15 ದಿನದೊಳಗೆ ಅರ್ಜಿಗಳ ವಿಲೇವಾರಿ ಮಾಡಿ: ಭೀಮಣ್ಣ ನಾಯ್ಕ

| Published : Jul 02 2024, 01:33 AM IST

15 ದಿನದೊಳಗೆ ಅರ್ಜಿಗಳ ವಿಲೇವಾರಿ ಮಾಡಿ: ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ದೂರುಗಳಿಗೆ ೧೫ ದಿನಗಳ ಒಳಗಾಗಿ ಅಧಿಕಾರಿಗಳು ಅರ್ಜಿ ವಿಲೇವಾರಿ ಮಾಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ಶಿರಸಿ: ಸಾರ್ವಜನಿಕರ ಸಮಸ್ಯೆಗಳನ್ನು ಒಂದೇ ವೇದಿಕೆಯಲ್ಲಿ ಬಗೆಹರಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ನಗರದ ಅಂಬೇಡ್ಕರ ಸಭಾಭವನದಲ್ಲಿ ಜನಸ್ಪಂದನ ಸಭೆ ಹಮ್ಮಿಕೊಳ್ಳಲಾಗಿತ್ತು.ಗ್ರಾಮೀಣ ಭಾಗಳ ಸಮಸ್ಯೆಗಿಂತ ನಗರಸಭೆಯ ವ್ಯಾಪ್ತಿಯ ಸಮಸ್ಯೆಗಳೆ ಹೆಚ್ಚು ಕೇಳಿಬಂದವು. ಹಳ್ಳಿಯ ಸಾರ್ವಜನಿಕರಿಂದ ರಸ್ತೆ, ವಿದ್ಯುತ್, ವಾಹನ ಸಂಪರ್ಕದ ಕುರಿತಂತೆ ದೂರು ಅರ್ಜಿಗಳು ಬಂದಿವೆ.ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ದೂರುಗಳಿಗೆ ೧೫ ದಿನಗಳ ಒಳಗಾಗಿ ಅಧಿಕಾರಿಗಳು ಅರ್ಜಿ ವಿಲೇವಾರಿ ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ತಕ್ಷಣಕ್ಕೆ ಸಿಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಅನೇಕ ಸಮಸ್ಯೆಗಳನ್ನು ಒಂದೇ ವೇದಿಕೆಯಲ್ಲಿ ಬಗೆಹರಿಸುವ ಉದ್ದೇಶದಿಂದ ಜನಸ್ಪಂದನ ಸಭೆ ಹಮ್ಮಿಕೊಂಡಿದ್ದೇವೆ. ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಯತ್ನ ನಡೆಸುತ್ತೇವೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಕೇಳಲು, ಅರ್ಜಿ ನೀಡಲು ಯಾವುದೇ ಮುಲಾಜಿಗೊಳಗಾಗಬಾರದು ಎಂದರು.ನಗರದಲ್ಲಿ ಫಾರಂ ನಂ. ೩ ನೀಡುವಿಕೆಯಲ್ಲಿ ಇನ್ನೂ ಸಮಸ್ಯೆ ಇರುವ ಕುರಿತಂತೆ ಕೆಲವರು ಸಭೆಯ ಗಮನಕ್ಕೆ ತಂದರು.ಈ ಕುರಿತು ಉತ್ತರಿಸಿದ ಭೀಮಣ್ಣ ನಾಯ್ಕ, ಈಗಾಗಲೇ ಫಾರಂ ನಂ. ೩ ಸಮಸ್ಯೆ ಬಗೆಹರಿಸಲು ಯತ್ನ ನಡೆದಿದೆ. ಈ ಕುರಿತಂತೆ ಸದನ ಉಪ ಸಮಿತಿ ಸಹ ರಾಜ್ಯ ಸರ್ಕಾರ ರಚನೆ ಮಾಡಿದ್ದು, ಶೀಘ್ರವೇ ವರದಿ ಸಲ್ಲಿಸಲಿದೆ. ಇದರ ಜತೆಯಲ್ಲಿಯೇ ನಗರದ ೩೧ ವಾರ್ಡ್‌ನ್ನು ಸಿಟಿ ಸರ್ವೆ ಅಡಿಯಲ್ಲಿ ಸೇರಿಸುವ ಯತ್ನವೂ ನಡೆಯುತ್ತಿದೆ. ಕಳೆದ ಕೆಲ ವರ್ಷಗಳಿಂದ ಕೆಲವರು ಮನೆ ನಿರ್ಮಿಸಿಕೊಳ್ಳುತ್ತಿದ್ದುದೂ ಗಮನಕ್ಕೆ ಬಂದಿದೆ. ಯಾರೂ ಲೇಔಟ್ ಮಾಡಿಸಿಕೊಳ್ಳದೇ ಮನೆ ನಿರ್ಮಿಸಿಕೊಳ್ಳಬೇಡಿ ಎಂದರು.ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ, ಪ್ರಭಾರಿ ತಹಸೀಲ್ದಾರ್ ರಮೇಶ ಹೆಗಡೆ, ತಾಪಂ ಆಡಳಿತಾಧಿಕಾರಿ ಬಿ.ಪಿ. ಸತೀಶ, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ, ನಗರಸಭೆ ಪೌರಾಯುಕ್ತ ಕಾಂತರಾಜು, ಡಿವೈಎಸ್ಪಿ ಗಣೇಶ ಕೆ.ಎಲ್. ಮತ್ತಿತರರು ಇದ್ದರು.