ದಿಂಗಾಲೇಶ್ವರ ಶ್ರೀಗಳು ಧಾರವಾಡದಿಂದ ಕಣಕ್ಕೆ?

| Published : Mar 24 2024, 01:36 AM IST

ಸಾರಾಂಶ

. ಇಲ್ಲಿನ ಭಕ್ತರೆಲ್ಲರೂ ಶ್ರೀಗಳಿಗೆ ನೀವು ಚುನಾವಣೆಗೆ ನಿಲ್ಲಬೇಕು. ನಿಮ್ಮಂಥವರು ರಾಜಕಾರಣಕ್ಕೆ ಬರಬೇಕು. ಈ ಸಲ ನೀವು ಕಣಕ್ಕಿಳಿಯಿರಿ ಎಂದು ಒತ್ತಾಯಿಸುತ್ತಿದ್ದಾರಂತೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಈ ಸಲ ಗದಗ ಜಿಲ್ಲೆಯ ಶಿರಹಟ್ಟಿ ಫಕ್ಕೀರೇಶ್ವರ ಮಠದ ಫಕ್ಕೀರ ದಿಂಗಾಲೇಶ್ವರ ಶ್ರೀಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದು ವೇಳೆ ಕಣಕ್ಕಿಳಿದರೆ 20 ವರ್ಷಗಳ ಬಳಿಕ ಕಾವಿಧಾರಿಯೊಬ್ಬರು ಕಣಕ್ಕಿಳಿದಂತಾಗಲಿದೆ.

ದಿಂಗಾಲೇಶ್ವರ ಶ್ರೀಗಳು ಧಾರವಾಡ ಕ್ಷೇತ್ರಕ್ಕೆ ಸಾಕಷ್ಟು ಪರಿಚಿತರು. ಈ ಭಾಗದಲ್ಲಿ ಪ್ರವಚನಗಳನ್ನೆಲ್ಲ ಮಾಡಿದವರು. ಶಿರಹಟ್ಟಿ ಮಠದ ಭಕ್ತರ ಸಂಖ್ಯೆಯೂ ಇಲ್ಲಿ ಹೇರಳವಾಗಿದೆ. ಇಲ್ಲಿನ ಭಕ್ತರೆಲ್ಲರೂ ಶ್ರೀಗಳಿಗೆ ನೀವು ಚುನಾವಣೆಗೆ ನಿಲ್ಲಬೇಕು. ನಿಮ್ಮಂಥವರು ರಾಜಕಾರಣಕ್ಕೆ ಬರಬೇಕು. ಈ ಸಲ ನೀವು ಕಣಕ್ಕಿಳಿಯಿರಿ ಎಂದು ಒತ್ತಾಯಿಸುತ್ತಿದ್ದಾರಂತೆ. ಇದಲ್ಲದೇ, ಬೇರೆ ಬೇರೆ ರಾಜಕೀಯ ಪಕ್ಷಗಳು ಕೂಡ ಕರೆ ಮಾಡಿ ಚುನಾವಣಾ ಕಣಕ್ಕೆ ನಿಲ್ಲುವಂತೆ ಆಗ್ರಹಿಸುತ್ತಿದ್ದಾರಂತೆ.

ಈಗಾಗಲೇ ಅಭ್ಯರ್ಥಿಗಳನ್ನು ಅಖೈರುಗೊಳಿಸಿ ಘೋಷಿಸಿರುವ ಪಕ್ಷಗಳು ಸಹ ಚುನಾವಣೆಗೆ ನಿಲ್ಲಿ ಎಂದು ಆಗ್ರಹಿಸುತ್ತಿವೆ ಅಂತೆ. ಆದರೆ, ಯಾರೂ ಟಿಕೆಟ್‌ ಕೊಡುತ್ತೇವೆ ಬನ್ನಿ ಎಂದು ಕರೆಯುತ್ತಿಲ್ಲ. ಬದಲಿಗೆ ಪಕ್ಷೇತರರಾಗಿಯೇ ನಿಲ್ಲಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿವೆ. ಹೀಗಾಗಿ, ಮತಗಳನ್ನು ವಿಭಜನೆ ಮಾಡುವ ಉದ್ದೇಶ ಇದರಲ್ಲಿ ಅಡಗಿದೆಯೇನೋ ಎಂಬ ಗುಸು ಗುಸು ಕೂಡ ಶುರುವಾಗಿದೆ.

