ಸಾರಾಂಶ
ಗುರುಶಾಂತ ಜಡೆಹಿರೇಮಠ
ದಾಂಡೇಲಿ: ನಗರದ ಮಧ್ಯ ಭಾಗದ ಜನವಸತಿ ಪ್ರದೇಶ ಟೌನ್‌ಶಿಪ್‌ದಲ್ಲಿ ಇರುವ ಎಸ್‌ಬಿಎಂ ಮತ್ತು ಆರಕ್ಷಕರ ಮನೆಗಳು ಸಂಬಂಧಪಟ್ಟ ಇಲಾಖೆಗಳು ಉದ್ಯೋಗಿಗಳು ವಾಸವಿರದೇ ಪಾಳು ಬಿದ್ದಿವೆ.ಮನೆಗಳ ಸ್ಲ್ಯಾಬ್‌ಗಳಿಂದ ಮರಗಳು ಬೆಳೆದು ನಿಂತಿವೆ. ಮನೆಗಳ ಸುತ್ತ ಗಿಡ-ಗಂಟಿ ಬೆಳೆದಿವೆ. ಈ ಮನೆಗಳ ಸುತ್ತ ಭಯಾನಕ ವಾತಾವರಣವಿದೆ. ಪಾಳು ಬಿದ್ದ ಮನೆಗಳಲ್ಲಿ ಹುಳು-ಹುಪ್ಪಡಿ ಒಂದು ಕಡೆಯಾದರೆ, ಅಲ್ಲಿ ಇನ್ನು ಅನೇಕ ಜನವಿರೋಧಿ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಿದ್ದು ದುರಂತವೇ ಸರಿ.
ಸುಮಾರು ನಾಲ್ಕು ದಶಕಗಳ ಹಿಂದೆ ಗೃಹ ಮಂಡಳಿಯಿಂದ ಇಲ್ಲಿ ಮನೆಗಳನ್ನು ನಿರ್ಮಿಸಿ ಅವುಗಳನ್ನು ಸ್ಥಳೀಯ ಜನರಿಗೆ ಮತ್ತು ವಿವಿಧ ಇಲಾಖೆಗಳಿಗೆ ನೀಡಲಾಗಿತ್ತು. ಆ ಸಮಯದಲ್ಲಿ ಎಸ್‌ಬಿಎಂ ಬ್ಯಾಂಕ್ ಮತ್ತು ಪೊಲೀಸ್ ಇಲಾಖೆಯವರು ಗೃಹ ಮಂಡಳಿಯಿಂದ ತಮ್ಮ ಉದ್ಯೋಗಿಗಳ ವಾಸಕ್ಕೆ ಪಡೆದಿದ್ದರು. ಆ ಸಮಯದಲ್ಲಿ ಎಲ್ಲ ಮನೆಗಳಲ್ಲಿ ಉದ್ಯೋಗಿಗಳು ವಾಸ ಇದ್ದಿದ್ದರಿಂದ ಅಲ್ಲಿ ವಾತಾವರಣ ಚೆನ್ನಾಗಿತ್ತು. ಕ್ರಮೇಣ ಮನೆಗಳ ಆರೈಕೆ ಮಾಡದೇ ಮತ್ತು ಮನೆಗಳಲ್ಲಿ ಇಲಾಖೆಗಳ ಜನರ ವಾಸ ಕಡಿಮೆಯಾದಂತೆ ಈ ಮನೆಗಳು ತಮ್ಮ ಮೂಲ ಸ್ವರೂಪ ಕಳೆದುಕೊಳ್ಳತೊಡಗಿದವು. ಅಲ್ಲಿಇಲ್ಲಿ ಇದ್ದ ಪೊಲೀಸರು ತಮ್ಮ ಮನೆಗಳ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದರು. ಮುಂದೆ ಅವು ಹಾಳಾಗಿವೆ. ಅನೈತಿಕ ಚಟುವಟಿಕೆಗಳು ಮನೆಗಳಲ್ಲಿ ನಡೆಯುತ್ತಿರುವ ಕುರಿತು ಸುತ್ತಮುತ್ತ ವಾಸವಿರುವ ಜನರು ಆಕ್ಷೇಪಿಸಿದ್ದಾರೆ.