ಒಣಮೆಣಸಿನಕಾಯಿ ಬೆಳೆಗೆ ರೋಗದ ಕಾಟ

| Published : Dec 03 2024, 12:31 AM IST

ಸಾರಾಂಶ

ಮೆಣಸಿನಕಾಯಿಗೆ ರೋಗಗಳು ಗಂಟು ಬಿದ್ದಿದ್ದು ಇಳುವರಿ ಕುಂಠಿತ ಜೊತೆಗೆ ಬೆಲೆ ಕಡಿಮೆಯಾಗಿದೆ.

ಹೊಸಪೇಟೆ: ಪ್ರಮುಖ ವಾಣಿಜ್ಯ ಬೆಳೆ ಮೆಣಸಿನಕಾಯಿಗೆ ರೋಗಗಳು ಗಂಟು ಬಿದ್ದಿದ್ದು ಇಳುವರಿ ಕುಂಠಿತ ಜೊತೆಗೆ ಬೆಲೆ ಕಡಿಮೆಯಾಗಿದ್ದು, ರೈತರಿಗೆ ನಷ್ಟದ ಹೊರೆಯಾಗಿದೆ.ಮೆಣಸಿನಕಾಯಿ ಬೆಳೆಗೆ ಹದವರಿತು ಮಳೆಯಾದರೆ ಇದು ರೈತನ ದೊಡ್ಡ ಖರ್ಚು ವೆಚ್ಚಗಳನ್ನು ನೀಗಿಸುತ್ತದೆ. ಮೆಣಸಿನಕಾಯಿ ಬೆಳೆಯನ್ನೇ ನೆಚ್ಚಿಕೊಂಡು ಹಲವು ರೈತರು ಉತ್ತಮ ಇಳುವರಿ ಹಾಗೂ ಲಾಭ ಬರುತ್ತದೆ ಎಂಬ ಕನಸು ಕಂಡಿದ್ದರು. ಆದರೆ ಈ ಬಾರಿ ಅವರ ಆಸೆಯನ್ನು ಬೆಳೆಗಳಿಗೆ ಬಂದಿರುವ ರೋಗಗಳು ನುಚ್ಚುನೂರು ಮಾಡಿವೆ.

ತಾಲೂಕಿನ ನಲ್ಲಾಪುರ, ಬೈಲುವದ್ದಿಗೆರೆ, ಪಾಪಿನಾಯಕನಹಳ್ಳಿ, ಗಾದಿಗನೂರು, ಹಾಗೂ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಭಾಗದಲ್ಲಿ ಬೆಳೆಯಲಾಗಿದೆ. ಈ ಬಾರಿ ವಿಜಯನಗರ ಜಿಲ್ಲೆಯಲ್ಲಿ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆ ಆಗಿದೆ. ಇದೊಂದು ಚಳಿ ಆಧಾರಿತ ಬೆಳೆಯಾಗಿದ್ದು ಹೆಚ್ಚಿನ ಮಳೆಯಾದರೆ ಕೊಳೆಯುತ್ತದೆ. ಇಲ್ಲವೇ ರೋಗಕ್ಕೆ ತುತ್ತಾಗುತ್ತದೆ. ಪ್ರಸ್ತುತ ವರ್ಷದ ಅತಿವೃಷ್ಟಿಯಿಂದಾಗಿ ಬೆಳೆ ರೋಗಕ್ಕೆ ತುತ್ತಾಗಿದೆ. ಕೊಯ್ಲಿಗೆ ಬರುವ ಮುನ್ನವೇ ಬೆಳೆಯಲ್ಲಿ ಹತ್ತು ಹಲವು ರೋಗಗಳು ಕಾಣಿಸಿಕೊಂಡಿವೆ. ಇದು ಇಳುವರಿಯ ಮೇಲೆ ಹೊಡೆತ ಬೀಳುತ್ತಿದೆ. ಮೆಣಸಿನಕಾಯಿ ಬೆಳೆಯಲು ರೈತರು ಸಾವಿರಾರು ರು. ಖರ್ಚು ಮಾಡಿದ್ದಾರೆ.

