ಸಾರಾಂಶ
ಹುಬ್ಬಳ್ಳಿ: ಮನುಷ್ಯನ ಮನಸ್ಸಿನಲ್ಲಿರುವ ಕೊಳೆ ತೊಳೆದು ಸಾತ್ವಿಕ ಸಮಾಜ, ಶುದ್ಧ ಮನಸ್ಸು ಹೊಂದಲು ಸಾಧು, ಸಂತರ ಪ್ರವಚನಗಳು ಸಹಕಾರಿಯಾಗಿವೆ. ಈ ಪ್ರವಚನಗಳಿಗೆ ಮನುಷ್ಯನ ಮನಸ್ಸನ್ನೇ ಬದಲಿಸುವ ಶಕ್ತಿಯಿದೆ ಎಂದು ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು.
ಇಲ್ಲಿನ ಉಣಕಲ್ಲ ಹೊಸಮಠ ಶ್ರೀ ಸದ್ಗುರು ಸಿದ್ದೇಶ್ವರ (ಸಿದ್ದಪ್ಪಜ್ಜ) ಶ್ರೀಗಳ 104ನೇ ಪುಣ್ಯಾರಾಧನೆ ಅಂಗವಾಗಿ ಭಾನುವಾರ ಯುಗಾದಿ ಮಹೋತ್ಸವ ಹಾಗೂ ಶ್ರೀಮಠದ ಜಾತ್ರಾಮಹೋತ್ಸವದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಪ್ರತಿಯೊಬ್ಬರ ಮನಸ್ಸು ಒಂದಿಲ್ಲೊಂದು ಕಾರಣದಿಂದ ಕಲುಷಿತ, ವಿಚಲಿತವಾಗಿದೆ. ಇಂತಹ ವಿಚಲಿತ, ಚಂಚಲವಾದ ಮನಸ್ಸಿಗೆ ಸಂಸ್ಕಾರ ನೀಡಲು ಪ್ರವಚನ ಕೇಳಬೇಕು. ನೂರು ಪೊಲೀಸ್ ಠಾಣೆಗಳ ಅಪರಾಧ ನಿಯಂತ್ರಿಸುವ ಕಾರ್ಯವನ್ನು ಒಂದು ಪ್ರವಚನ ಮಾಡುತ್ತದೆ ಎಂದರೆ ಅದಕ್ಕಿರುವ ಶಕ್ತಿ ಎಷ್ಟು ಎಂಬುದನ್ನು ಜನತೆ ಅರಿತುಕೊಳ್ಳಬೇಕಿದೆ ಎಂದರು.
ಹುಬ್ಬಳ್ಳಿಯೊಂದರಲ್ಲಿಯೇ ಸುಮಾರು 15ಕ್ಕೂ ಅಧಿಕ ಸಿದ್ದಪ್ಪಜ್ಜನ ಮಠಗಳಿರುವುದು ದೊಡ್ಡ ಪವಾಡವೇ ಸರಿ. ಪ್ರತಿಯೊಬ್ಬರೂ ಶರಣರ, ಸಂತರ ಜೀವನ, ಆದರ್ಶಗಳ ಕುರಿತು ಅರಿತುಕೊಂಡು ಕಾರ್ಯರೂಪಕ್ಕೆ ತರುವ ಕಾರ್ಯವಾಗಬೇಕು. ಪ್ರತಿ ವರ್ಷವೂ ಸಿದ್ಧಪ್ಪಜ್ಜನ ಮಠದಲ್ಲಿ ಜಾತ್ರೆಯ ಪೂರ್ವ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಉಣಕಲ್ಲ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಹೊಂದಿದೆ. ಇಲ್ಲಿ ನಿರ್ಮಾಣವಾಗುತ್ತಿರುವ ನೂತನ ಮಂದಿರ ಮುಂದಿನ ದಿನಗಳಲ್ಲಿ ಹು-ಧಾಗೆ ಕಳಸಪ್ರಾಯವಾಗಲಿದೆ. ಇಂದಿನ ಯುವ ಸಮೂಹ ಪುರಾತನ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ. ಸನಾತನ ಸಂಸ್ಕೃತಿ ಬೆಳೆಸಲು ಮಠ, ಮಂದಿರಗಳ ನಿರ್ಮಾಣ ಮುಖ್ಯವಾಗಿದೆ . ಈಗಾಗಲೇ ಉಣಕಲ್ಲಿನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನ ಅಭಿವೃದ್ಧಿ ಮತ್ತು ರಸ್ತೆ ವಿಸ್ತರಣೆಗೆ ರೂಪರೇಷೆ ಹಾಕಿಕೊಳ್ಳಲಾಗಿದೆ. ಸಿದ್ಧಪ್ಪಜ್ಜನ ಮಠದ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹10 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಧರ್ಮ ಪ್ರೀತಿಸಬೇಕು ಮತ್ತು ಬೆಳೆಸಬೇಕು. ನಮ್ಮತನವನ್ನು ಎಂದಿಗೂ ಬಿಟ್ಟು ಕೊಡಬಾರದು. ಧರ್ಮವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡಲಿದೆ. ಹಾಗಾಗಿ, ಪ್ರತಿಯೊಬ್ಬರೂ ಧರ್ಮ ಕಾರ್ಯಗಳಲ್ಲಿ ನಿರತರಾಗುವಂತೆ ಕರೆ ನೀಡಿದರು.ಪಾಲಿಕೆ ಸದಸ್ಯ, ಸಿದ್ದೇಶ್ವರ ಸ್ವಾಮಿಗಳ ಹೊಸಮಠದ ಟ್ರಸ್ಟ್ ಅಧ್ಯಕ್ಷ ರಾಜಣ್ಣ ಕೊರವಿ ಪ್ರಾಸ್ತಾವಿಕ ಮಾತನಾಡಿ, ಜಾತ್ರಾ ಮಹೋತ್ಸವ ನಿಮಿತ್ತ ಶ್ರೀಮಠದ ಆವರಣದಲ್ಲಿ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಶ್ರೀಗಳಿಂದ 14 ದಿನಗಳ ಕಾಲ ಪ್ರತಿದಿನ ಪ್ರವಚನ ನಡೆಯಲಿದೆ. ಸಿದ್ದಪ್ಪಜ್ಜನ ಶ್ರೀಮಠದ ನೂತನ ಶಿಲಾ ಕಟ್ಟಡದ ಕಾಮಗಾರಿ ಶೇ. 60ರಷ್ಟು ಪೂರ್ಣಗೊಂಡಿದೆ. ಮುಂದಿನ ಜಾತ್ರಾ ಮಹೋತ್ಸವಕ್ಕೆ ಮಂದಿರ ಉದ್ಘಾಟನೆ ಮಾಡಲಾಗುವುದು. ಉಣಕಲ್ಲಿನಲ್ಲಿರುವ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನ ಮಾದರಿಯಲ್ಲಿ ನೂತನ ಸದ್ಗುರು ಸಿದ್ದೇಶ್ವರ ಶ್ರೀಗಳ ಶಿಲಾಕಟ್ಟಡ ಶತಮಾನದ ವರೆಗೆ ಮುಂದಿನ ತಲೆಮಾರಿಗೆ ಕೊಡುಗೆಯಾಗಲಿದೆ ಎಂದರು.
ಈ ವೇಳೆ ಶಿವಶರಣೆ ಜಯಮ್ಮತಾಯಿ ಹಿರೇಮಠ, ಸಿದ್ದನಗೌಡ ಕಾಮಜೇನ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಉಮೇಶಗೌಡ ಕೌಜಗೇರಿ, ಚೆನ್ನು ಪಾಟೀಲ, ರಾಮಣ್ಣ ಪದ್ಮಣ್ಣವರ, ಶಿವಾಜಿ ಕನ್ನಿಕೊಪ್ಪ, ಗುರುಸಿದ್ಧಪ್ಪ ಬೆಂಗೇರಿ, ಗುರುಸಿದ್ಧಪ್ಪ ಮೆಣಸಿನಕಾಯಿ, ಬಸಣ್ಣ ಮಾಡಳ್ಳಿ ಸೇರಿದಂತೆ ಹಲವರಿದ್ದರು. ತೇಜಸ್ವಿನಿ ಹಿರೇಮಠ ಪ್ರಾರ್ಥಿಸಿದರು. ಡಾ. ವಿಶ್ವನಾಥ ಕೊರವಿ ಸ್ವಾಗತಿಸಿದರು. ಹುಲಿಗೆಮ್ಮ ಆರೇರ ನಿರೂಪಿಸಿದರು.