ವಚನ ಸಾಹಿತ್ಯದಿಂದ ಕನ್ನಡ ನುಡಿ ಶ್ರೀಮಂತವಾಯಿತು

| Published : Jul 30 2024, 12:36 AM IST

ಸಾರಾಂಶ

ಕಾಯಕ ಮತ್ತು ದಾಸೋಹಕ್ಕೆ ಮಹತ್ವಕೊಟ್ಟ ಶರಣರು ನುಡಿದಂತೆ ನಡೆದರು

ಕನ್ನಡಪ್ರಭ ವಾರ್ತೆ ಮೈಸೂರು

ವಚನ ಸಾಹಿತ್ಯದಿಂದ ಕನ್ನಡ ನುಡಿ ಶ್ರೀಮಂತವಾಯಿತು ಎಂದು ಜೆಎಸ್ಎಸ್ ಮಹಾವಿದ್ಯಾಪೀಠ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ತಿಳಿಸಿದರು.ನಗರದ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ನಡೆದ ಶಿವಾನುಭವ ದಾಸೋಹ ಮಾಲಿಕೆಯ 315ನೇ ಕಾರ್ಯಕ್ರಮದಲ್ಲಿ ಶರಣರ ನಡೆ- ನುಡಿ ಸಿದ್ಧಾಂತ ಕುರಿತು ಉಪನ್ಯಾಸ ನೀಡಿದ ಅವರು, ಕಾಯಕ ಮತ್ತು ದಾಸೋಹಕ್ಕೆ ಮಹತ್ವಕೊಟ್ಟ ಶರಣರು ನುಡಿದಂತೆ ನಡೆದರು. ಅರಿವೇ ಗುರು ಎಂದರು. ಸ್ವಹಿತಕ್ಕಾಗಿ ಸಾಧನೆ ಮಾಡದೇ ಸಮಾಜದ ಒಳಿತಿಗಾಗಿ ಶ್ರಮಿಸಿದರು ಎಂದರು.ಬಸವಣ್ಣನವರು ಕಟ್ಟಿದ ಮಹಾಮನೆಯಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರು ಒಟ್ಟುಗೂಡಿ ಚಿಂತನ- ಮಂಥನ ನಡೆಸುತ್ತಿದ್ದರು. ಮಹಿಳೆಯರಿಗೂ ಪುರುಷರಷ್ಟೇ ಸಮಾನವಾದ ಸ್ಥಾನಮಾನಗಳನ್ನು ನೀಡಲಾಗಿತ್ತು. ನಡೆ-ನುಡಿ ಶುದ್ಧವಾಗಿದ್ದರೆ ನಮ್ಮಲ್ಲೇ ಭಗವಂತನನನ್ನು ಕಂಡುಕೊಳ್ಳಬಹುದು ಎಂದು ಅವರು ಹೇಳಿದರು.ಸಾಮಾನ್ಯ ಅಭಿವೃದ್ಧಿ ವಿಭಾಗದ ಪ್ರಭಾರ ನಿರ್ದೇಶಕ ಕೆ.ಎಲ್. ರೇವಣ್ಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಅಂಕನಾಥೇಶ್ವರ ಗ್ರಾಫಿಕ್ಸ್ ಅಂಡ್ ಪ್ರಿಂಟರ್ಸ್ ಮಾಲೀಕ ಎಂ. ಶಿವಪ್ರಸಾದ್ ಕಾರ್ಯಕ್ರಮದ ಸೇವಾರ್ಥದಾರರಾಗಿದ್ದರು. ಎನ್. ಚೂಡಾಮಣಿ ವಚನಗಾಯನ ನಡೆಸಿಕೊಟ್ಟರು. ಎ.ಜಿ. ಭವಾನಿ ಶಿವಪ್ರಸಾದ್ ಸ್ವಾಗತಿಸಿದರು. ನಗರ್ಲೆ ಶಿವಕುಮಾರ್ ವಂದಿಸಿದರು. ಪಲ್ಲವಿ ನಿರೂಪಿಸಿದರು.