ಮಳೆ ರಜೆ ಘೋಷಣೆಯಲ್ಲಿ ತಾರತಮ್ಯ: ವಿದ್ಯಾರ್ಥಿ ವಲಯದಲ್ಲಿ ಅಸಮಾಧಾನ

| Published : Jul 07 2024, 01:20 AM IST

ಮಳೆ ರಜೆ ಘೋಷಣೆಯಲ್ಲಿ ತಾರತಮ್ಯ: ವಿದ್ಯಾರ್ಥಿ ವಲಯದಲ್ಲಿ ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ,‌ ಗಾಳಿ, ನೆರೆಯಂತಹ‌ ಪ್ರಾಕೃತಿಕ ವಿಕೋಪ‌ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕಬಾರದು ಎನ್ನುವ ಕಾರಣಕ್ಕಾಗಿ ಮುಂಜಾಗ್ರತೆಯಿಂದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡುವ ಪದ್ಧತಿ ಜಾರಿಯಲ್ಲಿದೆ. ಆದರೆ ಜಿಲ್ಲಾಡಳಿತ ರಜೆ ಘೋಷಣೆ ಮಾಡುವ ಸಂದರ್ಭದಲ್ಲಿ ಆಯ್ದ ಸ್ತರದ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸುತ್ತಿದ್ದು, ಉಳಿದ ವಿದ್ಯಾರ್ಥಿಗಳ ಬಗ್ಗೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ.

ಶ್ರೀಕಾಂತ ಹೆಮ್ಮಾಡಿ

ಕನ್ನಡಪ್ರಭ ವಾರ್ತೆ ಕುಂದಾಪುರಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಯಾವುದೇ ಅಪಾಯ ಸಂಭವಿಸಬಾರದು ಎನ್ನುವ ಕಾಳಜಿಯಲ್ಲಿ‌ ಜಿಲ್ಲಾಡಳಿತ ಘೋಷಣೆ ಮಾಡುತ್ತಿರುವ ರಜೆಯ ಆದೇಶದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಕಡೆಗಣಿಸಿರುವುದು ವಿದ್ಯಾರ್ಥಿಗಳ ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.ಮಳೆ,‌ ಗಾಳಿ, ನೆರೆಯಂತಹ‌ ಪ್ರಾಕೃತಿಕ ವಿಕೋಪ‌ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕಬಾರದು ಎನ್ನುವ ಕಾರಣಕ್ಕಾಗಿ ಮುಂಜಾಗ್ರತೆಯಿಂದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡುವ ಪದ್ಧತಿ ಜಾರಿಯಲ್ಲಿದೆ. ಆದರೆ ಜಿಲ್ಲಾಡಳಿತ ರಜೆ ಘೋಷಣೆ ಮಾಡುವ ಸಂದರ್ಭದಲ್ಲಿ ಆಯ್ದ ಸ್ತರದ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸುತ್ತಿದ್ದು, ಉಳಿದ ವಿದ್ಯಾರ್ಥಿಗಳ ಬಗ್ಗೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ.ಕಾಲೇಜು ವಿದ್ಯಾರ್ಥಿಗಳು ವಾಟರ್ ಪ್ರೂಫಾ?:

ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುವಂತೆ ಜಿಲ್ಲಾಡಳಿತದಿಂದ ರಜೆ ಆದೇಶ ಹೊರಡಿಸಲಾಗುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿರುವ ಕಾಲೇಜು ವಿದ್ಯಾರ್ಥಿ ಸಮೂಹ, ಇತ್ತೀಚಿನ ವರ್ಷಗಳಲ್ಲಿ ಬರುತ್ತಿರುವ ಮಳೆ, ಕೇವಲ ಪಿಯು ಒಳಗಿನ ವಿದ್ಯಾರ್ಥಿಗಳನ್ನು ಮಾತ್ರ ಒದ್ದೆ ಮಾಡುವ ವಿಶೇಷ ಗುಣಗಳನ್ನು ಹೊಂದಿರಬೇಕು ಅಥವಾ ಕಾಲೇಜು ವಿದ್ಯಾರ್ಥಿಗಳು ವಾಟರ್ ಪ್ರೂಫ್ ಕವಚ ಹೊಂದಿದ್ದಾರೆ ಎನ್ನುವ ಭಾವನೆಯನ್ನು ಅಧಿಕಾರಿಗಳು ಇರಿಸಿಕೊಂಡಿರಬೇಕು ಎಂದು ಲೇವಡಿ ಮಾಡುತ್ತಿದ್ದಾರೆ.

