ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಶಿಸ್ತಿನ ಓದು, ಬರವಣಿಗೆ ದೀರ್ಘಕಾಲ ನೆನಪಿನಲ್ಲಿ ಉಳಿಯಲಿದೆ ಎಂದು ವಿಜ್ಞಾನಿ ಡಾ.ಕೆ.ಎನ್.ಮೋಹನ್ ಹೇಳಿದರು.ಪಟ್ಟಣದ ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಓದಿನ ರಹಸ್ಯ ತಿಳಿಯಿರಿ ಸಂವಾದದಲ್ಲಿ ಮಾತನಾಡಿ, ತಾನು ಹುಟ್ಟಿದ್ದು ಊಗಿನಹಳ್ಳಿ. ಆಗಪೆಸ ಬೆಳೆದಿದ್ದು, ಓದಿದ್ದು ಕಿಕ್ಕೇರಿಯಲ್ಲಿ. ಪ್ರಾಥಮಿಕ, ಪೌಢಶಾಲೆ ಹಂತ ಎಲ್ಲವನ್ನು ಮುಗಿಸಿ ಪಕ್ಕದ ಚನ್ನರಾಯಪಟ್ಟಣದಲ್ಲಿ ಪಿಯುಸಿ ಓದಿದೆ ಎಂದರು.
ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯ ರಾಸಾಯನಶಾಸ್ತ್ರ ವಿಭಾಗದ ಅಧ್ಯಕ್ಷನಾಗಿ, ಹಲವು ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆಗೆ ಮಾರ್ಗದರ್ಶಕನಾಗಿರುವೆ. ತನ್ನಂತೆ ತಾನು ಓದಿದ ಶಾಲೆ ಮಕ್ಕಳು ಆಗಬೇಕು ಎಂಬ ಆಸೆ ಇದೆ. ಭವಿಷ್ಯದ ಮಕ್ಕಳಿಗೆ ಸಹಕಾರ ನೀಡುವ ಹಂಬಲವಿದೆ ಎಂದು ಹುರಿದುಂಬಿಸಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಗೊಂಡ ತನ್ನ ಹೆಚ್ಚಿನ ಸಂಶೋಧನಾ ಪ್ರಕಟಣೆ, ಉಲ್ಲೇಖ, ಸಹಲೇಖ, ಎಚ್-ಇಂಡೆಕ್ ಪರಿಗಣಿಸಿ ಅಮೆರಿಕಾದ ಸ್ಟ್ಯಾನ್‌ಪೋರ್ಡ್ ವಿಶ್ವವಿದ್ಯಾಲಯ ಜಾಗತಿಕ ಮಟ್ಟದಲ್ಲಿ ವಿಶ್ವದ ಶ್ರೇಷ್ಟ ವಿಜ್ಞಾನಿಗಳ ಪಟ್ಟಿಯಲ್ಲಿ ಶ್ರೇಷ್ಟ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿತನ್ನ ಹೆಸರು ಪ್ರಕಟಿತವಾಗಿದ್ದು, ಇದು ತನ್ನಊರಿಗೆ, ಓದಿದ ಶಾಲೆಗೆ ಸಂದ ಗೌರವ ಎಂದು ಭಾವಿಸಿರುವೆ ಎಂದರು.
ಇದೇ ಶಾಲೆಯಲ್ಲಿ ಓದಿದ ಬೆಂಗಳೂರಿನ ಪೋಲಿಸ್ ಇಲಾಖೆಯ ಡಿವೈಎಸ್ಪಿ ಬಿ.ಬಿ.ಲಕ್ಷ್ಮೇಗೌಡ ಮಾತನಾಡಿ, ವಿಜ್ಞಾನಿ ಕೆ.ಎನ್. ಮೋಹನ್ ತಾವಿಬ್ಬರು ಬಾಲ್ಯದ ಗೆಳೆಯರು. ಒಂದೇ ಶಾಲೆ, ಬೆಂಚಿನಲ್ಲಿ ಕುಳಿತು ಓದಿದವರು. ಕಷ್ಟದ ಬದುಕು ಪರಿಶ್ರಮದ ಓದಿಗೆ ಪ್ರೇರೇಪಿಸಿತು. ಇದರಿಂದ ನಾನು ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವೆ. ತಮ್ಮಂತೆಗ್ರಾಮೀಣ ಪ್ರದೇಶದ ಮಕ್ಕಳು ಆಗಬೇಕು ಎಂಬ ಆಸೆ ಇದೆ. ತಮ್ಮ ಓದಿಗೆ ಸಂಪೂರ್ಣ ಸಹಕಾರ ತನ್ನದಾಗಿದೆ ಎಂದು ಹುರಿದುಂಬಿಸಿದರು.ಈ ವೇಳೆ ಪ್ರಾಂಶುಪಾಲ ಎಸ್.ದೊರೆಸ್ವಾಮಿ, ಎನ್‌ಎಸ್‌ಎಸ್‌ಘಟಕಾಧಿಕಾರಿ ಜಿ.ಎಸ್.ಕುಮಾರಸ್ವಾಮಿ, ಸಾಹಿತಿ ಜೇನುಗೂಡು ಊಗಿನಹಳ್ಳಿ ಮಹೇಶ್, ಎನ್. ರವೀಂದ್ರ, ಎ.ಎಂ.ಮಂಜುನಾಥ, ಜಿ. ರಮೇಶ್, ಎಂ.ವಿನಾಯಕ್, ಎಸ್.ಡಿ. ಹರೀಶ, ಎನ್.ಎ. ನಾಗೇಶ್, ಚಂದ್ರಿಕಾ, ಫಾಜಿಲ್ಲಾ ಖಾನಂ, ವರಲಕ್ಷ್ಮೀಇದ್ದರು.