ಪೂರ್ವಿಕರ ಆಶಯಕ್ಕೆ ವಿರುದ್ಧವಾಗಿರುವ ಆಡಳಿತ ಮಂಡಳಿ ವಜಾವಾಗಲಿ: ಶಾಸಕ ಎ.ಆರ್‌ ಕೃಷ್ಣಮೂರ್ತಿ

| Published : Feb 10 2024, 01:50 AM IST

ಪೂರ್ವಿಕರ ಆಶಯಕ್ಕೆ ವಿರುದ್ಧವಾಗಿರುವ ಆಡಳಿತ ಮಂಡಳಿ ವಜಾವಾಗಲಿ: ಶಾಸಕ ಎ.ಆರ್‌ ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಪರಭಾರೆ ಸಂಬಂಧ ಜಿಲ್ಲಾಡಳಿತ ತನಿಖೆ ನಡೆಸಿ ವರದಿ ನೀಡಿ ತಪ್ಪಿಸ್ಥರ ವಿರುದ್ಧ ಒಂದು ವಾರದೊಳಗೆ ಕ್ರಮ ಕೈಗೊಳ್ಳಲಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭವಾರ್ತೆ ಚಾಮರಾಜನಗರ

ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಪರಭಾರೆ ಸಂಬಂಧ ಜಿಲ್ಲಾಡಳಿತ ತನಿಖೆ ನಡೆಸಿ ವರದಿ ನೀಡಿ ತಪ್ಪಿಸ್ಥರ ವಿರುದ್ಧ ಒಂದು ವಾರದೊಳಗೆ ಕ್ರಮ ಕೈಗೊಳ್ಳಲಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಆದಿಕರ್ನಾಟಕ ಅಭಿವೃದ್ಧಿ ಸಂರಕ್ಷಣಾ ಸಮಿತಿ ವತಿಯಿಂದ ಸಮುದಾಯ ಮುಖಂಡರು ಚಂದಕವಾಡಿಯಿಂದ ಚಾಮರಾಜನಗರಕ್ಕೆ ನಡೆಸಿದ ಪಾದಯಾತ್ರೆ ಹಾಗೂ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಹಾಗೂ ಆಡಳಿತ ಮಂಡಳಿಯ ವಿರುದ್ಧ ಆಸ್ತಿ ಸಂರಕ್ಷಣಾ ಸಮಿತಿಯವರು ಮಾಡುತ್ತಿರುವ ಆರೋಪದಲ್ಲಿ ಸತ್ಯಾಂಶ ಇದೆ. ಇತ್ತೀಚಿಗೆ ನಡೆದ ಜನಸ್ಪಂದನ ಸಭೆಯಲ್ಲಿಯು ಸಹ ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದು, ಆ ಸಂದರ್ಭದಲ್ಲಿ ನಾನು ಸಹ ಇದ್ದೆ. ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಕ್ತ ಕ್ರಮಕ್ಕೆ ಸೂಚನೆಯನ್ನು ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತನಿಖೆ ಚುರುಕು ಗೊಳಿಸಿ ಕೂಡಲೇ ಅದರ ವರದಿಯನ್ನು ನೀಡಿ, ತಪ್ಪಿಸ್ಥರ ವಿರುದ್ಧ ಕ್ರಮವಾಗಬೇಕು. ಆಸ್ತಿ ಪರಭಾರೆ ರದ್ದಾಗಬೇಕು. ಆಡಳಿತ ಮಂಡಳಿ ಲೋಪವೆಸಗಿದ್ದರೆ ವಜಾಗೊಳಿಸಿ, ಆಡಳಿತಾಧಿಕಾರಿಯನ್ನು ನೇಮಕ ಮಾಡಿ. ಸಮುದಾಯದ ಎಲ್ಲರನ್ನು ಸದಸ್ಯರನ್ನಾಗಿಸಿಕೊಂಡು ಹೊಸ ಸಮಿತಿಯನ್ನು ರಚನೆ ಮಾಡಬೇಕು. ಸಮುದಾಯದ ಹಿತ ಕಾಯಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದರು.

