ಸಾರಾಂಶ
ಧಾರವಾಡ: ಇತಿಹಾಸ ಪುನರ್ ಪರಿಶೀಲಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು. ಐತಿಹಾಸಿಕ ಘಟನೆಗಳಾದ ಕಿತ್ತೂರು ಚೆನ್ನಮ್ಮನ ಹೋರಾಟದ ಹೆಜ್ಜೆಗಳನ್ನು ನಮ್ಮ ಮಕ್ಕಳು ಇತಿಹಾಸದ ಪುಟದಲ್ಲಿ ಓದುವಂತಾಗಬೇಕು. ಬ್ರಿಟಿಷರ ವಿರುದ್ಧ ಭಾರತದಲ್ಲಿಯೇ ಮೊದಲು ಹೋರಾಟ ಮಾಡಿದ ವೀರ ವನಿತೆಗೆ ಐತಿಹಾಸಿಕ ಅಪಮಾನ ಮಾಡಿರುವುದು ಖಂಡನೀಯ ಎಂದು ಕೆ.ಇ. ಬೋರ್ಡ್ ಕಾಲೇಜಿನ ಪ್ರಾಚಾರ್ಯೆ ಡಾ. ಶರಣಮ್ಮ ಗೋರೆಬಾಳ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಶಾಂತಾದೇವಿ ಮಾಳವಾಡ ದತ್ತಿ ನಿಮಿತ್ತ ಕಿತ್ತೂರು ಚೆನ್ನಮ್ಮನ ವಿಜಯೋತ್ಸವಕ್ಕೆ 200 ವರ್ಷ ಸವಿನೆನಪಿನ ಅಂಗವಾಗಿ ಶನಿವಾರ ಸಂಘದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ‘ಸ್ವಾತಂತ್ರ್ಯದ ಅರಿವು ಮಹಿಳಾ ಹೋರಾಟದ ಹೆಜ್ಜೆಗಳು’ ವಿಷಯ ಕುರಿತು ಮಾತನಾಡಿದರು.ಭಾರತದ ಇತಿಹಾಸದಲ್ಲಿ ದಕ್ಷಿಣದ ಪ್ರಾದೇಶಿಕತೆಯನ್ನು ಅಲಕ್ಷಿಸಲಾಗಿದೆ. ಉತ್ತರದ ಪ್ರಾದೇಶಿಕತೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇಂದಿಗೂ ಇತಿಹಾಸದಲ್ಲಿ ಉತ್ತರದವರೆ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಆದರೆ, 1824ರಲ್ಲಿ ಅಕ್ಟೋಬರ್ 23ರ ಐತಿಹಾಸಿಕ ಘಟನೆ ಕಿತ್ತೂರು ವಿಜಯೋತ್ಸವ, ರಾಣಿ ಚೆನ್ನಮ್ಮ ಥ್ಯಾಕ್ರೆಯನ್ನು ನಿರ್ನಾಮ ಮಾಡಿ ಬ್ರಿಟಿಷ್ ಅಧಿಕಾರಿಯನ್ನು ಚೆನ್ನಮ್ಮನ ಬಲಗೈ ಬಂಟ ಅಮಠೂರ ಬಾಳಪ್ಪ ಕೊಂದಿರುವುದು ಕೂಡ ದಾಖಲೆಯಾಗಿಲ್ಲ. ಕಾರಣ ಇತಿಹಾಸದ ತಜ್ಞರು ಈ ಘಟನೆಯನ್ನು ಪುನರ್ ಪರಿಶೀಲಿಸಿ ನಿಜವಾದ ಇತಿಹಾಸವನ್ನು ಮುಂದಿನ ಜನಾಂಗಕ್ಕೆ ತಲುಪಿಸುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಶಾಂತಾ ಇಮ್ರಾಪುರ, ಚೆನ್ನಮ್ಮನ ಕುರಿತಾಗಿ ಸಂಶೋಧನೆ ನಡೆಯುತ್ತಲೆ ಇವೆ. ಜಾನಪದ ಲಾವಣಿಗಳು, ಜನಪದ ಕಲಾಪ್ರಕಾರಗಳು, ಮೌಖಿಕ ಪರಂಪರೆಯಲ್ಲಿ ಚೆನ್ನಮ್ಮನ ಇತಿಹಾಸ ಕಟ್ಟಿಕೊಟ್ಟಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮಿಬಾಯಿಗಿಂತ ಮೊದಲು ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿದ ಮೊಟ್ಟ ಮೊದಲ ಮಹಿಳೆ ಕಿತ್ತೂರಿನ ಚೆನ್ನಮ್ಮ. ಇತಿಹಾಸ ತಜ್ಞರು ಇದನ್ನು ಅರಿತು ಸರ್ಕಾರಕ್ಕೆ ವರದಿ ನೀಡಬೇಕು ಎಂದರು.ಕನ್ನಡದ ಪ್ರದೇಶದಲ್ಲಿ ಮಹಿಳೆಯರ ಆಶಾಕಿರಣವಾಗಿ ಹೊರಹೊಮ್ಮಿದ ಚೆನ್ನಮ್ಮ ಮೊದಲ ಕನ್ನಡತಿ ಎಂದು ಹೇಳಿ ನಾವು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8ರಂದು ಆಚರಿಸುತ್ತೇವೆ. ಇದು ಪಾಶ್ಚಾತ್ಯ ಪ್ರಮಾಣಿತ ಕಾರ್ಯಕ್ರಮವಾಗಿದ್ದು, ನಾವು ಪ್ರಜ್ಞಾವಂತರು ಅಕ್ಟೋಬರ್ 23ನ್ನು ಕನ್ನಡದ ಮಹಿಳಾ ಹೋರಾಟಗಾರ್ತಿಯ ನೆನಪಿನಲ್ಲಿ ಆಚರಣೆ ಮಾಡಬೇಕು ಎಂದರು.
ಶಂಕರ ಕುಂಬಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕ ನುಡಿ ಹೇಳಿದರು. ಡಾ. ಶ್ರೀಶೈಲ ಹುದ್ದಾರ ಕಾರ್ಯಕ್ರಮ ನಿರೂಪಿಸಿದರು. ಪದವಿ ಕಾಲೇಜಿನ 500ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.