ಸಾರಾಂಶ
ಬೆಂಗಳೂರು : ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಹಾಗೂ ಜೀವನಶೈಲಿಯ ಬದಲಾವಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಶ್ವ ಹೃದಯ ದಿನ ಅಂಗವಾಗಿ ಸ್ಪರ್ಶ ಆಸ್ಪತ್ರೆ ಆಯೋಜಿಸಿದ್ದ ‘ಆರೋಗ್ಯಕರ ಹೃದಯಕ್ಕಾಗಿ ನಡಿಗೆ’ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ. ಕಿರಿಯ ವಯಸ್ಸಿನಲ್ಲೇ ಹೃದಯ ರೋಗಗಳಿಗೆ ಯುವ ಜನತೆ ಸಾವಿಗೀಡಾಗುತ್ತಿದ್ದಾರೆ. ನಾವು ಸೇವಿಸುವ ಆಹಾರ, ಪದ್ಧತಿ, ಹವ್ಯಾಸಗಳು, ದುಶ್ಚಟಗಳ ಜೊತೆಗೆ ಜೀವನಶೈಲಿ ಕಾರಣವಾಗುತ್ತಿದೆ. ನಾವು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದರು.
ಆರೋಗ್ಯವಂತ ವ್ಯಕ್ತಿಗಳಿಂದ ಮಾತ್ರ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬಹುದು. ದೇಶದ ಜನರು ಆರೋಗ್ಯವಂತರಾಗಿದ್ದರೆ ಅವರ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ದೇಶ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಬಹುದು ಎಂದು ಸಚಿವರು ಹೇಳಿದರು.
ಸರ್ಕಾರದಿಂದಲೇ ನಾಗರಿಕರ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಅಭಿಯಾನ ಕೈಗೊಳ್ಳುವ ಮೂಲಕ ಪ್ರಾಥಮಿಕ ಹಂತದಲ್ಲೇ ರೋಗಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಘೋಷಿಸಿದರು.
ಸ್ಷರ್ಶ ಸಮೂಹ ಆಸ್ಪತ್ರೆ ಮುಖ್ಯಸ್ಥ ಡಾ। ಶರಣ್ ಪಾಟೀಲ್ ಮಾತನಾಡಿ, ಹೃದಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ಪರ್ಶ ಆಸ್ಪತ್ರೆ ವಿಶೇಷ ಕಾಳಜಿ ಹೊಂದಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಮೊದಲು ಹಿರಿಯ ನಾಗರಿಕರು ಹೃದಯ ಆಸ್ಪತ್ರೆಗೆ ಬರುತ್ತಿದ್ದರು. ಈಗ ಯುವಜನತೆ ಹೃದಯ ಸಮಸ್ಯೆಗಳೊಂದಿಗೆ ಬರುತ್ತಿದ್ದಾರೆ. ಹೀಗಾಗಿ, ಮಕ್ಕಳು, ಹದಿಹರೆಯದವರಲ್ಲಿ ಹೃದಯದ ಆರೋಗ್ಯದ ಕುರಿತು ತಿಳುವಳಿಕೆ ಮೂಡಿಸಬೇಕಿದೆ ಎಂದರು.