆಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದು, 4 ಸಾವಿರ ವಿದ್ಯಾರ್ಥಿಗಳು ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ತರಗತಿಗಳ ಮೂಲಕ ನವೀನ ಕಲಿಕಾ ಸಂಪನ್ಮೂಲಗಳನ್ನು ಪಡೆಯಲಿದ್ದಾರೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿದ್ಯುತ್ ಕೈಕೊಡುವುದು ಸಾಮಾನ್ಯವಾಗಿದ್ದು, ಈ ಸಮಸ್ಯೆಯನ್ನು ಮೆಟ್ಟಿ ನಿಲ್ಲಲು ಪ್ರತಿಯೊಂದು ಶಾಲೆಗೂ ಸೋಲಾರ್ ಶಕ್ತಿಯ ಆಫ್ಗ್ರೇಡ್ ಬ್ಯಾಕಪ್ ವ್ಯವಸ್ಥೆ ಕಲ್ಪಿಸಲಾಗಿದೆ.ಇದರೊಂದಿಗೆ 50 ಇಂಚಿನ ಎಲ್ಇಡಿ ಪರದೆ ಹಾಗೂ ಆಧುನಿಕ ಡಿಜಿಟಲ್ ಕಲಿಕಾ ಸಾಧನಗಳನ್ನು ಅಳವಡಿಸಿ ಈಗಾಗಲೇ ಶಾಲಾ ಆಡಳಿತಕ್ಕೆ ಹಸ್ತಾಂತರಿಸಲಾಗಿದೆ. ಕರ್ನಾಟಕ ರಾಜ್ಯ ಪಠ್ಯಕ್ರಮಕ್ಕೆ ಸಂಪೂರ್ಣ ಹೊಂದಿಕೆಯಾಗುವ ಅಧಿಕೃತ ಮಲ್ಟಿಮೀಡಿಯಾ ಪಠ್ಯವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅಳವಡಿಸಲಾಗಿದ್ದು, ಅನಿಮೇಷನ್ ಮತ್ತು ದೃಶ್ಯ ಮಾದರಿಗಳು ಮಕ್ಕಳಲ್ಲಿ ಕ್ಲಿಷ್ಟಕರ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗಲಿವೆ. ಈ ಉಪಕರಣಗಳ ಸುಲಭ ನಿರ್ವಹಣೆಗಾಗಿ ಶಾಲಾ ಶಿಕ್ಷಕರಿಗೆ ಈಗಾಗಲೇ ವಿಶೇಷ ತಾಂತ್ರಿಕ ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಲಾಗಿದೆ.
ಕೇವಲ ಸಾಧನಗಳನ್ನು ವಿತರಿಸಿ ಕೈತೊಳೆದುಕೊಳ್ಳದೆ, ಈ ಡಿಜಿಟಲ್ ವ್ಯವಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸಲು ಸಂಸ್ಥೆಯು ಮುಂದಿನ ಐದು ವರ್ಷಗಳ ಕಾಲ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವುದು ಕೂಡಾ ಯೋಜನೆಯ ಪ್ರಮುಖ ಆಕರ್ಷಣೆಯಾಗಿದೆ. ಕಲಿಕಾ ಪ್ರಕ್ರಿಯೆ ಯಾವುದೇ ಅಡೆತಡೆಯಿಲ್ಲದೆ ಸಾಗಲು ಉಚಿತ ಟೋಲ್ಫ್ರೀ ತಾಂತ್ರಿಕ ಸಹಾಯವಾಣಿ, ವರ್ಷಕ್ಕೆ ಎರಡು ಬಾರಿ ಶಾಲೆಗಳಿಗೆ ಭೇಟಿ ನೀಡಿ ನಿಯಮಿತ ನಿರ್ವಹಣೆ ಹಾಗೂ ಆನ್ಲೈನ್ ಮೂಲಕ ಬಳಕೆಯ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗಿದೆ. ಸಮುದಾಯದ ಸಮಗ್ರ ಅಭಿವೃದ್ಧಿಗೆ ಅರ್ಥಪೂರ್ಣ ಶಿಕ್ಷಣವೇ ಮುಖ್ಯ ಅಡಿಪಾಯ. ಸರಕಾರಿ ಶಾಲೆಗಳಿಗೆ ತಂತ್ರಜ್ಞಾನದ ಬಲ ತುಂಬುವ ಮೂಲಕ ವಿದ್ಯಾರ್ಥಿಗಳ ದೈನಂದಿನ ತರಗತಿ ಕಲಿಕೆಯನ್ನು ವಿಸ್ತಾರಗೊಳಿಸುವುದು ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಅವರನ್ನು ಸಜ್ಜುಗೊಳಿಸುವುದೇ ಇದರ ಮೂಲ ಉದ್ದೇಶವಾಗಿದೆ. ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಗುಣಮಟ್ಟದ ಶಿಕ್ಷಣವೇ ಅಡಿಪಾಯ. ಗ್ರಾಮೀಣ ಸರಕಾರಿ ಶಾಲಾ ಮಕ್ಕಳು ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದುಳಿಯಬಾರದು ಎಂಬ ಕಾಳಜಿಯಿಂದ ತಂತ್ರಜ್ಞಾನ ಬೆಂಬಲ ನೀಡಲಾಗುತ್ತಿದೆ. ಸೋಲಾರ್ ಮತ್ತು ಡಿಜಿಟಲ್ ಕಲಿಕೆಯ ಸಂಯೋಜನೆಯು ಮಕ್ಕಳ ಕಲಿಕಾ ಆಸಕ್ತಿಯನ್ನು ಇಮ್ಮಡಿಗೊಳಿಸಲಿದೆ.ಸೆರೆಂಟಿಕಾ ರೆನಿವೇಬಲ್ಸ್ ಸಂಸ್ಥೆ