ಕಾಂಗ್ರೆಸ್‌ ಕೆಟ್‌ ವಂಚಿತನ ಮನೆಯಲ್ಲಿ ದಿಂಗಾಲೇಶ್ವರ ಶ್ರೀ

| Published : Apr 13 2024, 01:06 AM IST

ಕಾಂಗ್ರೆಸ್‌ ಕೆಟ್‌ ವಂಚಿತನ ಮನೆಯಲ್ಲಿ ದಿಂಗಾಲೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸುವ ಮೂಲಕ ರಾಜಕೀಯದಲ್ಲಿ ದಿಂಗಾಲೇಶ್ವರ ಶ್ರೀಗಳು ಸಂಚಲನ ಮೂಡಿಸಿದ್ದಾರೆ. ಇದು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಪಕ್ಷಗಳಲ್ಲಿ ಆತಂಕವನ್ನು ಸೃಷ್ಟಿಸಿದೆ.

ಹುಬ್ಬಳ್ಳಿ:

ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿರುವ ರಜತ್‌ ಉಳ್ಳಾಗಡ್ಡಿಮಠ ಮನೆಗೆ ಪಕ್ಷೇತರ ಅಭ್ಯರ್ಥಿಯಾಗಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಮುಂದಾಗಿರುವ ಶಿರಹಟ್ಟಿ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಶುಕ್ರವಾರ ಭೇಟಿ ನೀಡಿದ್ದರು. ಇದು ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸುವ ಮೂಲಕ ರಾಜಕೀಯದಲ್ಲಿ ದಿಂಗಾಲೇಶ್ವರ ಶ್ರೀಗಳು ಸಂಚಲನ ಮೂಡಿಸಿದ್ದಾರೆ. ಇದು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಪಕ್ಷಗಳಲ್ಲಿ ಆತಂಕವನ್ನು ಸೃಷ್ಟಿಸಿದೆ.

ಬಿಜೆಪಿಯ ರಾಷ್ಟ್ರೀಯ, ರಾಜ್ಯ, ಸ್ಥಳೀಯ ಮಟ್ಟದ ನಾಯಕರೆಲ್ಲರೂ ಶ್ರೀಗಳನ್ನು ಸಮಾಧಾನಪಡಿಸುವ ಯತ್ನ ನಡೆಸಿರುವುದುಂಟು. ಆದರೂ ಶ್ರೀಗಳು ಮಾತ್ರ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಹದಿನೈದು- ಇಪ್ಪತ್ತು ದಿನಗಳಿಂದಲೂ ಸಭೆ ಮೇಲೆ ಸಭೆ ನಡೆಸಿ ಬೆಂಗಳೂರಿನಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಅಲ್ಲಿಂದ ಹುಬ್ಬಳ್ಳಿಗೆ ಆಗಮಿಸಿದ ವೇಳೆಯೂ ಬೃಹತ್‌ ಮೆರವಣಿಗೆ ನಡೆಸಿದ್ದರು. ಶ್ರೀಗಳ ಸ್ಪರ್ಧೆ ಕುರಿತಂತೆ ಎರಡು ಪಕ್ಷಗಳಲ್ಲಿ ಆತಂಕವೂ ಉಂಟಾಗಿದೆ. ಜತೆ ಜತೆಗೆ ಕಾಂಗ್ರೆಸ್‌ ಪಕ್ಷವೂ ಬೆಂಬಲ ಸೂಚಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ನಡುವೆ ರಜತ್‌ ಉಳ್ಳಾಗಡ್ಡಿಮಠ ಕಾಂಗ್ರೆಸ್ಸಿನ ಯುವ ಮುಖಂಡ. ವಿಧಾನಸಭೆ ಟಿಕೆಟ್‌ ಸಿಕ್ಕಿರಲಿಲ್ಲ. ಇದೀಗ ಲೋಕಸಭೆ ಚುನಾವಣೆಯಲ್ಲೂ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಪ್ರಬಲ ಆಕಾಂಕ್ಷಿಯಾಗಿದ್ದರು. ಈಗಲೂ ಅವರಿಗೆ ಟಿಕೆಟ್‌ ಕೈತಪ್ಪಿದೆ. ಈ ಎಲ್ಲದರ ನಡುವೆ ರಜತ್‌ ಮನೆಗೆ ದಿಂಗಾಲೇಶ್ವರ ಶ್ರೀ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಜತ್‌ ಮಗಳ ತೊಟ್ಟಿಲ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡಿದ್ದರು. ಜತೆಗೆ ಕೆಲಕಾಲ ಗೌಪ್ಯವಾಗಿ ರಜತ್‌ ಜತೆಗೆ ರಾಜಕೀಯ ಕುರಿತು ಚರ್ಚೆಯನ್ನೂ ನಡೆಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ರಜತ್‌ ಉಳ್ಳಾಗಡ್ಡಿಮಠ ಮಗಳ ತೊಟ್ಟಿಲ ಕಾರ್ಯಕ್ರಮ ಇತ್ತು. ಅದಕ್ಕಾಗಿ ಆಗಮಿಸಿದ್ದೇವೆಯೇ ಹೊರತು ಇದರಲ್ಲಿ ಯಾವುದೇ ರಾಜಕಾರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಇದು ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್‌ ಪಕ್ಷದ ಮುಖಂಡರೊಬ್ಬರ ಮನೆಗೆ ಭೇಟಿ ನೀಡಿರುವುದನ್ನು ಕಾಂಗ್ರೆಸ್‌ ಪಕ್ಷ ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.ಹಿಂದೆ ರಜತ್‌ ತೊಟ್ಟಿಲ ಕಾರ್ಯಕ್ರಮದಲ್ಲಿ ಶಿರಹಟ್ಟಿ ಮಠದ ಹಿರಿಯ ಶ್ರೀಗಳು ಆಗಮಿಸಿದ್ದರು. ಇದೀಗ ರಜತ್‌ ಮಗಳ ತೊಟ್ಟಿಲ ಕಾರ್ಯಕ್ರಮಕ್ಕೆ ಆಹ್ವಾನದ ಮೇರೆಗೆ ನಾವು ಬಂದಿದ್ದೇವೆ. ಇದರಲ್ಲಿ ಯಾವುದೇ ರಾಜಕಾರಣವಿಲ್ಲ. ಕಲ್ಪನೆಗೆ ನೂರು ದಾರಿ. ರಾಜಕಾರಣ ಮಾಡಲು ಬಂದಿಲ್ಲ. ಆದರೆ ರಜತ್‌ಗೆ ಅನ್ಯಾಯವಾಗಿರುವುದಂತೂ ಸತ್ಯ. ಪಕ್ಷಕ್ಕೆ ರಜತ್‌ ಕೊಡುಗೆ ಅಪಾರವಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.