ಸಾರಾಂಶ
ಮಾರುತಿ ಶಿಡ್ಲಾಪುರ
ಕನ್ನಡಪ್ರಭ ವಾರ್ತೆ ಹಾನಗಲ್ಲಕಂದಾಯ ಇಲಾಖೆಯಲ್ಲಿ ಒಂದು ಸಣ್ಣ ದಾಖಲೆಗೆ ವಾರಗಟ್ಟಲೆ ಅಲೆದಾಟಕ್ಕೆ ಈಗ ಬ್ರೇಕ್ ಬಿದ್ದಿದ್ದು, ತಾಲೂಕು ಆಡಳಿತ ಬೆರಳ ತುದಿಯಲ್ಲೇ ಎಲ್ಲ ಕಂದಾಯ ದಾಖಲೆಗಳನ್ನು ದೊರಕುವಂತೆ ಮಾಡಿದೆ.
ಕಂದಾಯ ಇಲಾಖೆಯ ಹಳೆಯ ದಾಖಲೆಗಳನ್ನು ಸುರಕ್ಷಿತಗೊಳಿಸಲು, ಸುಳ್ಳು ದಾಖಲೆ ಸೃಷ್ಟಿ ತಡೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಭೂಸುರಕ್ಷಾ ಯೋಜನೆಯಡಿ ತಾಲೂಕಿನಲ್ಲಿ 40 ಲಕ್ಷ ಪುಟ ದಾಖಲೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಸುಲಭ ಸೇವೆಗಾಗಿ ಕಂದಾಯ ದಾಖಲೆಗಳನ್ನೆಲ್ಲ ಡಿಜಿಟಲೀಕರಣಗೊಳಿಸಿದ ಜಿಲ್ಲೆಯ ಮೊದಲ ತಾಲೂಕು ಎನ್ನುವ ಹಿರಿಮೆಗೆ ಹಾನಗಲ್ಲ ಪಾತ್ರವಾಗಿದೆ.ಕಂದಾಯ ದಾಖಲೆ ಪಡೆಯಲು ಈ ಮೊದಲು ತಹಸೀಲ್ದಾರ್ ಮತ್ತು ನಾಡಕಚೇರಿಗಳಿಗೆ ಅರ್ಜಿ ಸಲ್ಲಿಸಿ, ತಿಂಗಳುಗಳ ಕಾಲ ಅಲೆಯಬೇಕಿತ್ತು. ಕೆಲವು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ದಾಖಲೆಗಳು ಲಭಿಸದೇ ಸೌಲಭ್ಯಗಳಿಂದ ವಂಚಿತರಾಗಬೇಕಿತ್ತು. ಇದಕ್ಕೆಲ್ಲ ಫುಲ್ ಸ್ಟಾಪ್ ಬಿದ್ದಿದ್ದು, ನೂರಾರು ವರ್ಷಗಳ ದಾಖಲೆಗಳು ತಕ್ಷಣವೇ ಲಭ್ಯವಾಗುವಂತಾಗಿರುವುದು ವಿಶೇಷ.
14 ತಿಂಗಳ ಶ್ರಮ; 40 ಲಕ್ಷ ಪುಟ ದಾಖಲೆ ಸುರಕ್ಷಿತ: ಸಚಿವ ಕೃಷ್ಣ ಬೈರೇಗೌಡ ಅವರ ದೂರದೃಷ್ಟಿಯಿಂದ ಕಂದಾಯ ಇಲಾಖೆಯಲ್ಲಿ ಡಿಜಿಟಲ್ ಕ್ರಾಂತಿಯಾಗಿದೆ. ಶಾಸಕ ಶ್ರೀನಿವಾಸ ಮಾನೆ ಅವರ ಕಾಳಜಿ, ತಹಸೀಲ್ದಾರ್ ರೇಣುಕಾ ಎಸ್. ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸತತ 14 ತಿಂಗಳುಗಳ ಕಾಲ ಶ್ರಮ ವಹಿಸಿ 40 ಲಕ್ಷ ಪುಟ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದ್ದಾರೆ. ಈ ಕೆಲಸಕ್ಕೆ 12 ಆಪರೇಟರ್‌ಗಳು, ಇಬ್ಬರು ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿ ಕೈ ಜೋಡಿಸಿ ಯಶಸ್ವಿಗೊಳಿಸಿದ್ದಾರೆ.ಡ ಕೈಬರಹ, ಕೈ ಬರಹದ ಪಹಣಿ, 1930-2000 ಅವಧಿಯ ಭೂ ಸುಧಾರಣಾ ಹಾಗೂ ಭೂ ಮಂಜೂರಾತಿ ಕಡತಗಳು, ಡ ವರದಿ, ಎಂ.ಆರ್. ವರದಿ, ವೇತನ ಫೈಲ್‌ಗಳು, ಆರ್‌ಟಿಎಸ್ ತಿದ್ದುಪಡಿ ಹೀಗೆ ಹತ್ತು, ಹಲವು ದಾಖಲೆಗಳೆಲ್ಲ ಡಿಜಿಟಲೀಕರಣಗೊಂಡು ಸುರಕ್ಷಿತವಾಗಿವೆ. ಕಳೆದ ಜೂನ್ ತಿಂಗಳಿನಿಂದ ಜನರಿಗೆ ಡಿಜಿಟಲೀಕರಣಗೊಂಡ ದಾಖಲೆಗಳನ್ನು ಒದಗಿಸಲಾಗುತ್ತಿದ್ದು, ಇದುವರೆಗೆ 10 ಸಾವಿರಕ್ಕೂ ಹೆಚ್ಚು ದಾಖಲೆಗಳನ್ನು ಸಾರ್ವಜನಿಕರಿಗೆ ಪೂರೈಸಲಾಗಿದೆ. ಇದು ಜಿಲ್ಲೆಯಲ್ಲಿಯೇ ಅತೀ ಹೆಚ್ಚು.
