ಶ್ರದ್ಧೆ, ಜ್ಞಾನ ವೃದ್ಧಿಸುತ್ತವೆ ಓದು-ಬರಹ: ಡಾ.ವಿಜಯಕುಮಾರ

| Published : Jun 10 2024, 02:05 AM IST

ಶ್ರದ್ಧೆ, ಜ್ಞಾನ ವೃದ್ಧಿಸುತ್ತವೆ ಓದು-ಬರಹ: ಡಾ.ವಿಜಯಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ನವನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯ, ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಇವರ ಸಹಯೋಗದಲ್ಲಿ ಭಾನುವಾರ ಮೇಘಮೈತ್ರಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಓದು ಮತ್ತು ಬರಹ ಮನುಷ್ಯನಲ್ಲಿ ಶ್ರದ್ಧೆ ಮತ್ತು ಜ್ಞಾನವನ್ನು ವೃದ್ಧಿಸುತ್ತದೆ. ಹೊಸ ತಲೆಮಾರಿನ ಬರಹಗಾರರು ಸಹನೆ ಮತ್ತು ತಾಳ್ಮೆ ಬೆಳೆಸಿಕೊಳ್ಳಬೇಕು. ಪ್ರತಿರೋಧಾತ್ಮಕ, ಪ್ರಚೋದನಾತ್ಮಕ, ಆರೋಗ್ಯಪರ ಚಿಂತನೆ ರೂಪಿಸಿಕೊಳ್ಳಬೇಕು ಎಂದು ಬಿವಿವಿ ಸಂಘದ ಆಡಳಿತಾಧಿಕಾರಿ ಹಾಗೂ ಹಿರಿಯ ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯ, ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಇವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೇಘಮೈತ್ರಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಆಧುನಿಕ ತಲೆಮಾರಿಗೆ ಹೊಸ ಚಿಂತನೆಗಳು ಬೇಕು. ಸಾಹಿತಿಯಾಗಲು ದೊಡ್ಡ ಕೃತಿಗಳನ್ನೇ ಬರೆಯಬೇಕಿಲ್ಲ. ಸಮಾಜಕ್ಕೆ ಉಪಯುಕ್ತವಾಗುವ ಎರಡು ಸಾಲು ಬರೆದರೂ ಅವರು ಸಾಹಿತ್ಯ ಪರಿಪಾಲಕರೇ. ಪ್ರಾಚೀನ ಕರ್ನಾಟಕ ಹೇಗಿತ್ತು, ನಾವು ಹೇಗಿದ್ದೇವೆ ಎಂದು ಮೌಲ್ಯಮಾಪನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಬಾಗಲಕೋಟೆ ಪ್ರಾಚೀನ ಕಾಲದಿಂದಲೂ ವಿದ್ವತ್ತಿನಿಂದ ಕೂಡಿದ ಸ್ಥಳವಾಗಿದೆ. ಇಂದು 400ಕ್ಕೂ ಹೆಚ್ಚು ಲೇಖಕರನ್ನು ಪೋಷಿಸಿ ಬೆಳೆಸುತ್ತಿದೆ. ಓದುಗರನ್ನು ಸೆಳೆಯುವ ಸಾಹಿತ್ಯ ರೂಢಿಸಿಕೊಳ್ಳಬೇಕಿದೆ. ಓದುಗರನ್ನು ಸೃಷ್ಟಿ ಮಾಡಲು ಸಾಧ್ಯವಾಗದಿದ್ದಾಗ ಬರವಣಿಗೆಗೆ ಮಹತ್ವ ಇಲ್ಲ. ಹಳೆಯ ತಲೆಮಾರಿನ ಲೇಖಕರು ಮತ್ತು ಹೊಸ ತಲೆಮಾರಿನ ಸಾಹಿತಿಗಳನ್ನು ಒಂದುಗೂಡಿಸಿ ಸಮ್ಮೇಳನಗಳನ್ನು ಮಾಡಬೇಕು. ಇದರಿಂದ ಯುವ ಜನಾಂಗಕ್ಕೆ ಸಾಹಿತ್ಯದ ಅರಿವು ಮೂಡಿಸಲು ಸಾಧ್ಯ. ಸಮಾಜದಲ್ಲಿ ಅರಾಜಕತೆ ತಲೆದೋರಿದ್ದು, ಕಾಯಕದಲ್ಲಿ ಆಸಕ್ತಿ ಇಲ್ಲದ ಜನರನ್ನು ಬಡಿದೆಬ್ಬಿಸಲು ಇಂತಹ ಸಮ್ಮೇಳನ, ಸಮಾವೇಶಗಳು ನಡೆಯುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಬಿ.ಎಂ.ಶ್ರೀ ಪ್ರತಿಷ್ಠಾನ ಅಧ್ಯಕ್ಷ ಡಾ.ಬೈರಮಂಗಲ್‌ ರಾಮೇಗೌಡ ಉದ್ಘಾಟನಪರ ಮಾತುಗಳನ್ನಾಡಿ, ಕನ್ನಡ ಸಾಹಿತ್ಯದಲ್ಲಿರುವ ಸಮಗ್ರತೆ ಬೇರೆ ಸಾಹಿತ್ಯದಲ್ಲಿಲ್ಲ. ಡಾ.ವಿಜಯಕುಮಾರ್ ಕಟಗಿಹಳ್ಳಿಮಠ ಅವರದು ಅಪರೂಪದ ವ್ಯಕ್ತಿತ್ವ. ಅವರು ಸಾಹಿತಿಗಳಾಗಿ ಅಷ್ಟೇ ಅಲ್ಲದೆ ಒಬ್ಬ ನಿಷ್ಠಾವಂತ ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಸಾಧನೆ ಮಾಡಿದ್ದು, ಕನ್ನಡ ಲೋಕಕ್ಕೆ ಅಪರೂಪದ ಕೊಡುಗೆಯಾಗಿದ್ದಾರೆ. ಬಸವೇಶ್ವರ ವಿದ್ಯಾವರ್ಧಕ ಸಂಘ ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಾಗದೆ ಕರ್ನಾಟಕದಾದ್ಯಂತ ಗುಣಮಟ್ಟದ ಶಿಕ್ಷಣ ಹಂಚುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

