ಸಾರಾಂಶ
ಭಾಗ್ಯನಗರದ ವಿದ್ಯಾವಿಕಾಸ ಶಾಲೆಯಲ್ಲಿ ಪಾನಘಂಟಿ ಫೌಂಡೇಶನ್ ಹಾಗೂ ವಾಸವಿ ಕ್ಲಬ್ ಭಾಗ್ಯನಗರ ಇವುಗಳ ಸಂಯುಕ್ತಾಶ್ರಯದಲ್ಲಿ ಅಂಧ ಮಕ್ಕಳ ಯೋಗ ಮತ್ತು ಮಲ್ಲಗಂಬ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಕೊಪ್ಪಳ:
ಭಾಗ್ಯನಗರದ ವಿದ್ಯಾವಿಕಾಸ ಶಾಲೆಯಲ್ಲಿ ಪಾನಘಂಟಿ ಫೌಂಡೇಶನ್ ಹಾಗೂ ವಾಸವಿ ಕ್ಲಬ್ ಭಾಗ್ಯನಗರ ಇವುಗಳ ಸಂಯುಕ್ತಾಶ್ರಯದಲ್ಲಿ ಅಂಧ ಮಕ್ಕಳ ಯೋಗ ಮತ್ತು ಮಲ್ಲಗಂಬ ಪ್ರದರ್ಶನ ಕಾರ್ಯಕ್ರಮ ನಡೆಯಿತು.ಭಾಗ್ಯನಗರದ ಶಂಕರಾಚಾರ್ಯ ಮಠದ ಶಿವಪ್ರಕಾಶಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಧನೆಗೆ ನ್ಯೂನ್ಯತೆಗಳು ಅಡ್ಡಿಯಾಗುವುದಿಲ್ಲ. ಕಣ್ಣಿಲ್ಲದವರು ಅಂತರಾತ್ಮದಿಂದ ಸಮಾಜವನ್ನು ನೋಡುತ್ತಾರೆ. ಕಣ್ಣಿಲ್ಲದವರೆ ಛಲದೊಂದಿಗೆ ಬದುಕು ಕಟ್ಟಿಕೊಳ್ಳುವ ನಿಜವಾದ ಸ್ವಾವಲಂಬಿಗಳು. ಅವರ ಬದುಕು ಜೀವನಶೈಲಿ ಆದರ್ಶ ಎಂದು ತಿಳಿಸಿದರು.
ಇದೇ ವೇಳೆ ಭಾಗ್ಯನಗರದ ವಾಸವಿ ಕ್ಲಬ್‌ನ ಅಧ್ಯಕ್ಷೆ ಶಾರದಾ ರಾಘವೇಂದ್ರ ಪಾನಘಂಟಿ ಮಾತನಾಡಿ, ನಿಜವಾದ ಸಾಧಕರು ಎಂದರೆ ಕಣ್ಣಿಲ್ಲದವರೆ. ಕಣ್ಣಿಲ್ಲದವರೆ ಕಣ್ಣೆತ್ತಿ ನೋಡುವ ಸಾಧನೆ ಮಾಡಿದ್ದಾರೆ. ಯೋಗ ಮತ್ತು ಮಲ್ಲಗಂಬದಲ್ಲಿ ರಾಷ್ಟ್ರೀಯ ಸಾಧನೆ ಮಾಡಿದ ಇವರು ಸಮಾಜಕ್ಕೆ ಮಾದರಿ ಎಂದರು.ಹೊಳೆ ಆಲೂರಿನ ಜ್ಞಾನ ಸಿಂಧು ವಸತಿ ಶಾಲೆಯ ಅಂಧಮಕ್ಕಳು ಯೋಗ ಮತ್ತು ಮಲ್ಲಗಂಬ ಪ್ರದರ್ಶನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅಂಧ ಮಕ್ಕಳನ್ನು ಪೋಷಿಸಿ ಮಾರ್ಗದರ್ಶನ ಮಾಡುತ್ತಿರುವ ತುಳಸಮ್ಮ ಹಾಗೂ ಶಿವಾನಂದ ಕೇಲೂರು ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪಾನಘಂಟಿ ಫೌಂಡೇಷನ್ ವತಿಯಿಂದ ಮಕ್ಕಳಿಗೆ ಮಲಗಲು ಮಂಚವನ್ನು ಕೊಡುಗೆಯಾಗಿ ನೀಡಲಾಯಿತು. ಅಂಧ ಮಕ್ಕಳ ಸಾಧನೆಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿ ಸಿಹಿ ಹಂಚಿದರು. ಕಾರ್ಯಕ್ರಮದ ನೆನಪಿಗಾಗಿ ಸಸಿನೆಟ್ಟು ಪರಿಸರ ಕಾಳಜಿ ಮೆರೆದರು.
ಕಾರ್ಯಕ್ರಮದಲ್ಲಿ ಲಲಿತಾ ಕಬ್ಬೇರ್, ಸುಮಾ ಮಹೇಶ್, ಜಯಾ ಶೆಡ್ಮಿ, ಸಂಗೀತಾ, ವಿದ್ಯಾಲಕ್ಷ್ಮೀ ಮೇಘರಾಜ, ರಚನಾ ಪಾನಘಂಟಿ, ವೈಷ್ಣವಿ, ಪ್ರಿಯದರ್ಶಿನಿ, ಪೂಜಾ, ವಾದಿರಾಜ ದೇಸಾಯಿ, ಬಸವರಾಜ, ನಿರ್ಮಲಾ ಪಾಟೀಲ್ ಮತ್ತಿತರರಿದ್ದರು.