ಸಾರಾಂಶ
- ದೇವನಾಯಕನಹಳ್ಳಿ ಕೃಷಿ ಪತ್ತಿನ ಸಂಘ ವಾರ್ಷಿಕ ಮಹಾಸಭೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣಕ್ಕೆ ಸಮೀಪದ ದೇವನಾಯಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಮೂರು ವರ್ಷಗಳ ಹಿಂದೆ ತನ್ನ ಮೂಲ ಸಂಘದಿಂದ ಬೇರ್ಪಟ್ಟು, ಅಸ್ತಿತ್ವಕ್ಕೆ ಬಂದಿದೆ. ಪ್ರಸಕ್ತ ಸಾಲಿನಲ್ಲಿ ₹5.44 ಕೋಟಿ ಸಾಲ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಜಿ. ಪ್ರಕಾಶ್ ಹೇಳಿದರು.ಬುಧವಾರ ಸರ್ಕಾರಿ ನೌಕರರ ಸಂಘದಲ್ಲಿ ನಡೆದ ವಾರ್ಷಿಕ ಮಹಾಸಭೆ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ 1887 ಷೇರುದಾರರಿದ್ದಾರೆ. ಮುಂಬರುವ ದಿನಗಳಲ್ಲಿ ಅವರವರ ಜಮೀನುಗಳಿಗೆ ಅನುಗುಣವಾಗಿ ಸಾಲ ಸೌಲಭ್ಯ ಕಲ್ಪಿಸುವ ಸಂಬಂಧ ಜಿಲ್ಲಾ ಬ್ಯಾಂಕ್‌ನೊಂದಿಗೆ ಚರ್ಚಿಸಿ, ಅನುಕೂಲ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಸಂಘದ ಹೆಸರಿನಲ್ಲಿ 2 ಗುಂಟೆ ಜಮೀನಿದೆ. ಅಲ್ಲಿ ಸಂಘದ ಕಚೇರಿ ನಿರ್ಮಾಣ ಉದ್ದೇಶದಿಂದ ನಬಾರ್ಡ್ ಸೇರಿದಂತೆ, ಶಾಸಕರ ಅನುದಾನದಿಂದ ಮತ್ತು ಇತರೆ ಮೂಲಗಳಿಂದ ಸಾಲ ಸೌಲಭ್ಯ ಪಡೆಯಲು ಎಲ್ಲ ಸದಸ್ಯರು ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು. ಆಗ ಎಲ್ಲ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ಸೂಚಿಸಿದರು.ಸಂಘದಿಂದ ರೈತರಿಗೆ ಬೀಜ, ಗೊಬ್ಬರ, ಔಷಧಿ ವಿತರಿಸುವ ಸಂಬಂಧ ನಮ್ಮ ಸಂಘದ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಮುಂದಿನ ವರ್ಷದಿಂದಲೇ ಬಿತ್ತನೆಬೀಜ, ಗೊಬ್ಬರ, ಔಷಧಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷದಲ್ಲಿ ₹10 ಲಕ್ಷ ಆರ್ಥಿಕ ಹೊರೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಹೊರೆಯನ್ನು ತಗ್ಗಿಸಿದ್ದು, ₹5 ಲಕ್ಷಕ್ಕೆ ಇಳಿಸಲಾಗಿದೆ. ಮುಂದಿನ ವರ್ಷಕ್ಕೆ ಇನ್ನಷ್ಟು ಹೊರೆ ತಗ್ಗಿಸಿ ಲಾಭಾಂಶ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಘದ ಉಪಾಧ್ಯಕ್ಷೆ ಡಿ.ಎಂ. ವಿನೋದಮ್ಮ, ಆಡಳಿತ ಮಂಡಳಿ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕರಾದ ಬಿ.ಎಚ್. ಗಣೇಶಪ್ಪ ಕೋರಂ ಘೋಷಣೆ ಮಾಡಿದರು. ಬಿ.ಮಲ್ಲಪ್ಪ ಹಿಂದಿನ ವಾರ್ಷಿಕ ಮಹಾಸಭೆ ನಡವಳಿ ಓದಿದರು. ಸಂಘದ ಕಾರ್ಯದರ್ಶಿ ಜಿ.ಎಂ. ಚೇತನ್ ಆಡಳಿತ ವರದಿ ಹಾಗೂ ಲಾಭ, ನಷ್ಟ, ಜಮಾ ಖರ್ಚು ಸಭೆಯಲ್ಲಿ ಮಂಡಿಸಿದರು.ವೇದಿಕೆಯಲ್ಲಿ ನಿರ್ದೇಶಕರಾದ ಡಿ.ಕೆ.ಚಂದ್ರಪ್ಪ, ಬಿ.ಎಚ್. ಕುಮಾರ್, ಎಚ್.ಪಿ. ಗುರುಬಸಪ್ಪ, ಕೆ.ಎಚ್. ಪರಮೇಶ್, ಡಿ.ಬಿ. ಮಹೇಂದ್ರ, ಒ.ಕೆ. ರಮೇಶ್, ಎನ್.ಎಚ್. ಮಾರುತಿ, ಸುಶೀಲಮ್ಮ ಕಾರ್ಯದರ್ಶಿ ಜಿ.ಎಂ. ಚೇತನ್ ಉಪಸ್ಥಿತರಿದ್ದರು.
- - - -25ಎಚ್.ಎಲ್.ಐ2:ಹೊನ್ನಾಳಿ ಸಮೀಪದ ದೇವನಾಯಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಎ.ಜಿ. ಪ್ರಕಾಶ್ ಉದ್ಘಾಟಿಸಿದರು.