ರಸ್ತೆ ಕಾಮಗಾರಿ ಸ್ಥಗಿತದಿಂದ ಸಾರ್ವಜನಿಕರ, ವಿದ್ಯಾರ್ಥಿಗಳ ಪರದಾಟ

| Published : Feb 21 2025, 11:45 PM IST

ಸಾರಾಂಶ

ರಸ್ತೆ ಅಗಲೀಕರಣ ಮತ್ತು ರಸ್ತೆ ಡಾಂಬರೀಕರಣ ಕಾಮಗಾರಿ ಸ್ಥಗಿತಗೊಂಡಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಹೈರಾಣಾಗಿದ್ದಾರೆ.

ಸುಬ್ರಮಣಿ ಆರ್

ಕನ್ನಡ ಪ್ರಭ ವಾರ್ತೆ ಸಿದ್ದಾಪುರ

ಸಿದ್ದಾಪುರದಿಂದ ಇಂಜಿಲಗೆರೆಯವರೆಗಿನ 2 ಕಿ ಮೀ ರಸ್ತೆ ಅಗಲೀಕರಣ ಮತ್ತು ರಸ್ತೆ ಡಾಂಬರೀಕರಣ ಕಾಮಗಾರಿ‌ ತಾತ್ಕಲಿಕವಾಗಿ ಸ್ಥಗಿತಗೊಂಡಿದ್ದು ವಿದ್ಯಾರ್ಥಿಗಳು, ವಾಹನ ಸವಾರರು, ಸಾರ್ವಜನಿಕರು ಹೈರಾಣಾಗಿದ್ದಾರೆ. ಕಾಮಗಾರಿ ಸ್ಥಗಿತದಿಂದಾಗಿ ಅಂಗಡಿಗಳು, ಮನೆಗಳ ಮೇಲೆ ಮಣ್ಣಿನ ಧೂಳು ಆವರಿಸಿಕೊಂಡಿದ್ದು ಕಾಮಗಾರಿಯ ವಿಳಂಬಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದಾಪುರದ ಪಾಲಿಬೆಟ್ಟ ರಸ್ತೆ ಬಳಿಯಿಂದ ಇಂಜಿಲಗೆರೆ ವರೆಗಿನ 13 ಕೋಟಿ ರು. ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದು ನಂತರ ಪ್ರಾರಂಭಗೊಂಡ ಕಾಮಗಾರಿ ನಿಧಾನಗತಿಯಿಂದ ನಡೆಯುತ್ತಿತ್ತು. ರಸ್ತೆಯ ಒಂದು ಬದಿಯಲ್ಲಿ ಚರಂಡಿ ನಿರ್ಮಾಣಕ್ಕೆ ಅವೈಜ್ಞಾನಿಕವಾಗಿ ತೆಗೆದ ಗುಂಡಿಗಳ ಮಧ್ಯೆ ವಿದ್ಯುತ್ ಕಂಬಗಳಿದ್ದು ಅದನ್ನು ಸ್ಥಳಾಂತರಿಸದೆ ಚರಂಡಿ ನಿರ್ಮಾಣಕ್ಕೆ ಮುಂದಾಗಿರುವುದು ಕಂಡು ಬಂದಿದೆ.

ಶಾಲೆ, ಆಸ್ಪತ್ರೆಗೆ ತೆರಳಲು‌ ಹರಸಾಹಸ

ಈ ಪ್ರದೇಶಗಳ‌ ಸಮೀಪ 2 ಖಾಸಗಿ ಒಂದು ಸರ್ಕಾರಿ ಮಲಯಾಳಂ ಸೇರಿದಂತೆ ಮೂರು ಶಾಲೆಗಳು ಹಾಗೂ ಹಿಲ್ ಬ್ಲೂಂ ಹೆಸರಿನ ಖಾಸಗಿ ಆಸ್ಪತ್ರೆಯಿದ್ದು ಅಪೂರ್ಣ ಕಾಮಗಾರಿಯಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಶಾಲಾ ವಾಹನ ನಿಲ್ಲಿಸಲು ಪರದಾಡುವಂತಾಗಿದೆ. ಖಾಸಗಿ ಆಸ್ಪತ್ರೆಗೆ ತೆರಳಲಾಗದ ಅನಾರೋಗ್ಯ ಪೀಡಿತರು ಬಳಲುತ್ತಿದ್ದು ಹಿಡಿಶಾಪ ಹಾಕಿ ಆಸ್ಪತ್ರೆಗೆ ತೆರಳುವಂತಾಗಿದೆ.