ಫೋನ್‌ ಮೂಲಕ ಶ್ರೀಗಳಿಗೆ ಕರೆ ಮಾಡಿ, ಮಠಕ್ಕೆ ನೇರವಾಗಿ ಬಂದು ಭಕ್ತರು ಆಗ್ರಹಿಸುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಶ್ರೀಗಳು ಮಾತ್ರ ಯಾವುದೇ ಬಗೆಯ ನಿರ್ಧಾರ ಕೈಗೊಂಡಿಲ್ಲವಂತೆ. ಶೀಘ್ರದಲ್ಲೇ ಭಕ್ತರ ಸಭೆ ಕರೆದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ದಿಂಗಾಲೇಶ್ವರ ಶ್ರೀಗಳು ಕಣಕ್ಕಿಳಿಯಲು ನಿರ್ಧರಿಸಿದರೆ, 20 ವರ್ಷದ ಬಳಿಕ ಕಾವಿಧಾರಿಯೊಬ್ಬರು ಕಣಕ್ಕಿಳಿದಂತಾಗುತ್ತದೆ.

ಹಿಂದೆ 2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕನ್ನಡನಾಡು ಪಕ್ಷದಿಂದ ಮಾತೆ ಮಹಾದೇವಿ ಕಣಕ್ಕಿಳಿದಿದ್ದರು. ಅದಾದ ಮೇಲೆ ನಡೆದ ಮೂರು ಚುನಾವಣೆಯಲ್ಲಿ ಯಾರೊಬ್ಬರೂ ಸ್ಪರ್ಧಿಸಿರಲಿಲ್ಲ. ಇದೀಗ ದಿಂಗಾಲೇಶ್ವರ ಶ್ರೀಗಳು ಕಣಕ್ಕಿಳಿದರೆ 20 ವರ್ಷದ ನಂತರ ಕಾವಿಧಾರಿಯೊಬ್ಬರು ಕಣಕ್ಕಿಳಿದಂತಾಗುತ್ತದೆ.

ಆದರೆ ಶ್ರೀಗಳು ಈ ವರೆಗೂ ನಿರ್ಧಾರ ಮಾಡಿಲ್ಲ. ಚುನಾವಣಾ ಅಖಾಡಕ್ಕೆ ಇಳಿಯುತ್ತಾರೋ ಇಲ್ವೋ ಗೊತ್ತಿಲ್ಲ. ಒಟ್ಟಿನಲ್ಲಿ ಶ್ರೀಗಳು ಕಣಕ್ಕಿಳಿಯುವ ಕುರಿತು ಕ್ಷೇತ್ರದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿರುವುದಂತೂ ಸತ್ಯ.ನಿರ್ಧಾರ ಕೈಗೊಂಡಿಲ್ಲ

ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಭಕ್ತರು, ವಿವಿಧ ರಾಜಕೀಯ ಪಕ್ಷಗಳು ಮುಖಂಡರು ಆಗ್ರಹಿಸುತ್ತಿದ್ದಾರೆ. ಆದರೆ, ನಾನು ಈ ವರೆಗೂ ಯಾವುದೇ ಬಗೆಯ ನಿರ್ಧಾರ ಕೈಗೊಂಡಿಲ್ಲ.

- ಫಕ್ಕೀರ ದಿಂಗಾಲೇಶ್ವರ ಶ್ರೀಗಳು, ಫಕ್ಕೀರೇಶ್ವರ ಮಠ, ಶಿರಹಟ್ಟಿ