‘ಕರಾವಳಿ ಭಾಗದಲ್ಲಿ ಕಳ್ಳತನದಿಂದ ಬೀಚ್‌ಗಳಲ್ಲಿ ಮದ್ಯ ಮಾರಾಟ ಆಗುತ್ತಿದೆ. ಇದನ್ನು ತಪ್ಪಿಸಲು ಅಧಿಕೃತವಾಗಿಯೇ ಪರವಾನಗಿ ನೀಡಬೇಕು’ ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ವಿಧಾನಸಭೆ

‘ಕರಾವಳಿ ಭಾಗದಲ್ಲಿ ಕಳ್ಳತನದಿಂದ ಬೀಚ್‌ಗಳಲ್ಲಿ ಮದ್ಯ ಮಾರಾಟ ಆಗುತ್ತಿದೆ. ಇದನ್ನು ತಪ್ಪಿಸಲು ಅಧಿಕೃತವಾಗಿಯೇ ಪರವಾನಗಿ ನೀಡಬೇಕು’ ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಅಲ್ಲದೆ, ‘ಮನೆಗಳಲ್ಲಿ 7 ಬಾಟಲ್ ಮದ್ಯ ಮಾತ್ರ ಇಟ್ಟುಕೊಳ್ಳಬೇಕು ಎಂಬ ನಿಯಮವಿದೆ. ಯಾರೋ ಬಂದು ಬಾಟಲ್‌ ಉಡುಗೊರೆ ಕೊಡುತ್ತಾರೆ. ಮತ್ತಾರೋ ಬಂದು ಕೇಸು ಹಾಕುತ್ತಾರೆ. ಇದನ್ನು ತಪ್ಪಿಸಲು ನಿಯಮ ಸಡಿಲ ಮಾಡಬೇಕು. ಇದರ ಬಗ್ಗೆ ನಾವು ಕುಳಿತು ಚರ್ಚೆ ಮಾಡಬೇಕು’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಸಲಹೆ ನೀಡಿದರು. ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ ಸದಸ್ಯ ಸಿ.ಬಿ. ಸುರೇಶ್ ಬಾಬು ಅವರು, ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪ್ರಸ್ತಾಪಿಸಿ ಮಾತನಾಡುವಾಗ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಧ್ಯಪ್ರವೇಶಿಸಿ ಮಾತನಾಡಿದರು. ಅಮೆಜಾನ್‌, ಸ್ವಿಗ್ಗಿಯಂತಹ ಗಿಗ್‌ ಆ್ಯಪ್‌ಗಳ ಮೂಲಕ ಪ್ರತಿಯೊಂದು ವಸ್ತುವೂ ಮನೆ ಬಾಗಿಲಿಗೆ ಬರುತ್ತಿದೆ. ಮದ್ಯವೂ ಬರುತ್ತಿಲ್ಲ ಎಂಬುದಕ್ಕೆ ಗ್ಯಾರಂಟಿ ಏನು? ಎಂದು ಪ್ರಶ್ನಿಸಿದರು.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆ ಎಲ್ಲವೂ ನಡೆಯುತ್ತಿರಬಹುದು. ಹೀಗಾಗಿಯೇ, ಕರಾವಳಿ ಪ್ರದೇಶದಲ್ಲಿ ಮದ್ಯಮಾರಾಟಕ್ಕೆ ಅಧಿಕೃತ ಅನುಮತಿ ನೀಡಬೇಕು ಎಂದು ಹೇಳಿದ್ದೇನೆ. ಸದ್ಯ ಕರಾವಳಿ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಆದರೆ ಬೀಚ್‌ಗಳಲ್ಲಿ ಬೀರುಗಳು ಸಿಗುತ್ತವೆ. ಕಳ್ಳತನದಿಂದ ಹೋಗಿ ಮಾರಾಟ ಮಾಡುತ್ತಾರೆ. ಇದನ್ನು ತಪ್ಪಿಸಲು ಅಧಿಕೃತವಾಗಿ ಅನುಮತಿ ನೀಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಶಿವಕುಮಾರ್‌ ಹೇಳಿದರು.

ಗಿಗ್‌ ಕಾರ್ಮಿಕರಿಂದ ಡ್ರಗ್ಸ್‌ ಸರಬರಾಜು-ಸುರೇಶ್‌ ಕುಮಾರ್‌:

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಎಸ್‌.ಸುರೇಶ್ ಕುಮಾರ್‌, ‘ಗಿಗ್‌ ಕಾರ್ಮಿಕರು ಡ್ರಗ್ಸ್‌ ಕೂಡ ಸರಬರಾಜು ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ತಮ್ಮ ಅಸಹಾಯಕತೆ ತೋರಿಸಬಾರದು. ಪೊಲೀಸರು ಹಾಗೂ ಅಬಕಾರಿ ಇಲಾಖೆಯವರಿಗೆ ಗೊತ್ತಿಲ್ಲದೆಯೇ ಈ ಅವ್ಯವಹಾರ ಎಲ್ಲವೂ ನಡೆಯುತ್ತಿದೆಯೇ’ ಎಂದು ಕಿಡಿ ಕಾರಿದರು.ಮದ್ಯ ಮಾರಾಟಕ್ಕೆ ಗುರಿಯಿಲ್ಲ, ಆದಾಯ ನಿರೀಕ್ಷೆ ಮಾತ್ರ: ತಿಮ್ಮಾಪುರ

‘ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಗುರಿ ನಿಗದಿ ಮಾಡಿಲ್ಲ. ಅಕ್ರಮ ಮದ್ಯ ಮಾರಾಟ ತಡೆಯಲು ಇಲಾಖೆಯು ನಿರಂತರವಾಗಿ ದಾಳಿ ನಡೆಸುತ್ತಿದ್ದು, ಇದನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ’ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದ್ದಾರೆ.

‘ಕಳೆದ 3 ವರ್ಷಗದಲ್ಲಿ 721 ಕಡೆ ದಾಳಿ ನಡೆಸಿ 491 ಪ್ರಕರಣ ದಾಖಲಿಸಲಾಗಿದೆ. 448 ಜನರನ್ನು ದಸ್ತಗಿರಿ ಮಾಡಿ 641 ಲೀ. ಅಕ್ರಮ ಮದ್ಯ ವಶಪಡಿಸಿಕೊಂಡಿದ್ದೇವೆ. 16 ವಾಹನ ಜಪ್ತಿ ಮಾಡಿ, ₹12.69 ಲಕ್ಷ ದಂಡ ವಿಧಿಸಲಾಗಿದೆ’ ಎಂದರು.

‘ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ಗುರಿ ನೀಡಿಲ್ಲ. ಆದರೆ ಮದ್ಯದಿಂದ ಇಂತಿಷ್ಟು ಆದಾಯ ಬರಬಹುದೆಂಬ ನಿರೀಕ್ಷೆ ಮಾತ್ರ ಇರುತ್ತದೆ ಎಂದು ತಿಳಿಸಿದರು.