ಸಾರಾಂಶ
ಈಚಲು ಗಿಡ ತೆಂಗಿನ ಮರಗಳಂತೆ ಬಹುಪಯೋಗಿಯಾಗಿವೆ. ಈಚಲ ಮರದ ಗರಿಗಳಿಂದ ಚಾಪೆ, ಒಕ್ಕಲುತನದಲ್ಲಿ ಬಳಕೆಯಾಗುವ ತಟ್ಟೆ, ಹೆಡಗಿ, ಜೆಲ್ಲೆಡಗಿ, ಬಂಡಿಗೆ ಬಳಸುತ್ತಿದ್ದ ಅಕ್ಕಪಕ್ಕದಲ್ಲಿ ಗಾಲಿಗಳ ಹತ್ತಿರದ ತಟ್ಟಿ ಹಾಗೂ ಬೆಲ್ಲ ಪ್ಯಾಕ್ ಮಾಡಲು ಬಳಸಲಾಗುತ್ತಿತ್ತು.
ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ:ಬಡವರ ಖರ್ಜೂರ ಎಂದೇ ಖ್ಯಾತಿ ಪಡೆದ, ನೈಸರ್ಗಿಕವಾಗಿ ಹಳ್ಳ-ಕೊಳ್ಳಗಳಲ್ಲಿ ಬೆಳೆಯುವ ಈಚಲು ಹಣ್ಣು ಇತ್ತೀಚೆಗೆ ಅಪರೂಪವಾಗಿವೆ.ಗ್ರಾಮೀಣ ಪ್ರದೇಶದ ಹಳ್ಳದ ದಡ, ನಾಲೆಗಳ ಪಕ್ಕ, ಜೌಗು ಪ್ರದೇಶದಲ್ಲಿ ಹೇರಳವಾಗಿ ಈಚಲ ಗಿಡ ಬೆಳೆಯುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಅವುಗಳ ಸಂತತಿಯೂ ಕಡಿಮೆಯಾಗಿದೆ.
ತಾಲೂಕಿನ ಮೆಣಸಗೇರಿ, ಕ್ಯಾದಿಗುಪ್ಪಾ, ಕಡೇಕೊಪ್ಪ, ಕೇಸೂರು, ಬಸಾಪುರ ಸೀಮಾ, ನಿಡಶೇಸಿ, ವಣಗೇರಿ, ಬಿಜಕಲ್, ಹೆಸರೂರು ಸೇರಿದಂತೆ ವಿವಿಧ ಪ್ರದೇಶಗಳ ಹಳ್ಳದ ದಡದಲ್ಲಿ ಈಚಲ ಗಿಡ ಕಾಣಸಿಗುತ್ತವೆ. ಈ ಹಣ್ಣು ಖರ್ಜೂರ ಮತ್ತು ಉತ್ತತ್ತಿ ತಳಿ ಹೋಲುವಂತಿದೆ.ಬಹೂಪಯೋಗಿ:
ಈಚಲು ಗಿಡ ತೆಂಗಿನ ಮರಗಳಂತೆ ಬಹುಪಯೋಗಿಯಾಗಿವೆ. ಈಚಲ ಮರದ ಗರಿಗಳಿಂದ ಚಾಪೆ, ಒಕ್ಕಲುತನದಲ್ಲಿ ಬಳಕೆಯಾಗುವ ತಟ್ಟೆ, ಹೆಡಗಿ, ಜೆಲ್ಲೆಡಗಿ, ಬಂಡಿಗೆ ಬಳಸುತ್ತಿದ್ದ ಅಕ್ಕಪಕ್ಕದಲ್ಲಿ ಗಾಲಿಗಳ ಹತ್ತಿರದ ತಟ್ಟಿ ಹಾಗೂ ಬೆಲ್ಲ ಪ್ಯಾಕ್ ಮಾಡಲು ಬಳಸಲಾಗುತ್ತಿತ್ತು. ಆದರೆ, ಮಳೆ ಪ್ರಮಾಣದ ಕುಂಠಿತವಾದ ಪರಿಣಾಮ ಈಚಲು ಗಿಡಗಳ ಸಂಖ್ಯೆ ಕಡಿಮೆಯಾಗಿದ್ದು, ಇದನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದ ನೂರಾರು ಕುಂಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ.ಹೆಚ್ಚು ಪೌಷ್ಟಿಕಾಂಶ:
