ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ. ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬಲ್ಲವರಾಗಿದ್ದಾರೆ. ಘನತೆಯಿಂದ, ಗೌರವಯುತವಾಗಿ ಬಾಳನ್ನು ಕಟ್ಟಿಕೊಳ್ಳಲು ಅವರಿಗೆ ಎಲ್ಲರ ಸಹಾಯ ಬೇಕಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ. ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬಲ್ಲವರಾಗಿದ್ದಾರೆ. ಘನತೆಯಿಂದ, ಗೌರವಯುತವಾಗಿ ಬಾಳನ್ನು ಕಟ್ಟಿಕೊಳ್ಳಲು ಅವರಿಗೆ ಎಲ್ಲರ ಸಹಾಯ ಬೇಕಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಪ್ರಗತಿಯಲ್ಲಿ ವಿಶೇಷಚೇತನರೂ ಸಮಾನವಾಗಿ ಭಾಗಿಯಾಗಬೇಕು. ಎಲ್ಲರೂ ಅವರನ್ನು ಸಮಾನ ದೃಷ್ಟಿಯಿಂದ ನೋಡಬೇಕು. ವಿಕಲಚೇತನರಿಗೆ ಸಹಾಯ ಮಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಇದೇ ನಿಜವಾದ ಸಾಮಾಜಿಕ ನ್ಯಾಯ ಎಂದು ತಿಳಿಸಿದರು. ಪೋಷಕರು ವಿಕಲಚೇತನ ಮಗು ಹುಟ್ಟಿದೆ ಎಂದು ಅಳುತ್ತಾ ಕೂರದೆ ಆ ಮಗುವನ್ನು ಸ್ವತಂತ್ರವಾಗುಳಿಯಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಮಾತನಾಡಿ, ದಿವ್ಯಾಂಗ ಚೇತನರಲ್ಲದೇ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಸೇರಿದಂತೆ 3 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಎಲ್ಲರಿಗೂ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ನಡೆಸಲು ಉಚಿತವಾಗಿ ವಕೀಲರನ್ನು ನೇಮಿಸಿಕೊಡಲಾಗುವುದು ಎಂದು ಹೇಳಿದರು.ಒಂದು ವೇಳೆ ಪ್ರಕರಣ ದಾಖಲಿಸುವ ಸಂದರ್ಭ ನ್ಯಾಯಾಲಯದ ಶುಲ್ಕ ಪಾವತಿಸಲು ಹಣ ಇಲ್ಲದಿದ್ದರೆ ಕಾನೂನು ಸೇವಾ ಪ್ರಾಧಿಕಾರವೇ ನ್ಯಾಯಾಲಯದ ಶುಲ್ಕ ಭರಿಸುತ್ತದೆ, ವಕೀಲರಿಗೆ ಒಂದು ಪ್ರಕರಣಕ್ಕೆ ಇಂತಿಷ್ಟು ಶುಲ್ಕವೆಂದು ನೀಡಲಾಗುತ್ತದೆ ಎಂದ ಅವರು ಅಸಹಾಯಕರಿಗೆ ಸಹಾಯ ಮಾಡುವ ದೃಷ್ಟಿಯಿಂದ ಪ್ರತಿ ತಾಲೂಕಿನಲ್ಲಿಯೂ ಕಾನೂನು ಸೇವಾ ಸಮಿತಿಗಳಿದ್ದು ಅವುಗಳ ಸದುಪಯೋಗ ಪಡೆಯಬಹುದೆಂದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠಶಾಲೆ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ವೈ.ಆಲದಾರ್ತಿ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಗೋಪಾಲಕೃಷ್ಣ, ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠಶಾಲೆ ಉಪಾಧ್ಯಕ್ಷ ನಸ್ರುಲ್ಲಾ ಷರೀಫ್, ಕರ್ನಾಟಕ ಕಿವುಡರ ಸಂಘದ ಅಧ್ಯಕ್ಷ ಶಂಕರ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಎಂ.ವೀರಭದ್ರಯ್ಯ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಇದ್ದರು.