ಬೆಳೆಯುವ ವೆಚ್ಚ:

ಪ್ರತಿ ಎಕರೆ ಮೆಣಸಿನಕಾಯಿ ಬೆಳೆಯಲು ₹75 ಸಾವಿರದಿಂದ ₹೧ ಲಕ್ಷವರೆಗೆ ಖರ್ಚು ಮಾಡಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಉತ್ತಮ ಗೊಬ್ಬರ, ಅಗತ್ಯ ನೀರುಣಿಸಿದಲ್ಲಿ 12ರಿಂದ 15 ಕ್ವಿಂಟಲ್ ಫಸಲು ಕೈಗೆ ಸಿಗುತ್ತದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಒಣ ಮೆಣಸಿನಕಾಯಿಗೆ ₹10ರಿಂದ ₹13 ಸಾವಿರ ಬೆಲೆಯಿದೆ. ಫಸಲು ಕೈ ಸೇರುವ ಸಂದರ್ಭದಲ್ಲಿ ಚಳಿಗಾಲದ ಇಬ್ಬನಿಯ ಹೊಡೆತ, ಕೆಲ ದಿನಗಳಿಂದ ಮೋಡ ಮುಸುಕಿದ ವಾತಾವರಣ ಹಾಗೂ ಆಗಾಗ್ಗೆ ಜಿನುಗು ಮಳೆ ಸುರಿಯುತ್ತಿದ್ದು, ಗಿಡಗಳಿಂದ ಬಿಡಿಸಿ ಒಣಗಲು ಹಾಕಿದ ಮೆಣಸಿನಕಾಯಿಗೆ ಫಂಗಸ್‌ರೋಗ ಕಾಣಿಸಿಕೊಂಡಿದೆ.

ಕಾಯಿಗಳ ಮೇಲೆ ಕಪ್ಪು ಚುಕ್ಕೆ ಮೂಡಿದ್ದು, ಕೊಳೆಯುವಿಕೆ ಶುರುವಾಗಿದೆ. ಒಂದು ಕಾಯಿಯಿಂದ ಮತ್ತೊಂದು ಕಾಯಿಗೆ ಬಹುಬೇಗ ಫಂಗಸ್ ಹರಡಿ ಉಳಿದ ಕಾಯಿಗಳನ್ನು ಹಾಳುಮಾಡುತ್ತವೆ ಎಂದು, ರೋಗಬಿದ್ದ ಕಾಯಿಯನ್ನು ಬೇರ್ಪಡಿಸುವುದು ರೈತರ ತಲೆಬಿಸಿಗೆ ಕಾರಣವಾಗಿದೆ. ರೋಗಬಿದ್ದ ಕಾಯಿಗೆ ಈ ಭಾಗದ ರೈತರು ಕೆಡುಕುಕಾಯಿ ಎಂದು ಹೆಸರಿಟ್ಟಿದ್ದು, ರೋಗ ಪೀಡಿತ ಕಾಯಿಯನ್ನು ಖರೀದಿಸಲು ವ್ಯಾಪಾರಿಗಳು ಸಿದ್ಧರಿಲ್ಲ ಎನ್ನುತ್ತಾರೆ ಒಣ ಮೆಣಸಿನಕಾಯಿ ಬೆಳೆದ ನೆಲ್ಲಾಪುರದ ರೈತರು.

ಒಣ ಮೆಣಸಿನಕಾಯಿ ಬೀಜಕ್ಕೆ ಬಿತ್ತನೆ ಪೂರ್ವ ಬೀಜೋಪಚಾರ ಮಾಡಿದಲ್ಲಿ ರೋಗದ ಸಾಧ್ಯತೆ ಬಹಳ ಕಡಿಮೆಯಾಗುತ್ತದೆ. ಆಕಸ್ಮಿಕವಾಗಿ ಫಂಗಲ್ (ಕಪ್ಪು ಮಚ್ಚೆ) ಡಿಸೀಜ್, ಬ್ಯಾಕ್ಟೀರಿಯಲ್ ಬ್ಲೈಟ್ (ಬಿಳಿ ಮಚ್ಚೆ) ರೋಗ ಕಾಣಿಸಿಕೊಂಡಲ್ಲಿ ರಾಸಾಯನಿಕ ಸಿಂಪಡಿಸಿದರೆ, ರೋಗ ನಿಯಂತ್ರಣಕ್ಕೆ ಬರುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಚಿದಾನಂದ.