ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳೆಂದು ಗುರುತಿಸಿಕೊಂಡು ಕೃಷಿ ಮತ್ತು ಇನ್ನಿತರ ಇಲಾಖೆಗಳಿಂದ ಕೃಷಿ ಸಲಕರಣೆ, ಟ್ರ್ಯಾಕ್ಟರ್, ಯಂತ್ರೋಪಕರಣ ಪಡೆದು ನಂತರದಲ್ಲಿ ಅವುಗಳನ್ನು ಮಾರಾಟ ಮಾಡಿದಲ್ಲಿ ಮಾರಾಟಕ್ಕೆ ತೆಗೆದುಕೊಂಡವರ ಮತ್ತು ಮಾರಾಟ ಮಾಡಿದವರ ಇಬ್ಬರ ಮೇಲೂ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಪಡೆದಂತಹ ಉಪಕರಣ, ಯಂತ್ರೋಪಕರಣಗಳನ್ನು ಅಥವಾ ಇನ್ಯಾವುದೇ ಸೌಲಭ್ಯವನ್ನಾದರೂ ಸರಿ, ಅವುಗಳನ್ನು ಫಲಾನುಭವಿಗಳೇ ಉಪಯೋಗಿಸಿಕೊಳ್ಳಬೇಕು ಹೊರತು ಮಾರಾಟ ಮಾಡುವುದಾಗಲಿ ಅಥವಾ ವರ್ಗಾಯಿಸುವ ಕಾರ್ಯವಾಗಬಾರದು. ಈ ಹಿನ್ನೆಲೆಯಲ್ಲಿ ಆಯಾ ತಾಲೂಕಿನ ಸಮಾಜ ಕಲ್ಯಾಣಾಧಿಕಾರಿ ಸೌಲಭ್ಯಗಳನ್ನು ಪಡೆದ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಯೋಜನೆಯಡಿ ಪಡೆದ ಸಲಕರಣೆಗಳು ಮತ್ತು ಯಂತ್ರೋಪಕರಣಗಳು ಸದ್ಬಳಕೆಯಾಗುತ್ತಿವೆಯಾ ಅಥವಾ ಆರ್ಥಿಕವಾಗಿ ಸಬಲರಾಗಿರುವವರ ಪಾಲಾಗಿವೆಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸದಾಶಿವ ಬಡಿಗೇರ ಅವರು ಸಭೆಗೆ ಮಾಹಿತಿ ನೀಡಿ, ಕಳೆದ ಬಾರಿಯ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿದಂತೆ ಪ್ರತಿ ತಾಲೂಕಿನಲ್ಲಿ ತಾಲೂಕುಮಟ್ಟದ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಸಭೆ ಕಡ್ಡಾಯವಾಗಿ ಜರುಗಿಸುವಂತೆ ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಹೇಳಲಾಗಿ, ಎಲ್ಲಾ ತಾಲೂಕುಗಳಲ್ಲಿ ಸಭೆ ನಡೆಸಲಾಗಿರುತ್ತದೆ. 2024-25ನೇ ಸಾಲಿನ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅಡಿ 2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 31ರವರಗೆ ಕೃಷಿ ಇಲಾಖೆಯಲ್ಲಿ ಎಸ್‌ಸಿಎಸ್‌ಪಿ ಅಡಿ ಶೇ.67.32ರಷ್ಟು ಮತ್ತು ಟಿಎಸ್‌ಪಿ ಅಡಿ ಶೇ.79.22 ರಷ್ಟು, ತೋಟಗಾರಿಕೆ ಇಲಾಖೆಯಲ್ಲಿ ಶೇ.60.83 ಹಾಗೂ ಶೇ.62.89, ರೇಷ್ಮೆ ಇಲಾಖೆಯಲ್ಲಿ ಶೇ.96.43 ಹಾಗೂ ಶೇ.100 ರಷ್ಟು ಭೌತಿಕ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ರುಟ್ರುನ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.