ಎಸ್ಎಸ್ಎಲ್‌ಸಿ ನಂತರ ಪ್ರವೇಶಾವಕಾಶ ಇರುವ ಡಿಪ್ಲೊಮಾ, ಐಟಿಐ, ಶಿಕ್ಷಕರ ತರಬೇತಿ, ಪ್ಯಾರಾ ಮೆಡಿಕಲ್‌ನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವವರು ವಿದ್ಯಾರ್ಥಿಗಳಲ್ಲವೇ? ಅವರ ಮನೆ ಹಾಗೂ ಊರುಗಳು ಮಳೆಯಿಂದ ಮುಕ್ತವಾಗಿದೆಯೇ ಎಂದು ಖಾರವಾಗಿ ಪ್ರಶ್ನಿಸುತ್ತಿದ್ದಾರೆ. .

ನೆರೆ ಬಂದಿರುವ ಹಾಗೂ ಬರುವ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಜಿಲ್ಲಾದ್ಯಂತ ರಜೆ ಘೋಷಣೆ ಮಾಡಿದ್ದರೂ, ಗ್ರಾಮದ ತುಂಬೆಲ್ಲ ನೆರೆಯ ನೀರು ತುಂಬಿಕೊಂಡಿರುವ ಪ್ರದೇಶದಲ್ಲಿ, ಜಿಲ್ಲಾಡಳಿತದ ಆದೇಶ‌‌ ಪ್ರತಿಯಲ್ಲಿ ಇಲ್ಲದ ಶಿಕ್ಷಣ ಸಂಸ್ಥೆಗಳು ಯಥಾ ಪ್ರಕಾರ ನಡೆಯಬೇಕು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ನೆರೆ ಪ್ರದೇಶಗಳನ್ನು ದಾಟಿಕೊಂಡೇ‌ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಗಳಿಗೆ ಬರಬೇಕು ಎನ್ನುವ ಸಾಮಾನ್ಯ ಜ್ಞಾನವನ್ನು ಮರೆಯಲಾಗಿದೆ. ದೂರದ ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳ ಕಾಲೇಜಿಗೆ ಬರಬೇಕಾದ ವಿದ್ಯಾರ್ಥಿಗಳು ಕಿ.ಮೀ. ದೂರವನ್ನು ಮಳೆಯಲ್ಲಿಯೇ ನಡೆದುಕೊಂಡು, ಬಳಿಕ ಒದ್ದೆ ಬಟ್ಟೆಯಲ್ಲೇ ಗಂಟೆಗಳ ಕಾಲ ಪ್ರಯಾಣ ಮಾಡಿ ಕಾಲೇಜಿಗೆ ಬರಬೇಕು. ಜಿಲ್ಲೆಯ ಮಲೆನಾಡು ಹಾಗೂ ಗ್ರಾಮೀಣ ಭಾಗಗಳಿಂದ 50-60 ಕಿ.ಮೀ ದೂರದಿಂದ 2-3 ಬಸ್ಸುಗಳನ್ನು ಬದಲಾಯಿಸಿಕೊಂಡು ನಗರ ಪ್ರದೇಶದ ಕಾಲೇಜು ಹಾಗೂ ತರಬೇತಿ ಸಂಸ್ಥೆಗಳಿಗೆ ಬರುವ ಮಕ್ಕಳ ಸ್ಥಿತಿ ಅತ್ಯಂತ ಶೋಚನೀಯ. ಅದರಲ್ಲೂ ಒದ್ದೆ ಬಟ್ಟೆಯಲ್ಲೇ ದಿನಪೂರ್ತಿ ಕಳೆಯುವ ವಿದ್ಯಾರ್ಥಿನಿಯರ ಪಾಡು ದೇವರಿಗೇ ಪ್ರೀಯ ಎನ್ನುವಂತಾಗಿದೆ. ಇದರಿಂದಾಗಿ ಹೆಣ್ಣು ಮಕ್ಕಳು ಅನುಭವಿಸುವ ಮುಜುಗರವನ್ನು ಯಾರಲ್ಲಿ ಹೇಳಿಕೊಳ್ಳಬೇಕು? ಹುಡುಗರು ಒದ್ದೆ ಬಟ್ಟೆಯ ಸಮಸ್ಯೆಯಿಂದ ಹೊರತಾಗಿಲ್ಲ. ವಾರವಿಡೀ ಮಳೆ ಇದ್ದರೆ, ಹಿಂದಿನ ದಿನ ಹಾಕಿದ ಬಟ್ಟೆಗಳನ್ನೇ ಪುನಃ: ಹಾಕಿಕೊಂಡು ಬರಬೇಕಾದ ಬಡತನದ ಅನಿವಾರ್ಯತೆಯೂ ಇದೆ. ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳು ಪ್ರಮುಖ ಸ್ಥಾನಗಳಲ್ಲಿ ಇದ್ದರೂ, ನಮ್ಮ ಗೋಳು ಮಳೆಯ ಅಬ್ಬರದಲ್ಲಿ ಕೊಚ್ಚಿ ಹೋಗುತ್ತಿದೆ ಎನ್ನುವ ನೋವು ವಿದ್ಯಾರ್ಥಿನಿಯರನ್ನು ಕಾಡುತ್ತಿದೆ.ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ತೋಯಿಸುವ ಮಳೆಯನ್ನು ಅವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುತ್ತಿರುವ ಜಿಲ್ಲಾಡಳಿತ, ಕಾಪಿ ಬುಕ್ ರೀತಿಯಲ್ಲಿ ಆದೇಶಗಳಿಗೆ‌ ಸಹಿ ಮಾಡದೆ, ಜಿಲ್ಲೆಯ‌‌ ಬಹುಸಂಖ್ಯೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವೈಜ್ಞಾನಿಕ ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲಿ ಎನ್ನುವುದು ವಿದ್ಯಾರ್ಥಿಗಳ ಆಗ್ರಹ ಪೂರ್ವಕ ಮನವಿ.-------

