ತೆರಿಗೆ ಹಣ ನ್ಯಾಯಯುತವಾಗಿ ರಾಜ್ಯಗಳಿಗೆ ಹಂಚಿ: ಎಚ್‌.ಜಿ.ಉಮೇಶ

| Published : Feb 13 2024, 12:49 AM IST

ತೆರಿಗೆ ಹಣ ನ್ಯಾಯಯುತವಾಗಿ ರಾಜ್ಯಗಳಿಗೆ ಹಂಚಿ: ಎಚ್‌.ಜಿ.ಉಮೇಶ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಭಾರತದ ಒಕ್ಕೂಟ ವ್ಯವಸ್ಥೆಯೊಳಗಿರುವ ರಾಜ್ಯಗಳ ಮೂಲಕ ಸಂಗ್ರಹವಾಗುವ ತೆರಿಗೆ, ಸೆಸ್‌, ಸರ್ ಚಾರ್ಜ್‌ ರೂಪದಲ್ಲಿ ಸಂಗ್ರಹಿಸುವ ತೆರಿಗೆ ಹಣವನ್ನು ಕೇಂದ್ರ, ರಾಜ್ಯಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಲೆಂದು ಹಣಕಾಸು ಆಯೋಗ ರಚಿಸಿದೆ. ಅದರಂತೆ ತೆರಿಗೆ ಹಣವನ್ನು ನ್ಯಾಯಸಮ್ಮತವಾಗಿ ರಾಜ್ಯಗಳಿಗೆ ಹಂಚಿ, ಅಗತ್ಯವಾದ ಅನುದಾನಗಳ ಕಾಲಕಾಲಕ್ಕೆ ಬಿಡುಗಡೆಗೊಳಿಸಬೇಕಿರುವುದು ಭಾರತ ಸರ್ಕಾರದ ಕರ್ತವ್ಯ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಎಸ್‌ಟಿ, ತೆರಿಗೆ ಹಣ, ಬರ ಪರಿಹಾರ ಸೇರಿ ವಿವಿಧ ಅನುದಾನಗಳ ರಾಜ್ಯಗಳಿಗೆ ಹಂಚುವಾಗ ಕೇಂದ್ರ ಸರ್ಕಾರ ಎಸಗುತ್ತಿರುವ ಅನ್ಯಾಯ, ತಾರತಮ್ಯ ನೀತಿ ಖಂಡಿಸಿ ಸಿಪಿಐ ಜಿಲ್ಲಾ ಘಟಕ ನಗರದಲ್ಲಿ ಸೋಮವಾರ ಸಂಸದರ ಜನ ಸಂಪರ್ಕ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ನಗರದ ಲೋಕೋಪಯೋಗಿ ಇಲಾಖೆ ಆವರಣದ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಕಚೇರಿ ಮುಂಭಾಗದಲ್ಲಿ ಸಿಪಿಐ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳ ಕೂಗಿ, ನಂತರ ಸಂಸದರ ಆಪ್ತ ಸಹಾಯಕ ಸಿ.ಎಚ್‌.ದೇವರಾಜ ಮುಖಾಂತರ ಮನವಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ಎಚ್‌.ಜಿ.ಉಮೇಶ, ಕೇಂದ್ರ ಸರ್ಕಾರ ಭಾರತದ ಒಕ್ಕೂಟ ವ್ಯವಸ್ಥೆಯೊಳಗಿರುವ ರಾಜ್ಯಗಳ ಮೂಲಕ ಸಂಗ್ರಹವಾಗುವ ತೆರಿಗೆ, ಸೆಸ್‌, ಸರ್ ಚಾರ್ಜ್‌ ರೂಪದಲ್ಲಿ ಸಂಗ್ರಹಿಸುವ ತೆರಿಗೆ ಹಣವನ್ನು ಕೇಂದ್ರ, ರಾಜ್ಯಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಲೆಂದು ಹಣಕಾಸು ಆಯೋಗ ರಚಿಸಿದೆ. ಅದರಂತೆ ತೆರಿಗೆ ಹಣವನ್ನು ನ್ಯಾಯಸಮ್ಮತವಾಗಿ ರಾಜ್ಯಗಳಿಗೆ ಹಂಚಿ, ಅಗತ್ಯವಾದ ಅನುದಾನಗಳ ಕಾಲಕಾಲಕ್ಕೆ ಬಿಡುಗಡೆಗೊಳಿಸಬೇಕಿರುವುದು ಭಾರತ ಸರ್ಕಾರದ ಕರ್ತವ್ಯ ಎಂದರು.

ಕಳೆದ 4 ವರ್ಷದಿಂದ ರಾಜ್ಯಗಳಿಗೆ ಲಭಿಸಬೇಕಾದ ತೆರಿಗೆ ಹಣ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತೀವ್ರ ಅನ್ಯಾಯ ಮಾಡುತ್ತಿದೆ. ಸುಮಾರು ₹45 ಸಾವಿರ ಕೋಟಿಗಳು ನಷ್ಟವಾದ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿ ಅಂಶಗಳ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ರಾಜ್ಯದ ಬರ ಪರಿಹಾರದ ಅನುದಾನ ಬಿಡುಗಡೆಗೊಳಿಸದಿರುವುದು ರಾಜ್ಯಕ್ಕೆ ಮಾಡಿರುವ ಅನ್ಯಾಯ ಎಂದು ದೂರಿದರು.

ರಾಜ್ಯಕ್ಕೆ ಪದೇಪದೇ ಅನ್ಯಾಯವಾಗುತ್ತಿದ್ದರೂ ಸಂಸದರು ಮೌನ ವಹಿಸಿರುವುದು ಸರಿಯಲ್ಲ. ಇಡೀ ರಾಜ್ಯದ ಬಗ್ಗೆ ಕೇಂದ್ರ ಕಡೆಗಣಿಸುತ್ತಿದ್ದರೂ ಮೌನ ವಹಿಸುತ್ತಿರುವವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ. ಇನ್ನಾದರೂ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ನಿಲ್ಲಿಸಲಿ ಎಂದು ಆವರಗೆರೆ ಉಮೇಶ ತಾಕೀತು ಮಾಡಿದರು.

ಕೇಂದ್ರದ ಕಡೆಗಣನೆ ಸರಿಯಲ್ಲ:

ಪಕ್ಷದ ಮುಖಂಡ ಆವರಗೆರೆ ಚಂದ್ರು ಮಾತನಾಡಿ, ಬರಗಾಲದಿಂದ ರಾಜ್ಯವೇ ಕಂಗಾಲಾಗಿದ್ದು, ಈ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕಾದ ಕೇಂದ್ರ ಸರ್ಕಾರವು ಕಡೆಗಣಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಕರ್ನಾಟಕವನ್ನೇ ಪ್ರತಿನಿಧಿಸುತ್ತಾರೆ. ಆದರೆ, ತಾವು ಪ್ರತಿನಿಧಿಸುವ ರಾಜ್ಯಕ್ಕೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ತಾರತಮ್ಯ ನೀತಿ, ಮಲತಾಯಿ ಧೋರಣೆ ಯಾರಿಗೂ ಶೋಭೆ ತರಲ್ಲ ಎಂದರು.

ಪಕ್ಷದ ಜಿಲ್ಲಾ ಖಜಾಂಚಿ ಆನಂದರಾಜ, ಮುಖಂಡರಾದ ಪಿ.ಷಣ್ಮುಖ ಸ್ವಾಮಿ, ಆವರಗೆರೆ ವಾಸು, ಸಿ.ರಮೇಶ ದಾಸರ, ಎ.ಬಿ.ಸಾವಿತ್ರಮ್ಮ, ಕೃಷ್ಣಪ್ಪ, ಎಚ್.ಪಿ.ಉಮಾಪತಿ, ನಾಗಮ್ಮ, ಭಾಗ್ಯ, ಎಸ್.ಎಂ.ಮೊಹಸೀನ್‌, ಶೇಖರ ನಾಯ್ಕ, ಕೃಷ್ಣಪ್ಪ, ನಿಟುವಳ್ಳಿ ಬಸವರಾಜ, ವಿ.ಲಕ್ಷ್ಮಣ, ನಾಗಮ್ಮ, ಸುರೇಶ, ತಿಪ್ಪೇಶ ಇತರರು ಇದ್ದರು.