ಸರಿಯಾಗಿ ಕೆಲಸ ಮಾಡದಿದ್ದರೆ ಶಿಸ್ತು ಕ್ರಮ

| Published : Aug 11 2024, 01:33 AM IST

ಸರಿಯಾಗಿ ಕೆಲಸ ಮಾಡದಿದ್ದರೆ ಶಿಸ್ತು ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಸಮಯಕ್ಕೆ ಸರಿಯಾಗಿ ಸಿಗದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಜನರು ಮೇಲಿಂದ ಮೇಲೆ ದೂರು ನೀಡುತ್ತಿದ್ದಾರೆ. ವೈದ್ಯರ ಹೆಡ್‌ ಕ್ವಾರ್ಟರ್ಸ್‌ನಲ್ಲಿ ಮನೆ ಮಾಡಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದು ಕೆಲಸ ಮಾಡಬೇಕು. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ(ಪಡೇಕನೂರ) ಅವರು ಆಸ್ಪತ್ರೆ ಸಿಬ್ಬಂದಿಗೆ ಖಡಕ್‌ ವಾರ್ನಿಂಗ್ ನೀಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಸಮಯಕ್ಕೆ ಸರಿಯಾಗಿ ಸಿಗದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಜನರು ಮೇಲಿಂದ ಮೇಲೆ ದೂರು ನೀಡುತ್ತಿದ್ದಾರೆ. ವೈದ್ಯರ ಹೆಡ್‌ ಕ್ವಾರ್ಟರ್ಸ್‌ನಲ್ಲಿ ಮನೆ ಮಾಡಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದು ಕೆಲಸ ಮಾಡಬೇಕು. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ(ಪಡೇಕನೂರ) ಅವರು ಆಸ್ಪತ್ರೆ ಸಿಬ್ಬಂದಿಗೆ ಖಡಕ್‌ ವಾರ್ನಿಂಗ್ ನೀಡಿದರು.

ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಲೋಕಾ ನ್ಯಾ.ಬಿ.ಎಸ್.ಪಾಟೀಲ ಅವರು ಆಸ್ಪತ್ರೆಗಳಲ್ಲಿ ವೈದ್ಯರು ಸಲ್ಲಿಸಿದ ಸೇವಾ ಕಡತಗಳನ್ನು ಪರಿಶೀಲಿಸಿದರು. ಕೊಣ್ಣೂರ ದೊಡ್ಡ ಗ್ರಾಮವಾಗಿದ್ದು, ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ವೈದ್ಯರು ಬರಲ್ಲ, ಸಿಬ್ಬಂದಿ ಬರಲ್ಲ. ರಾತ್ರಿ ಹೊತ್ತು ಎಮರ್ಜೆನ್ಸಿ ಇದ್ದರೆ ತಾಳಿಕೋಟೆಗೆ ಇಲ್ಲಾ ವಿಜಯಪುರಕ್ಕೆ ಹೋಗಬೇಕೆಂಬ ದೂರುಗಳೇ ಸಾಕಷ್ಟು ಬರುತ್ತಿವೆ. ಇಷ್ಟು ಜನ ಸಿಬ್ಬಂದಿಗಳಿದ್ದು ಏನು ಮಾಡುತ್ತಿದ್ದೀರಿ?, ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರಲು ಆಗೋದಿಲ್ವಾ ಎಂದು ತರಾಟೆಗೆ ತೆಗೆದುಕೊಂಡರು. ಎಲ್ಲ ಸಿಬ್ಬಂದಿ ಬೇರೆ ಊರಿನಿಂದ ಬರುತ್ತಾರೆ, ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಸಿಬ್ಬಂದಿ ಯಾರೂ ಬೇರೆ ಊರಿಂದ ಬರಕೂಡದು, ಕೊಣ್ಣೂರಿನ ಹೆಡ್‌ ಕ್ವಾರ್ಟರ್ಸ್‌ನಲ್ಲೇ ಇರಬೇಕು ಎಂದು ನಿರ್ದೇಶಿಸಿದರು.

