ಸಾರಾಂಶ
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರ ಹಾಗೂ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಡ್ರೋನ್ ಪ್ರದರ್ಶನ ಯಶಸ್ಸು ಕಂಡಿದೆ. ಈ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣವಾದ ಜಿಲ್ಲಾಡಳಿತದ ಅಧಿಕಾರಿಗಳು, ವಿದ್ಯುತ್ ಗುತ್ತಿಗೆದಾರರು, ಪ್ರಾಯೋಜಕರು ಸೇರಿದಂತೆ ಪ್ರತಿಯೊಬ್ಬರಿಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ವತಿಯಿಂದ ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರ ಹಾಗೂ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಡ್ರೋನ್ ಪ್ರದರ್ಶನ ಯಶಸ್ಸು ಕಂಡಿದೆ. ಈ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣವಾದ ಜಿಲ್ಲಾಡಳಿತದ ಅಧಿಕಾರಿಗಳು, ವಿದ್ಯುತ್ ಗುತ್ತಿಗೆದಾರರು, ಪ್ರಾಯೋಜಕರು ಸೇರಿದಂತೆ ಪ್ರತಿಯೊಬ್ಬರಿಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ವತಿಯಿಂದ ಅಭಿನಂದಿಸಲಾಯಿತು.ಮೈಸೂರು- ನಂಜನಗೂಡು ರಸ್ತೆಯಲ್ಲಿರುವ ಕಡಕೊಳದ ಕೆಇಬಿ ಎಂಜಿನಿಯರ್ಸ್ ಅತಿಥಿ ಗೃಹದ ಸಭಾಂಗಣದಲ್ಲಿ ನಡೆದ ಕೃತಜ್ಞತಾ ಸಮರ್ಪಣಾ ಸಮಾರಂಭವನ್ನು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸಿದರು. ಇದೇ ವೇಳೆ ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನ ಆಯೋಜಿಸಲು ಸಹಕಾರ ನೀಡಿದ ಮತ್ತು ಅದರ ಯಶಸ್ಸಿಗಾಗಿ ಶ್ರಮಿಸಿದ ಪ್ರತಿಯೊಬ್ಬರನ್ನು ನಿಗಮದ ಪ್ರಮುಖ ಅಧಿಕಾರಿಗಳ ಜೊತೆಗೂಡಿ ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.
ಬಳಿಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ದಸರಾ ದೀಪಾಲಂಕಾರವನ್ನು ಆಕರ್ಷಕವಾಗಿ ಮಾಡುವಂತೆ ಸಿಎಂ ಹಾಗೂ ಡಿಸಿಎಂ ಅವರು ಉನ್ನತ ಮಟ್ಟದ ಸಭೆಯಲ್ಲಿ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ಈ ಬಾರಿಯ ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಆ ಮೂಲಕ ಸೆಸ್ಕ್ ವಿಶ್ವ ಮಟ್ಟದಲ್ಲಿ ಗಮನ ಸಳೆದಿದೆ. ಆದರೆ, ಈ ಯಶಸ್ಸಿಗೆ ಜಿಲ್ಲಾಡಳಿತದ ಪ್ರತಿಯೊಬ್ಬ ಅಧಿಕಾರಿಗಳ ಸಹಕಾರ ಕಾರಣವಾಗಿದೆ. ಎಲ್ಲ ಅಧಿಕಾರಿಗಳು ಬದ್ಧತೆ ಹಾಗೂ ಪ್ರೇರಣೆಯಿಂದ ಕೆಲಸ ಮಾಡಿದ್ದರ ಪರಿಣಾಮ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ನಡೆಯಿತು ಎಂದರು.ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ದೀಪಾಲಂಕಾರವನ್ನು ವಿನೂತನ ರೀತಿಯಲ್ಲಿ ಮಾಡಬೇಕೆಂಬ ನಿರ್ಧಾರದೊಂದಿಗೆ ನಿಗಮದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಬದ್ಧತೆ ಮತ್ತು ಜವಾಬ್ದಾರಿಯಿಂದ ಹಗಲಿರುಳು ಶ್ರಮಿಸಿದರು. ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಡ್ರೋನ್ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಜಿಲ್ಲಾಡಳಿತದಿಂದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಮುಡಾ ಆಯುಕ್ತ ರಘುನಂದನ್, ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಸೆಸ್ಕ್ ಜಾಗೃತ ದಳದ ಎಸ್ಪಿ ಸವಿತಾ ಹುಗಾರ್, ಡಿಸಿಪಿಗಳಾದ ಎಂ. ಮುತ್ತುರಾಜ್, ಎಸ್. ಜಾಹ್ನವಿ, ಸೆಸ್ಕ್ ಎಂಡಿ ಜಿ. ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಮುನಿಗೋಪಾಲ್ ರಾಜು, ಮುಖ್ಯ ಎಂಜಿನಿಯರ್ ಗಳಾದ ದಿವಾಕರ್, ಎಂ. ಶ್ರೀಕಾಂತ್, ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್, ಸಿಜಿಎಂ ಶರಣಮ್ಮ, ಮುಖ್ಯ ಆರ್ಥಿಕ ಅಧಿಕಾರಿ ರೇಣುಕಾ, ಆಂತರಿಕ ಲೆಕ್ಕ ಪರಿಶೋಧಕಿ ನಿಂಗರಾಜಮ್ಮ ಮೊದಲಾದವರು ಇದ್ದರು.ಡ್ರೋನ್ ಶೋ, ದೀಪಾಲಂಕಾರಕ್ಕೆ ಎಲ್ಲೆಡೆಯೂ ಮೆಚ್ಚುಗೆ ದೊರೆತಿದ್ದು, ನಿಗಮದ ಹೆಸರು ಎಲ್ಲೆಡೆ ಪಸರಿಸಿದೆ. ಜಿಲ್ಲಾಡಳಿತದ ಅಧಿಕಾರಿಗಳು, ಗುತ್ತಿಗೆದಾರರು, ಪ್ರಾಯೋಜಕರು ಎಲ್ಲ ಸಹಕಾರ ನೀಡಿದ್ದರು. ಈ ಯಶಸ್ಸಿನಲ್ಲಿ ಭಾಗಿಯಾಗಿದ್ದು ಖುಷಿ ನೀಡಿದೆ, ನನಗೆ ಇದು ಮರೆಯಲಾಗದ ಸಂಭ್ರಮ.- ಜಿ.ಶೀಲಾ, ಎಂಡಿ, ಸೆಸ್ಕ್