ಹೊನ್ನಾವರ ಬೀದಿದೀಪ ನಿರ್ವಹಣೆ ಸಮಸ್ಯೆ ಕುರಿತು ಚರ್ಚೆ

| Published : Sep 29 2024, 01:46 AM IST

ಸಾರಾಂಶ

ಹೊನ್ನಾವರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಪಂ ಅಧ್ಯಕ್ಷ ನಾಗರಾಜ್ ಭಟ್ಟ ಅಧ್ಯಕ್ಷತೆಯಲ್ಲಿ ನಡೆಯಿತು. ಬೀದಿದೀಪ ನಿರ್ವಹಣೆ ಸಮಸ್ಯೆ, ಶರಾವತಿ ನದಿಯಿಂದ ನೀರು ಪೂರೈಕೆ ಕಾಮಗಾರಿ ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಯಿತು.

ಹೊನ್ನಾವರ: ಹೊನ್ನಾವರ ಪಪಂ ಸಾಮಾನ್ಯ ಸಭೆ ಪಪಂ ಅಧ್ಯಕ್ಷ ನಾಗರಾಜ್ ಭಟ್ಟ ಅಧ್ಯಕ್ಷತೆಯಲ್ಲಿ ನಡೆಯಿತು.

ಬೀದಿದೀಪ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಹಾಲಿ ದರಪಟ್ಟಿಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎಂದು ಅರ್ಜಿ ಕೊಟ್ಟಿದ್ದಾರೆ ಎಂದು ಮುಖ್ಯಾಧಿಮಾರಿ ಏಸು ಬೆಂಗಳೂರು ತಿಳಿಸಿದರು.

ಸದಸ್ಯರಾದ ಶ್ರೀಪಾದ ನಾಯ್ಕ, ಸುಬ್ರಾಯ ಗೌಡ, ನಿಶಾ ಶೇಟ್ ಈ ಬಗ್ಗೆ ಪ್ರತಿಕ್ರಿಯಿಸಿ, ಬೇರೆಯವರಿಗೆ ಟೆಂಡರ್ ನೀಡಿ, ಈಗಿದ್ದವರು ಸರಿಯಾದ ರೀತಿ ನಿರ್ವಹಣೆ ಮಾಡುತ್ತಿಲ್ಲ. ಸದಸ್ಯರು ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲ್ಲಸಲ್ಲದ ಸಬೂಬು ಹೇಳಿ ಕಾಲಹರಣ ಮಾಡುತ್ತಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ನಾಗರಾಜ ಭಟ್, ಏಕಾಏಕಿ ನಿರ್ವಹಣೆ ಸ್ಥಗಿತವಾದರೆ ಸಮಸ್ಯೆ ತಲೆದೋರುತ್ತದೆ ಎಂದರು. ಸದ್ಯದ ಮಟ್ಟಿಗೆ ಹಾಲಿ ಗುತ್ತಿಗೆದಾರರಿಗೆ ಮನವರಿಕೆ ಮಾಡಿ, ನಿರ್ವಹಣೆ ಮಾಡುವಂತೆ ಸೂಚಿಸಲು ಕೊನೆಗೂ ಸಭೆಯಲ್ಲಿ ನಿರ್ಣಯಿಸಲಾಯಿತು.