ಸಮಾಜದಲ್ಲಿ ಹೆಣ್ಣುಮಕ್ಕಳ ಪಾತ್ರ ದೊಡ್ಡದು:

ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ಸಮಾಜದಲ್ಲಿ ಹೆಣ್ಣುಮಕ್ಕಳ ಪಾತ್ರ ದೊಡ್ಡದು. ಸಾಹಿತಿಗಳಿಗೆ ಗೌರವ ಕೊಡದಿರುವುದು ವಿಷಾದನೀಯ. ದೇಶದಲ್ಲಿ ಜಾತೀಯತೆ ತಲೆ ಎತ್ತಿ ನಿಂತಿದೆ. ಪ್ರಜಾಪ್ರಭುತ್ವದಲ್ಲಿ ಜಾತಿ ಸಂಘಟನೆಗಳು ಹೆಚ್ಚುತ್ತಿದ್ದು ಪ್ರಬುದ್ಧತೆ ಕಡಿಮೆಯಾಗಿದೆ. ಗಾಂಧೀಜಿಯವರ ಅಹಿಂಸಾ ತತ್ವದ ಮೂಲಕ ಭಾರತವನ್ನು ಮುನ್ನಡೆಸಬೇಕಿದೆ. ಯುವ ಬರಹಗಾರರ ಸಂಖ್ಯೆ ಹೆಚ್ಚಾಗಿದ್ದು, ಅವರು ಎಲ್ಲರ ಮನಸ್ಸು ತಟ್ಟಬೇಕಾಗಿದೆ. ಪುಸ್ತಕದ ಜೊತೆಗೆ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಎಂ. ರಮೇಶ ಕಮತಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮತಗಿಯ ಹೀರೆಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ ನಾದೂರು, ಸಹ ಪ್ರಾಧ್ಯಾಪಕ ಡಾ.ಶಾಂತರಾಜು ಉಪಸ್ಥಿತರಿದ್ದರು.

ವ್ಯಕ್ತಿಚಿತ್ರ, ಕೃತಿ ಬಿಡುಗಡೆ:

ಡಾ.ವಿ.ಎಸ್. ಕಟಗಿಹಳ್ಳಿಮಠ ಅವರ ವ್ಯಕ್ರಿಚಿತ್ರ ಸಂಪದ ಮತ್ತು ಡಾ.ಶಾಂತರಾಜು ಅವರ ಕೃತಿ ಬಿಡುಗಡೆ ಮಾಡಲಾಯಿತು. ನಿವೃತ್ತ ಪ್ರಾಂಶುಪಾಲ ಪ್ರೊ.ಚಂದ್ರಶೇಖರ ನಾದೂರು ಕೃತಿ ಹಾಗೂ ಡಾ.ಶಾಂತರಾಜು ವ್ಯಕ್ತಿಚಿತ್ರ ಸಂಪದ ಕುರಿತು ವಿಮರ್ಶೆ ಮಾಡಿದರು. ಬಳಿಕ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳಲಾಯಿತು.