ಕಂಪ್ಲಿ: ಪಟ್ಟಣದ ನಡುವಿನ ಮಸೀದಿಯಿಂದ ಜೋಗಿಕಾಲುವೆತನಕ ರಸ್ತೆ ಡಾಂಬರೀಕರಣ ಕಾಮಗಾರಿ ಗುರುವಾರ ಆರಂಭಗೊಂಡಿದ್ದು, ಸ್ಥಳೀಯ ನಿವಾಸಿಗಳಲ್ಲಿ ಸಂತಸ ಒಂದೆಡೆಯಾದರೆ, ಇನ್ನೊಂದೆಡೆ ಕಾಮಗಾರಿ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.ನಡುವಿನ ಮಸೀದಿಯಿಂದ ಜೋಗಿಕಾಲುವೆವರೆಗೆ ಸುಮಾರು 402 ಮೀಟರ್ ಉದ್ದದ ರಸ್ತೆ ಅಗಲೀಕರಣ ಕಾಮಗಾರಿ 2025ರ ಏಪ್ರಿಲ್ 12ರಂದು ಆರಂಭಗೊಂಡಿತ್ತು. ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ರಸ್ತೆಯ ದುಸ್ಥಿತಿ, ಧೂಳಿನ ಕಾಟ ಮತ್ತು ಸಂಚಾರ ಅಡಚಣೆಗಳಿಂದ ಬೇಸತ್ತು, ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಪುರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದರು.ಈ ಹಿನ್ನೆಲೆ ಇದೀಗ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರ ಸುಗಮಗೊಂಡಿದೆ. ಆದರೂ ಕಾಮಗಾರಿಯ ಗುಣಮಟ್ಟ ಹಾಗೂ ಯೋಜನೆ ಬಗ್ಗೆ ಕೆಲ ಅಸಮಾಧಾನಗಳು ವ್ಯಕ್ತವಾಗಿವೆ.ರಸ್ತೆ ಅಗಲೀಕರಣದ ವೇಳೆ ನಡೆದ ಸಭೆಯಲ್ಲಿ ರಸ್ತೆ ಮಟ್ಟಕ್ಕೆ ಸಮನಾಗಿ ಚರಂಡಿ ನಿರ್ಮಿಸಲಾಗುವುದು ಎಂದು ಪುರಸಭೆ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ವಾಸ್ತವದಲ್ಲಿ ಚರಂಡಿಗಿಂತ ರಸ್ತೆ ತಗ್ಗಾಗಿ ನಿರ್ಮಾಣಗೊಂಡಿರುವುದರಿಂದ ವಾಹನಗಳನ್ನು ನಿಲ್ಲಿಸಲು ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆ ಮಟ್ಟದಲ್ಲಿ ಚರಂಡಿ ನಿರ್ಮಿಸಿದ್ದರೆ ಸುಮಾರು ಮೂರು ಅಡಿ ಸ್ಥಳ ವಾಹನ ನಿಲುಗಡೆಗೆ ಲಭ್ಯವಾಗುತ್ತಿತ್ತು ಎಂದು ತಿಳಿಸಿದ್ದಾರೆ.ಇದೇ ರೀತಿಯ ಸಮಸ್ಯೆ ಈ ಹಿಂದೆ ನೋಂದಣಿ ಕಚೇರಿಯಿಂದ ನಡುವಿನ ಮಸೀದಿವರೆಗೆ ನಿರ್ಮಿತ ರಸ್ತೆಯಲ್ಲಿಯೂ ಎದುರಾಗಿತ್ತು. ಅಲ್ಲಿ ಚರಂಡಿ ರಸ್ತೆಗಿಂತ ಎತ್ತರದಲ್ಲಿದ್ದರಿಂದ ವಾಹನಗಳು ರಸ್ತೆ ಮೇಲೆ ನಿಲ್ಲಿಸಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ನಂತರ ಆ ಸಮಸ್ಯೆಯನ್ನು ಸರಿಪಡಿಸಲು ಚರಂಡಿಯನ್ನು ರಸ್ತೆ ಮಟ್ಟಕ್ಕೆ ತರುವ ಕೆಲಸ ಮಾಡಲಾಗಿತ್ತು. ಇದರಿಂದ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಯಿತು ಎಂದು ಸ್ಥಳೀಯ ನಿವಾಸಿ ಗೌಡ್ರು ಗೋಪಾಲಕೃಷ್ಣ ಸೇರಿದಂತೆ ಹಲವರು ದೂರಿದ್ದಾರೆ. ಇಲ್ಲಿಯೂ ಅದೇ ರೀತಿಯ ದೋಷಪೂರಿತ ಕಾಮಗಾರಿ ನಡೆಯುತ್ತಿರುವುದು ವಿಷಾದನೀಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಚರಂಡಿಗಿಂತ ರಸ್ತೆ ತಗ್ಗಾಗಿ ನಿರ್ಮಿಸಿರುವುದರಿಂದ ಅಸಮಾಧಾನ
ಸ್ಥಳೀಯ ನಿವಾಸಿಗಳಲ್ಲಿ ಸಂತಸ ಒಂದೆಡೆಯಾದರೆ, ಇನ್ನೊಂದೆಡೆ ಕಾಮಗಾರಿ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.