ರಾಮನಗರ: ಸಾರ್ವಜನಿಕರ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿರುವ ಬಯೋ ಮೆಡಿಕಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು

ರಾಮನಗರ: ಸಾರ್ವಜನಿಕರ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿರುವ ಬಯೋ ಮೆಡಿಕಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರದ ಶಾಂತಿಕೇತನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಹಾಗೂ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಅವಧಿ ಮೀರಿದ ಔಷಧಗಳನ್ನು ವಿಲೇವಾರಿ ಮಾಡಲು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಅಥವಾ ಪ್ರಾಣಿಗಳ ಚಿಕಿತ್ಸೆ, ಸಂಶೋಧನೆ ಮತ್ತು ಲಸಿಕೆ ಉತ್ಪಾದನೆ ಸಮಯದಲ್ಲಿ ಉತ್ಪತ್ತಿಯಾಗುವ ಸಾಂಕ್ರಾಮಿಕ ಹಾಗೂ ಅಪಾಯಕಾರಿ ತ್ಯಾಜ್ಯವನ್ನು ಬಯೋ ಮೆಡಿಕಲ್ ತ್ಯಾಜ್ಯವಾಗಿದೆ. ಈ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡುವುದು ಕಡ್ಡಾಯ. ಬಯೋ ಮೆಡಿಕಲ್ ತ್ಯಾಜ್ಯವನ್ನು ಸಾಮಾನ್ಯ ಕಸದೊಂದಿಗೆ ಬೆರೆಸುವುದು ಕಾನೂನು ಬಾಹಿರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ. ಇವುಗಳ ನಿರ್ವಹಣೆಗಾಗಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳು 2016 ಜಾರಿಯಲ್ಲಿದೆ. ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳು ಈ ತ್ಯಾಜ್ಯಗಳನ್ನು ಅಧಿಕೃತ ಸಂಶೋಧನಾ ಘಟಕಗಳಿಗೆ ಕಡ್ಡಾಯವಾಗಿ ಹಸ್ತಾಂತರಿಸಬೇಕು ಎಂದು ತಿಳಿಸಿದರು.

ಈ ಹಿಂದೆ ನಗರದಲ್ಲಿ ಖಾಸಗಿ ಚಿಕಿತ್ಸಾಯ, ನರ್ಸಿಂಗ್‌ ಹೋಂಗಳಲ್ಲಿ ಉತ್ಪತ್ತಿಯಾದ ಬಯೋಮೆಡಿಕಲ್ ತ್ಯಾಜ್ಯಗಳನ್ನು ರಸ್ತೆಗೆ ತಂದು ಹಾಕುತ್ತಿದ್ದರು. ಪ್ರಸಕ್ತ ಕೆಲವೊಂದು ಸಂಸ್ಥೆಯವರು ಬಯೋಮೆಡಿಕಲ್ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ ಪರಿಸರ ಸಂರಕ್ಷಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಕೆ.ಶೇಷಾದ್ರಿ ಹೇಳಿದರು.

ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಈ ಮೊದಲು ಸ್ವತಂತ್ರವಾಗಿ ಅವಧಿ ಮೀರಿದ ಔಷಧಗಳನ್ನು ಗ್ರಾಹಕರಿಂದ ನಾವು ಪಡೆದುಕೊಳ್ಳುತ್ತಿದ್ದವು. ಪ್ರಸಕ್ತ ಈಗ ಸಂಸ್ಥೆಯೊಂದಿಗೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದ್ದು, ತಿಂಗಳಿನ ಎರಡು ದಿನ ಅವಧಿ ಮೀರಿದ ಔಷಧ ತ್ಯಾಜ್ಯಗಳನ್ನು ಗ್ರಾಹಕರಿಂದ ಪಡೆದುಕೊಳ್ಳಲಾಗುತ್ತಿದೆ. ಬಳಿಕ ಅದನ್ನು ವೈಜ್ಞಾನಿಕವಾಗಿ ನಾಶಪಡಿಸಲಾಗುತ್ತದ್ದು, ಆ ಮೂಲಕ ಪರಿಸರ ಸಂರಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅವಧಿ ಮೀರಿದ ಔಷದಗಳನ್ನು ವಿಲೆ ಮಾಡಲು ಬುಟ್ಟಿಗಳನ್ನು ಔಷಧ ವ್ಯಾಪಾರಿಗಳಿಗೆ ಜಿಲ್ಲಾ ಸಂಘದ ವತಿಯಿಂದ ವಿತರಣೆ ಮಾಡಲಾಯಿತು. ಜಿಲ್ಲಾ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಸಮ್ರತಾ ಹಳ್ಳೂರ, ಶಾಂತಿನಿಕೇತನ ಸಮೂಹ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಕುಮಾರಸ್ವಾಮಿ, ಪ್ರಾಂಶುಪಾಲೆ ಪ್ರಮೀಳಾ ಮಾತನಾಡಿದರು.

ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಕೆ.ಎಸ್.ಕೃಷ್ಣ, ಜಿಲ್ಲಾ ಖಜಾಂಚಿ ರೂಪೇಶ್‌ಕುಮಾರ್, ಕಾರ್ಯದರ್ಶಿ ವಿ.ರಾಜಶೇಖರ್, ರಾಮನಗರ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅತೀಕ್, ಜಂಟಿ ಕಾರ್ಯದರ್ಶಿ ಪುರುಷೋತ್ತಮ್, ಖಜಾಂಚಿ ಸೈಯದ್ ಅಕ್ರಂ ಮತ್ತಿತರರು ಉಪಸ್ಥಿತರಿದ್ದರು.

3ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಶಾಂತಿಕೇತನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಅವಧಿ ಮೀರಿದ ಔಷಧಗಳನ್ನು ವಿಲೇವಾರಿ ಮಾಡಲು ಜಾಗೃತಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಶೇಷಾದ್ರಿ ಉದ್ಘಾಟಿಸಿದರು.