ಪಡೆಯುವ ವಿಧಾನ : ನಾಗರಿಕರು ಭೂಸುರಕ್ಷಾ ಪೋರ್ಟಲ್ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಲಾಗಿನ್ ಆಗಿ ತಮ್ಮ ಭೂ ದಾಖಲೆಗಳನ್ನು ಪರಿಶೀಲಿಸಬಹುದು. ದೃಢೀಕೃತ ನಕಲು ಪತ್ರಗಳನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ನಾಡಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲೂಬಹುದು.ಭೂ ದಾಖಲೆಗಳಲ್ಲಿ ನಕಲಿ ಎಂಟ್ರಿ ಮತ್ತು ಸುಳ್ಳು ದಾಖಲೆಗಳನ್ನು ತಡೆಯಲು ಡಿಜಿಟಲೀಕರಣ ಮಹತ್ವದ ಹೆಜ್ಜೆಯಾಗಿದೆ. ಅಲ್ಲದೇ ಸಾರ್ವಜನಿಕರಿಗೆ ತಮ್ಮ ಭೂ ದಾಖಲಾತಿಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗಿದೆ. ತಾಲೂಕಿನಲ್ಲಿ ಎಲ್ಲ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಶಾಶ್ವತವಾಗಿ ಸಂರಕ್ಷಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಸುಲಭ ಸೇವೆಗಾಗಿ ಕಂದಾಯ ದಾಖಲೆಗಳ ಡಿಜಿಟಲೀಕರಣ ಭೂಸುರಕ್ಷಾ ಯೋಜನೆಯಡಿ ಹಾನಗಲ್ಲ ತಾಲೂಕಿನಲ್ಲಿ ಪೂರ್ಣಗೊಂಡಿದೆ. ಸಾರ್ವಜನಿಕರು ಮನೆಗಳಲ್ಲಿಯೇ ಕುಳಿತು ಡಿಜಿಟಲ್ ಸಹಿ ಹೊಂದಿರುವ ದಾಖಲೆಗಳನ್ನು ಪಡೆಯಬಹುದಾಗಿದೆ. ಇದು ಪ್ರಯಾಣ, ಸಮಯ ಮತ್ತು ಹಣ ಉಳಿಸಲಿದೆ ಎಂದು ಹಾನಗಲ್ಲ ತಹಸೀಲ್ದಾರ್ ರೇಣುಕಾ ಎಸ್ ಹೇಳಿದರು.ಕಂದಾಯ ದಾಖಲೆಗಳ ಡಿಜಿಟಲೀಕರಣದಿಂದ ತುಂಬಾ ಅನುಕೂಲವಾಗಿದೆ. ಕೆಲವು ಬಾರಿ ಅರ್ಜಿ ಸಲ್ಲಿಸಿದರೂ ಸಹ ದಾಖಲೆಗಳು ಸಿಗಲು ವಿಳಂಬ ಆಗುತ್ತಿತ್ತು. ಇದೀಗ ಆನ್‌ಲೈನ್‌ನಲ್ಲಿಯೇ ಲಭಿಸುತ್ತಿರುವುದರಿಂದ ಸಹಕಾರಿಯಾಗಿದೆ. ಅಲ್ಲದೇ ನಮ್ಮ ದಾಖಲೆಗಳು ಸುರಕ್ಷಿತವಾಗಿರುವುದರಿಂದ ಚಿಂತೆ ಇಲ್ಲದಂತಾಗಿದೆ ಎಂದು ಮಹಾರಾಜಪೇಟೆ ಗ್ರಾಮಸ್ಥ ಫಕ್ಕೀರಪ್ಪ ಹೇಳಿದರು.