ಈಗಾಗಲೇ ವಿವಿಧೆಡೆ ಡೆಂಘೀ, ಕಾಲರಾ ಇನ್ನಿತರ ರೋಗಗಳು ಬರುತ್ತಿವೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು. ವೈದ್ಯಕೀಯ ಸಿಬ್ಬಂದಿ ಕಳೆದ ಎರಡ್ಮೂರು ತಿಂಗಳಿಂದ ಸೇವೆ ಸಲ್ಲಿಸಿದ್ದರ ಬಗ್ಗೆ ಡಾಟಾವನ್ನು ನಮ್ಮ ಇಲಾಖೆಗೆ ಸಲ್ಲಿಸಬೇಕು. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ ಅವರಿಗೆ ಸೂಚಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಇನ್ನು ಮುಂದೆ ಸರಿಯಾಗಿ ಕೆಲಸ ಮಾಡದಿದ್ದರೆ ಕಾಯಂ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಗುತ್ತದೆ. ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು.

ಕೊಣ್ಣೂರ ಗ್ರಾಮದ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಈ ವೇಳೆ ಗ್ರಾಮಸ್ಥರು ದೂರುಗಳನ್ನು ಸಲ್ಲಿಸಿದರು. ತಾಪಂ ಇಒ ವೆಂಕಟೇಶ ವಂದಾಲ ಮತ್ತು ಪಿಡಿಒ ಸಾವಿತ್ರಿ ಬಿರಾದರ ಅವರಿಗೆ ಸೂಕ್ತ ಕ್ರಮವಹಿಸಲು ಸೂಚಿಸಿದರು.

ಚಬನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸಿದರರು. ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಪರಿಶೀಲಿಸಲು ಶಾಲಾ ಮಕ್ಕಳಿಗೆ ೨ ನಿಮಿಷಗಳ ಕಾಲ ಪ್ರಶ್ನೆಗಳನ್ನು ಕೇಳಿದರು. ವಿದ್ಯಾರ್ಥಿಗಳಿಗೆ ಶಿಕ್ಷಣದ ಕಡೆಗೆ ಲಕ್ಷಕೊಡಿ ಎಂದು ಕಿವಿಮಾತನ್ನು ಹೇಳಿದರು.

ಈ ಸಂದರ್ಭದಲ್ಲಿ ವಿಜಯಪುರ ಲೋಕಾಯುಕ್ತ ಅಧೀಕ್ಷಕ ಟಿ.ಮಲ್ಲೇಶ್, ಲೋಕಾ ಡಿವೈಎಸ್ಪಿ ಸುರೇಶ ರೆಡ್ಡಿ, ಇನ್ಸಪೆಕ್ಟರ್‌ಗಳಾದ ಆನಂದ ಟಕ್ಕಣ್ಣವರ, ಆನಂದ ಡೋಣಿ, ಜಿಪಂ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಕೆಬಿಜೆಎನ್‌ಎಲ್ ಸಹಾಯಕ ಎಂಜಿನಿಯರ್ ವಿಶ್ವನಾಥ ಬಿರಾದಾರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ವೆಂಕಟೇಶ ವಂದಾಲ, ತಾಪಂ ಸಹಾಯಕ ನಿರ್ದೇಶಕರಾದ (ಗ್ರಾಉ) ಸುಜಾತಾ ಯಡ್ರಾಮಿ, ಪಿಡಿಒ ಸಾವಿತ್ರಿ ಬಿರಾದಾರ, ರಾಜೇಶ್ವರಿ ಬಿರಾದಾರ, ಕೊಣ್ಣೂರ ಆಸ್ಪತ್ರೆಯ ವೈದ್ಯ ಡಾ.ಶ್ರೀಶೈಲ ಹುಕ್ಕೇರಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.-------------