ಶರಾವತಿ ಕುಡಿಯುವ ನೀರಿನ ಯೋಜನೆಯಿಂದ ಪಟ್ಟಣಕ್ಕೆ ಸರಬರಾಜಾಗುತ್ತಿರುವ ನೀರಿನ ಸಂಪರ್ಕವನ್ನು ಇನ್ನೂ ನೀಡದೆ ಇರುವ ಕಡೆ ಕಲ್ಪಿಸುವಂತೆ ಕರ್ನಾಟಕ ನೀರು ಸರಬರಾಜು ಮಂಡಳಿ ಹಾಗೂ ಒಳಚರಂಡಿ ಯೋಜನೆಯ ಹೊನ್ನಾವರ ವಿಭಾಗದ ಮುಖ್ಯಕಾರ್ಯನಿರ್ವಾಹಕ ಎಂಜಿನಿಯರ್ ಅಜಯ್ ಪ್ರಭು ಅವರಿಗೆ ಅಧ್ಯಕ್ಷ ನಾಗರಾಜ್ ಭಟ್ಟ ತಿಳಿಸಿದರು‌. ಇದಕ್ಕೆ ಅಜಯ್ ಪ್ರಭು ಉತ್ತರಿಸಿ, ಈಗಾಗಲೇ ಪ್ರಭಾತನಗರ, ರಜತಗಿರಿ, ಗಾಂಧಿನಗರ ಭಾಗದಲ್ಲಿ ಪ್ರಾರಂಭಿಕ ಹಂತವಾಗಿ ನೀರು ಪೂರೈಸಲಾಗಿದೆ. ಉಳಿದ ಭಾಗಕ್ಕೂ ನೀರು ತಲುಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಯೋಜನೆ ಕ್ರಮಬದ್ಧವಾಗಿ ಆದಮೇಲೆ ಪಪಂಗೆ ಹಸ್ತಾಂತರಿಸಲಾಗುತ್ತದೆ. ಆನಂತರ ಪಪಂ ಸೂಕ್ತವಾಗಿ ನಿರ್ವಹಣೆ ಮಾಡಬೇಕಾಗುತ್ತದೆ. ಇದರಲ್ಲಿ ನಮ್ಮ ಇಲಾಖೆ ಹಾಗೂ ಪಪಂ ಸಮಾನವಾದ ಜವಾಬ್ದಾರಿ ಹೊಂದಬೇಕಾಗುತ್ತದೆ ಎಂದರು‌.

ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ವಿಷಯ ಪ್ರಸ್ತಾಪ ಬಂದಾಗ, ಸದಸ್ಯ ಅಜಾದ್ ಅಣ್ಣಿಗೇರಿ ಮಾತನಾಡಿ, ಮುಂದಿನ ಒಂದು ವರ್ಷದ ಅವಧಿಗೆ ಸ್ಥಾಯಿ ಸಮಿತಿ ರಚನೆ ನಿಯಮಾವಳಿಯಂತೆ ಮಾಡಬೇಕು. ಈ ಹಿಂದೆ ಕೂಡ ನಾನು ಆಕ್ಷೇಪ ಮಾಡಿದ್ದೆ, ಈಗಲೂ ನನ್ನ ತಕರಾರು ಇದೆ ಎಂದು ಹೇಳಿದರು. ಉಳಿದ ಸದಸ್ಯರು ಒಮ್ಮತದ ನಿರ್ಣಯ ಮಾಡಿ, ಹನ್ನೊಂದು ಸದಸ್ಯರ ನೂತನ ಸ್ಥಾಯಿ ಸಮಿತಿ ರಚನೆ ಮಾಡಿದರು.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪೊಲೀಸ್ ಠಾಣೆ ಸಮೀಪ ತಲೆ ಎತ್ತಿರುವ ಗೂಡಂಗಡಿ ತೆರವಿಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳು ಪಪಂಗೆ ಪತ್ರ ಬರೆದಿದ್ದರು. ಅವರ ಮನವಿಯಂತೆ ಪಪಂ ಸಭೆಯಲ್ಲಿ ಚರ್ಚೆ ನಡೆದು, ಹೆದ್ದಾರಿ ಪಕ್ಕ ಇರುವ ಗೂಡಂಗಡಿಗಳನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗೆ ಸಂಬಂಧಪಟ್ಟಂತೆ ಐಆರ್‌ಬಿ ಮತ್ತು ಹೆದ್ದಾರಿ ಇಲಾಖೆಗೆ ಮನವಿ ಮಾಡಿ ತೆರವುಗೊಳಿಸುವುದು ಮತ್ತು ಪಟ್ಟಣದ ಇತರೆಡೆ ತಲೆ ಎತ್ತಿರುವ ಗೂಡಂಗಡಿ ತೆರವುಗೊಳಿಸಲು ನಿರ್ಣಯ ಕೈಗೊಂಡರು.

ಪಪಂ ಉಪಾಧ್ಯಕ್ಷ ಸುರೇಶ ಹೊನ್ನಾವರ, ಸದಸ್ಯರು, ಪಪಂ ಮುಖ್ಯಾಧಿಕಾರಿ ಯೇಸು ಬೆಂಗಳೂರು, ಶರಾವತಿ ಕುಡಿಯುವ ನೀರಿನ ಯೋಜನೆಯ ಪ್ರಾಜೆಕ್ಟ್ ಎಂಜಿನಿಯರ್ ಸಂತೋಷ್ ಭಂಡಾರಿ, ಕಲ್ಯಾಣ ಕುಮಾರ್ ಉಪಸ್ಥಿತರಿದ್ದರು.