ರಸ್ತೆ ಕೆಲಸ ಶುರು ಮಾಡಿ ಈಗ ನಿಲ್ಲಿಸಿದ್ದಾರೆ. ರಸ್ತೆ ಪೂರ್ತಿ ಜಲ್ಲಿ ಹಾಕಿದ್ದು ಸಂಪೂರ್ಣ ಧೂಳೆದ್ದಿದೆ. ಬೈಕ್ ನಲ್ಲಿ ತೆರಳಲು ಕಷ್ಟವಾಗಿದ್ದು ಧೂಳಿನಿಂದ ಗಾಡಿ ಓಡಿಸಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ರಸ್ತೆ ಕೆಲಸ ಮುಗಿಸಬೇಕು.

। ಹರೀಶ್ ವಿ ಎನ್ , ಬೈಕ್ ಸವಾರ, ಇಂಜಿಲಗೆರೆ

ರಸ್ತೆ ಕೆಲಸ ಪ್ರಾರಂಭಿಸಿ ಈಗ ತಿಂಗಳುಗಳು ಕಳೆದಿದ್ದು ಈಗ ಕೆಲಸ ನಿಲ್ಲಿಸಿದ್ದಾರೆ. ಅದರಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಚರಂಡಿ ಕೆಲಸ ಅರ್ಧಂಬರ್ದ ಮಾಡಿದ್ದು ಚರಂಡಿಯಲ್ಲಿ ಕೊಳಚೆ ನೀರು ನಿಂತು ವಾಸನೆಯೊಂದಿಗೆ ಸೊಳ್ಳೆಗಳು, ನೊಣಗಳು ಜಾಸ್ತಿಯಾಗಿದೆ. ಇಲ್ಲಿ ಶಾಲೆ ಕೂಡ ಇದ್ದು ಮಕ್ಕಳು ಚರಂಡಿ ದಾಟಿ ಶಾಲೆಗೆ ಹೋಗಲು ಕಷ್ಟವಾಗಿದ್ದು ಇದರ ಕಂಟ್ರಾಕ್ಟರಿಗೆ ಸಂಬಂಧಪಟ್ಟವರು ಹೇಳಿ ಕೆಲಸ ಬೇಗ ಮುಗಿಸಿ ಕೊಡಬೇಕಾಗಿದೆ.

। ಕರೀಂ . ಸಿ ಎಮ್. ವ್ಯಾಪಾರಸ್ಥ, ಕೂಲ್ ಲ್ಯಾಂಡ್ , ಸಿದ್ದಾಪುರ.

ಇಂಜಿಲಗೆರೆಯಿಂದ ಸಿದ್ದಾಪುರದ ಕೆಇಬಿ ವರೆಗೆ ರಸ್ತೆಗೆ ಜಲ್ಲಿ ಹಾಕಿದಷ್ಟು ಡಾಂಬರೀಕರಣ ಕಾಮಗಾರಿ ಈ ವಾರದಿಂದ ಪ್ರಾರಂಭಿಸಿದ್ದೇವೆ. ಉಳಿದ ಕಡೆ ಡಾಂಬರು ಮತ್ತು ಚರಂಡಿ ಕಾಮಗಾರಿ ಮಾಡಲು ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆಗೆಯಬೇಕು. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿದ ನಂತರ ಚರಂಡಿ ಮಾಡಿ ಒಟ್ಟಿಗೆ ಡಾಂಬರೀಕರಣವನ್ನು ಮಾಡಿ ಮುಗಿಸುತ್ತೇವೆ.

। ಲಿಂಗರಾಜು, ಸಹಾಯಕ ಕಾರ್ಯನಿರ್ವಾಹಕರು ಪಿ ಡಬ್ಲೂ ಡಿ.