ಮಳೆಯ ಕಾರಣದಿಂದಾಗಿ ಯಾವುದೇ ಅಪಾಯ ಸಂಭವಿಸಬಾರದು ಎನ್ನುವ ಕಾಳಜಿಯಲ್ಲಿ‌ ಜಿಲ್ಲಾಡಳಿತ ಘೋಷಣೆ ಮಾಡುತ್ತಿರುವ ರಜೆ ಹಾಸ್ಯಾಸ್ಪದವಾಗಿದೆ. ಗ್ರಾಮೀಣ ಭಾಗಗಳಿಂದ ಡಿಗ್ರಿ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ನೆರೆ ನೀರನ್ನು ಎದುರಿಸಿ ಬರಬೇಕಾದ ಸ್ಥಿತಿ‌ ಇದೆ. ವಿದ್ಯಾರ್ಥಿಗಳಲ್ಲಿ ಯಾವುದೇ ಪರಿಭೇದ ಮಾಡದೇ ಒಂದು ಸಮೂಹವಾಗಿ ಪರಿಗಣಿಸಿ‌ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಲಿ.। ವಿಕಾಸ್ ಹೆಗ್ಡೆ, ವಕೀಲರು ಕುಂದಾಪುರ-------ನೆರೆ ನೀರಲ್ಲಿ ಜೀವದ ಹಂಗು ತೊರೆದು ಕಾಲೇಜಿಗೆ ಬರಬೇಕು. ಒದ್ದೆ ಬಟ್ಟೆಯಲ್ಲಿ ತರಗತಿಯಲ್ಲಿ ಕೂರುವ ನಮ್ಮ ಕಷ್ಟ ಹೇಳತೀರದು.‌ ವಾರವಿಡಿ ಮಳೆ ಇದ್ದರೆ, ಹಿಂದಿನ ದಿನ ಹಾಕಿದ ಬಟ್ಟೆಗಳನ್ನೇ ಪುನಃ: ಹಾಕಿಕೊಂಡು ಬರಬೇಕಾದ ಅನಿವಾರ್ಯತೆಯೂ ಇದೆ.

। ಸುಜನ್, ಪದವಿ ವಿದ್ಯಾರ್ಥಿ (ಹೆಸರು ಬದಲಿಸಲಾಗಿದೆ)