ತಾಲೂಕು ಕೇಂದ್ರದ ಹೃದಯ ಭಾಗದಲ್ಲಿ ಸಮುದಾಯದ ವಿದ್ಯಾರ್ಥಿನಿಲಯವು ಅನೇಕ ಹಿರಿಯರ ಪರಿಶ್ರಮದ ಫಲದಿಂದ ನಿರ್ಮಾಣವಾಗಿದೆ. ನಮ್ಮ ತಂದೆ ದಿ. ಬಿ.ರಾಚಯ್ಯ, ದಿ. ಆರ್. ಧ್ರುವನಾರಾಯಣ, ಆರ್. ರಂಗಸ್ವಾಮಿ ಸೇರಿದಂತೆ ಅನೇಕ ಪೂರ್ವಿಕರ ಚಿಂತನೆ ಮತ್ತು ಹೋರಾಟದ ಫಲವಾಗಿ ಈ ಆಸ್ತಿ ನಮ್ಮದಾಗಿದೆ. ಕೆ.ಸಿ. ರಂಗಯ್ಯ ಉತ್ತಮವಾಗಿ ನಿರ್ವಹಣೆ ಮಾಡಿ, ಹೆಸರುವಾಸಿಯಗಿದ್ದರು ಸಹ ಅವರ ಹಿಂದೆ ಇದ್ದ ಅನೇಕ ಪೂರ್ವಿಕರನ್ನು ಸ್ಮರಿಸೋಣ. ಆದರೆ, ನಂತರ ಬಂದ ಅಡಕ್ ಸಮಿತಿಯ ಅಧ್ಯಕ್ಷ ನಂಜುಂಡಸ್ವಾಮಿ ಸಮಾಜದ ಹಿತವನ್ನು ಕಾಯುವ ಬದಲು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ಮಾತು ಕೇಳುವವರನ್ನು ಕಮಿಟಿಯಲ್ಲಿ ಸೇರಿಸಿಕೊಂಡಿರುವುದೇ ಇಷ್ಟೇಲ್ಲಾ ರದ್ದಾಂತಗಳಿಗೆ ಕಾರಣವಾಗಿದೆ. ಅಲ್ಲಿ ಇರುವ ಒಬ್ಬ ನಿರ್ದೇಶಕರು ಸಹ ಇದರ ವಿರುದ್ಧ ಧ್ವನಿ ಎತ್ತಿಲ್ಲ. ಅವರು ನಿಜವಾಗಿಯೂ ಅಂಬೇಡ್ಕರ್ ಅನುಯಾಯಿಗಳಾಗಿದ್ದರೆ, ರಾಜೀನಾಮೆ ಕೊಟ್ಟು ಹೊರ ಬರಬೇಕಾಗಿತ್ತು. ಇಲ್ಲ ಪ್ರಶ್ನೆ ಮಾಡಬಹುದಾಗಿತ್ತು ಎಂದು ಕೃಷ್ಣಮೂರ್ತಿ ಪ್ರಶ್ನೆ ಮಾಡಿದರು.

ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶಸ್ವಾಮೀಜಿ ಮಾತನಾಡಿ, ಬಿ.ಆರ್. ಅಂಬೇಡ್ಕರ್ ಅನುಯಾಯಿಗಳಾದ ನಾವೆಲ್ಲರು ನಮ್ಮ ಕಾನೂನನ್ನು ಗೌರವಿಸಬೇಕಾಗಿದೆ. ಸಂವಿಧಾನ ಹಾಗೂ ಕಾನೂನಿನ ವಿರುದ್ಧ ವಾಗಿರುವ ಈ ಕಮಿಟಿ ರದ್ದಾಗಬೇಕು. ಮೈಸೂರಿನಲ್ಲಿ ಅನೇಕ ಕಡೆ ಆದಿ ಕರ್ನಾಟಕ ಸಂಘಟನೆಗಳು ಬಹಳ ವ್ಯವಸ್ಥಿತವಾಗಿ ನಡೆಯುತ್ತಿವೆ, ನೂರಾರು ಕೋಟಿ ಆಸ್ತಿಯನ್ನು ಹೊಂದಿದೆ. ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಕೊಡಿಸವುವಲ್ಲಿ ಶ್ರಮಿಸುತ್ತಿದ್ದೇವೆ. ಆದರೆ, ಚಾಮರಾಜನಗರದಲ್ಲಿ ಈ ಮಟ್ಟದಲ್ಲಿ ಬೆಳೆಯಬೇಕು. ಒಂದೇ ಸಮುದಾಯದಲ್ಲಿ ಇಂಥ ಭಿನ್ನಾಪ್ರಾಯಗಳು ಬೇಡ ಎಂದರು.

ಸಮಿತಿಯ ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ತಾಪಂ ಮಾಜಿ ಅಧ್ಯಕ್ಷ ಆರ್. ಮಹದೇವ್ ಸಂಘ ಅಧ್ಯಕ್ಷರು ತಮ್ಮ ಅಣ್ಣ ಮಕ್ಕಳಿಗೆ ಸಂಘದ ಆಸ್ತಿಯನ್ನು ಪರಾಭಾರೆ ಮಾಡಿರುವ ಎಲ್ಲಾ ದಾಖಲಾತಿಗಳನ್ನು ಪ್ರದರ್ಶನ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.

ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ದಲಿತ ಹಿರಿಯ ಮುಖಂಡ ವೆಂಕಟರಮಣಸ್ವಾಮಿ ( ಪಾಪು) ಸಂಘ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕ್ರಿಮಿನಾಲ್ ಪ್ರಕರಣ ದಾಖಲು ಮಾಡಿ, ನ್ಯಾಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ಸ್ಥಳಗಕ್ಕಾಮಿಸಿದ ಎಡಿಸಿ ಗೀತಾ ಹುಡೇದ ಅವರಿಗೆ ಏಳು ಪ್ರಮಖ ಬೇಡಿಕೆವುಳ್ಳ ಮನವಿ ಪತ್ರವನ್ನು ಸಲ್ಲಿಸಿದರು.

ಚಂದಕವಾಡಿಯಿಂದ ಪಾದಯಾತ್ರೆ: ತಾಲೂಕಿನ ಚಂದಕವಾಡಿ ಅಂಬೇಡ್ಕರ್ ಭವನದಿಂದ ನೂರಾರು ಸಂಖ್ಯೆಯಲ್ಲಿ ಪಾದಯಾತ್ರೆ ಹೊರಟು ರಾಮಸಮುದ್ರದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಪಾದಯಾತ್ರೆ ಜಿಲ್ಲಾಡಳಿತ ಭವನಕ್ಕೆ ತಲುಪಿತು. ಯಾತ್ರೆಯಲ್ಲಿ ಅಂಬೇಡ್ಕರ್, ಬಿ. ರಾಚಯ್ಯ, ಕೆ.ಸಿ. ರಂಗಯ್ಯ ಭಾವಚಿತ್ರಗಳು ರಾರಾಜಿಸಿದವು. ಪ್ರತಿಭಟನೆಯಲ್ಲಿ ನಲ್ಲೂರು ಸೋಮೇಶ್ವರ್, ನಾಗವಳ್ಳಿ ನಾಗಯ್ಯ, ನಲ್ಲೂರು ಮಹದೇವಸ್ವಾಮಿ, ಯಜಮಾನರಾದ ಮಂಗಲ ರಂಗಸ್ವಾಮಿ, ಹೊಂಗನೂರು ವೀರಣ್ಣ, ಹೊಸೂರು ಸೋಮಣ್ಣ, ಚನ್ನಂಜಯ್ಯ, ಯ. ಪಾಪಯ್ಯ, ಹೊಂಗನೂರು ಪುಟ್ಟಸ್ವಾಮಿ, ಸಿ.ಎಂ. ಕೃಷ್ಣಮೂರ್ತಿ, ಗೋವಿಂದರಾಜು, ನಲ್ಲೂರು ಪರಮೇಶ್, ಬ್ಯಾಡಮೂಡ್ಲು ಬಸವಣ್ಣ, ಮೋಹನ್ ನಗು, ಅಕ್ಷಯ್, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.ಶಾಸಕರು ಮೂಗು ತೂರಿಸುವುದು ಸರಿಯಲ್ಲ: ಎಆರ್‌ಕೆ ಚಾಮರಾಜನಗರ: ಸ್ಥಳಿಯ ಶಾಸಕರು ಸಮುದಾಯ ವಿಚಾರದಲ್ಲಿ ಮೂಗು ತೂರಿಸುವುದನ್ನು ಸಹಿಸುವುದಿಲ್ಲ. ಈಗ ನಾಲ್ಕು ಬಾರಿ ತಾವು ಶಾಸಕರಾಗಲು ಸಮುದಾಯವರು ಕಾರಣ ಎಂಬುದನ್ನು ಅರ್ಥೈಯಿಸಿಕೊಂಡು ನ್ಯಾಯದ ಪರವಾಗಿ ನಿಲ್ಲಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಪರೋಕ್ಷವಾಗಿ ಪುಟ್ಟರಂಗಶೆಟ್ಟರನ್ನು ತರಾಟೆಗೆ ತೆಗೆದು ಕೊಂಡರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಆದಿ ಕರ್ನಾಟಕ ಸಮಾಜಕ್ಕೆ ಸೇರಿದ ಆಸ್ತಿ ಪರಾಭಾರೆಯಾಗಿರುವ ವಿಚಾರದಲ್ಲಿ ತಹಸೀಲ್ದಾರ್ ಬಸವರಾಜು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂಥ ಅಧಿಕಾರಿಯನ್ನೇ ಒಂದಲ್ಲ, ಎರಡು ಬಾರಿ ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದಾರೆ. ಅಲ್ಲದೇ ನಮ್ಮ ಸಮುದಾಯದ ವಿಚಾರದಲ್ಲಿ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಕಂದಾಯ ಇಲಾಖೆಯ ಸಚಿವರಿಗೆ ತಾಲೂಕು ತಹಸೀಲ್ದಾರ್ ವಿರುದ್ಧ ಪತ್ರ ಬರೆದಿದ್ದಾರೆ. ನಾನು ಸಹ ಈ ತಾಲೂಕಿನ ಶಾಸಕ ಎಂಬುದನ್ನು ಮರೆತಿದ್ದಾರೆ ಎಂದರು.