ಈಚಲು ಹಣ್ಣುಗಳಲ್ಲಿ ಹೆಚ್ಚು ಪೌಷ್ಟಿಕಾಂಶಗಳಿದ್ದು ಬಡವರ ಖರ್ಜೂರ ಎನಿಸಿಕೊಂಡಿವೆ. ಏಪ್ರಿಲ್, ಮೇ ಮತ್ತು ಜೂನ್ ಇದರ ಸುಗ್ಗಿ ಕಾಲ. ಈ ಮೊದಲು ಗ್ರಾಮೀಣ ಮಕ್ಕಳು ಬೆಳಗ್ಗೆ, ಸಂಜೆ ಈಚಲು ಗಿಡ ಹುಡುಕಿಕೊಂಡು ಹೋಗಿ ಹಣ್ಣು ಆಯ್ದುಕೊಳ್ಳುತ್ತಿದ್ದರು. ಕೆಲವರು ಕಾಯಿಯ ಗೊನೆ ಕೊಯ್ದುಕೊಂಡು ಬಂದು ಹಣ್ಣು ಮಾಡಿ ಶಾಲೆ ಮತ್ತು ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡಿ ಉಪಜೀವನ ನಡೆಸುತ್ತಿದ್ದರು. ಖರ್ಜೂರದಂತೆ ಸಿಹಿಯಾಗಿರುವ ಈಚಲು ಹಣ್ಣು ಸವಿಯಲು ಇಷ್ಟಪಡುತ್ತಿದ್ದರು. ಈಗ ತಿನ್ನುವವರ ಜತೆಗೆ ಮಾರಾಟಗಾರರು ಇಲ್ಲದಂತೆ ಆಗಿದೆ.ನಾವು ಸಣ್ಣವರಿದ್ದಾಗ ಶಾಲೆ ಬಿಟ್ಟ ತಕ್ಷಣ ಈಜಲು ಗಿಡ ಹುಡುಕಿಕೊಂಡು ಹೋಗಿ ತಿನ್ನುತ್ತಿದ್ದೇವು. ಆದರೆ, ಇದು ಹುಡುಕಿದರು ಸಿಗುತ್ತಿಲ್ಲ. ಮಕ್ಕಳಿಗೆ ತೋರಿಸುವ ಕಾಲ ಬಂದಿದೆ ಎಂದು ಶ್ರೀನಿವಾಸ ಕಂಟ್ಲಿ, ಮಲ್ಲಪ್ಪ ಹೊಸವಕ್ಕಲ್, ಸಂಗಮೇಶ ಲೂತಿಮಠ, ಅಮರೇಶ ತಾರಿವಾಳ, ವಿಷ್ಣು ಅಂಗಡಿ ತಮ್ಮ ಹಳೆಯ ನೆನಪು ಹಂಚಿಕೊಂಡಿದ್ದಾರೆ.ನೀರು ಹರಿಯುವ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುವ ಈಚಲು ಗಿಡದ ಹಣ್ಣುಗಳಲ್ಲಿ ಔಷಧಿಯ ಗುಣವಿದ್ದು ಆಧುನಿಕತೆಯ ಪರಿಣಾಮವಾಗಿ ಹಣ್ಣುಗಳನ್ನು ತಿನ್ನುವುದು ಕಡಿಮೆಯಾಗಿದೆ.
ರೇಷ್ಮಾ ಕಂದಕೂರು, ಲೇಖಕಿಈ ಹಿಂದೆ ಈಚಲು ಗಿಡಗಳಿಂದ ಕಸಬರಿಗಿ, ಚಾಪೆ, ಪುಟ್ಟಿ ಸೇರಿದಂತೆ ಅನೇಕ ವಸ್ತುಗಳನ್ನು ತಯಾರಿಸಲಾಗುತ್ತಿತ್ತು. ಆಧುನಿಕತೆಯ ಪರಿಣಾಮವಾಗಿ ಈಚಲು ಗಿಡಗಳಿಂದ ಮಾಡಿದ ವಸ್ತುಗಳ ಬಳಕೆ ಕಡಿಮೆಯಾಗಿದೆ.ರವಿಕುಮಾರ ಭಜಂತ್ರಿ, ವ್ಯಾಪಾರಸ್ಥ