ಸಾರಾಂಶ
ಸರ್ಕಾರಿ ಶಾಲೆಗಳಲ್ಲಿ ಇಂದು ವಿಶೇಷ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮಗಳು ವಿರಳವಾಗುತ್ತಿವೆ. ಇಂಥದ್ದರಲ್ಲಿ ಕಡರನಾಯಕನಹಳ್ಳಿ ಶಾಲೆಯಲ್ಲಿ ಆಯೋಜನೆ ಸಂತಸದ ವಿಷಯವಾಗಿದೆ. ಅದರಲ್ಲೂ, ಈ ಶಾಲೆಯ ಮಕ್ಕಳು ಪ್ರಥಮ ಬಾರಿಗೆ ವಿಮಾನ ಯಾನ ಕೈಗೊಂಡಿರುವುದು ತಿಳಿದು ಹೆಚ್ಚಿನ ಸಂತಸವಾಯಿತು ಎಂದು ಮಾಜಿ ಶಾಸಕ ಎಸ್. ರಾಮಪ್ಪ ಹೇಳಿದ್ದಾರೆ.
- ಕಡರನಾಯ್ಕನಹಳ್ಳಿ ಸರ್ಕಾರಿ ಶಾಲೆ ವಾರ್ಷಿಕೋತ್ಸವದಲ್ಲಿ ಮಾಜಿ ಶಾಸಕ ರಾಮಪ್ಪ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಸರ್ಕಾರಿ ಶಾಲೆಗಳಲ್ಲಿ ಇಂದು ವಿಶೇಷ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮಗಳು ವಿರಳವಾಗುತ್ತಿವೆ. ಇಂಥದ್ದರಲ್ಲಿ ಕಡರನಾಯಕನಹಳ್ಳಿ ಶಾಲೆಯಲ್ಲಿ ಆಯೋಜನೆ ಸಂತಸದ ವಿಷಯವಾಗಿದೆ. ಅದರಲ್ಲೂ, ಈ ಶಾಲೆಯ ಮಕ್ಕಳು ಪ್ರಥಮ ಬಾರಿಗೆ ವಿಮಾನ ಯಾನ ಕೈಗೊಂಡಿರುವುದು ತಿಳಿದು ಹೆಚ್ಚಿನ ಸಂತಸವಾಯಿತು ಎಂದು ಮಾಜಿ ಶಾಸಕ ಎಸ್. ರಾಮಪ್ಪ ಹೇಳಿದರು.ಇಲ್ಲಿಗೆ ಸಮೀಪದ ಕಡರನಾಯ್ಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಅಪ್ಪು ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳಿಗೆ ಅಗತ್ಯವಿರುವ ಕೊಠಡಿಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಜತೆ ಚರ್ಚಿಸಿ ಮಂಜೂರಾತಿ ಮಾಡಿಸಲು ಪ್ರಯತ್ನಿಸುತ್ತೇನೆ. ಹೆಸರಾಂತ ನಟ ಡಾ. ಪುನೀತ್ ರಾಜ್‌ಕುಮಾರ್ ಸಾವು ಆಕಸ್ಮಿಕವಾಗಿದೆ. ಅವರು ಕೋಟ್ಯಂತರ ರು.ಗಳನ್ನು ಸಾಮಾಜಿಕ ಮತ್ತು ಬಡವರ ಸೇವೆಗೆ ನೀಡಿದ್ದು ಶ್ಲಾಘನೀಯ ಎಂದರು.ಮುಖಂಡ ಚಂದ್ರಶೇಖರ್, ಬೆಂಗಳೂರಿನ ಡಾ. ಶ್ರೀನಿವಾಸ್, ಮುಖಂಡ ಶ್ರೀನಿವಾಸ್, ಪತ್ರಕರ್ತ ಸದಾನಂದ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಶಿವರಾಜ್, ಮುಖ್ಯ ಶಿಕ್ಷಕ ಎ.ಕೆ. ಮಂಜಪ್ಪ, ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಉಪಾಧ್ಯಕ್ಷ ಪರಶುರಾಮಪ್ಪ, ಹಿರಿಯ ಶಿಕ್ಷಕರಾದ ಕುಬೇರಪ್ಪ, ಸಂಗಮೇಶ್ವರ್, ಸವಿತಾ ವಿಷಯ ಹಂಚಿಕೊಂಡರು. ಜನಪ್ರತಿನಿಧಿಗಳು, ಎಸ್‌ಡಿಎಂಸಿ ಸದಸ್ಯರು ಇದ್ದರು.
ಸಮಾರಂಭದಲ್ಲಿ ದಾನಿಗಳು, ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವ ನಿಮಿತ್ತ ಗ್ರಾಮದ ಶಾಲೆಯ ರಾಜಬೀದಿಗಳ ರಸ್ತೆಯ ಅಕ್ಕಪಕ್ಕದಲ್ಲಿ ದೀಪಾಲಂಕಾರ ಮಾಡಲಾಗಿತ್ತು. ರಸ್ತೆ ಪಕ್ಕದಲ್ಲಿ ಎಲ್‌ಇಡಿ ಪರದೆ ಮೂಲಕ ಮಕ್ಕಳ ಮನರಂಜನೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಅಪ್ಪು ಕುರಿತ ಗೀತೆಗಳಿಗೆ ಮಕ್ಕಳು ನೃತ್ಯ ಮಾಡಿದರು. ವಿಶಿಷ್ಟ ಕಾರ್ಯಕ್ರಮಕ್ಕೆ ಸಹಸ್ರಾರು ಪೋಷಕರು ಸಾಕ್ಷಿಯಾದರು.- - - -೫ಎಂಬಿಆರ್೧.ಜೆಪಿಜಿ: ಶಾಲಾ ವಾರ್ಷಿಕೋತ್ಸವವನ್ನು ಮಾಜಿ ಶಾಸಕ ರಾಮಪ್ಪ ಉಧ್ಘಾಟಿಸಿದರು.