ಪೊಲೀಸ್ ಇಲಾಖೆಯಿಂದ ನಗರ ಪೊಲೀಸ್ ಠಾಣೆ, ಗ್ರಾಮೀಣ ಪೊಲೀಸ್ ಠಾಣೆಗಳ ಸಿಬ್ಬಂದಿಗಾಗಿ ಪೊಲೀಸ್ ಠಾಣೆ ಅಕ್ಕಪಕ್ಕದಲ್ಲಿ ವಸತಿಗೃಹ ಕಟ್ಟಲಾಗಿದೆ. ಸುಸಜ್ಜಿತವಾಗಿ ಸ್ಲ್ಯಾಬ್ ಹೊಂದಿದ ಮನೆಗಳು ನಿರ್ಮಾಣಗೊಂಡಿರುವುದರಿಂದ ಪೊಲೀಸರು ಈ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಟೌನ್‌ಶಿಪ್‌ದಲ್ಲಿನಲ್ಲಿರುವ ಹಳೆ ಮನೆಗಳಲ್ಲಿ ಉಳಿಯಲು ಯಾರೂ ಮುಂದೆ ಬರುತ್ತಿಲ್ಲ. ಎಲ್ಲ ಪೊಲೀಸ್ ಸಿಬ್ಬಂದಿ ನೂತನ ಮನೆಗಳಲ್ಲಿ ವಾಸ ಇರುವುದರಿಂದ ಟೌನ್‌ಶಿಪ್‌ನಲ್ಲಿರುವ ಗೃಹ ಮಂಡಳಿಯ ಮನೆಗಳು ಹೆಚ್ಚಿಗೆ ಪಾಳುಬಿದ್ದಿವೆ. ಸ್ಲ್ಯಾಬ್, ಗೋಡೆಗಳಿಗೆ ಗಿಡ-ಬಳ್ಳಿಗಳು ಬೆಳೆದು ನಿಂತಿವೆ. ಮನೆಗಳ ಕಿಟಕಿ, ಬಾಗಿಲುಗಳು ಮಾಯವಾಗಿವೆ. ಕೆಲವು ಮನೆಗಳ ಇಟ್ಟಿಗೆಗಳು ಕಳವಾಗಿವೆ. ಬಹುತೇಕ ಮನೆಗಳು ಕುಸಿಯುವ ಸ್ಥಿತಿಯಲ್ಲಿವೆ. ಈ ಮನೆಗಳ ವಿದ್ಯುತ್ ಲೈನ್ ಸಂಪರ್ಕ, ನೀರಿನ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.
ನಗರದಲ್ಲಿ ಅನೇಕರು ಮನೆಗಳಿಲ್ಲದೆ ಪರದಾಡುತ್ತಿದ್ದಾರೆ. ಈ ಪಾಳು ಬಿದ್ದ ಮನೆಗಳನ್ನು ನಿವೇಶನ ಮಾಡಿ ನೀಡಿದರೆ, ಇಲ್ಲವಾದರೆ ಎರಡೋ, ಮೂರೋ ಅಂತಸ್ಥಿನ ಕಟ್ಟಡವನ್ನು ಜಿ+೨ ಮಾದರಿಯಲ್ಲಿ ಕಟ್ಟಿದರೆ ಅನೇಕ ಜನರು ಅನುಕೂಲ ಪಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಗರಾಡಳಿತ ಮತ್ತು ಸರ್ಕಾರ ಕ್ರಮ ಕೈಗೊಂಡರೆ ಉಪಯುಕ್ತ ಕಾರ್ಯ ಆಗುತ್ತದೆ. ಗೃಹ ಮಂಡಳಿಯವರು ಈ ಹಿಂದೆ ನಿರ್ಮಾಣ ಮಾಡಿ ಕೊಟ್ಟಂತೆ ಇಲ್ಲಿಯೂ ಮತ್ತೊಮ್ಮೆ ಮನೆಗಳನ್ನು ನಿರ್ಮಾಣ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹ.