ಪೋಷಕರಿಲ್ಲದ ವಿದ್ಯಾರ್ಥಿನಿಯರಿಗೆ ಸೈಕಲ್‌ ವಿತರಣೆ

| Published : Aug 03 2024, 12:36 AM IST

ಸಾರಾಂಶ

ರಾಜ್ಯ ಸರ್ಕಾರವು ೧ ರಿಂದ ೧೪ ವರ್ಷದ ಮಕ್ಕಳ ಶಿಕ್ಷಣವನ್ನು ಕಡ್ಡಾಯಗೊಳಿಸಿ ಶಾಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ, ಬಿಸಿಯೂಟ, ಪಠ್ಯಪುಸ್ತಕ, ಇನ್ನಿತರೆ ಸವಲತ್ತುಗಳನ್ನು ಒದಗಿಸುತ್ತಿದೆ. ಪೋಷಕರು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸುವಂತಹ ವಾತಾವರಣವನ್ನು ಶಿಕ್ಷಕರು ನಿರ್ಮಿಸಬೇಕು.

ಕನ್ನಡಪ್ರಭ ವಾರ್ತೆ ಮಾಲೂರು

ಶಾಲೆಗಳಲ್ಲಿ ಶಿಕ್ಷಕರು ಸಮಾಜದ ಆಧಾರ ಸ್ತಂಭಗಳನ್ನು ನಿರ್ಮಾಣ ಮಾಡುವಲ್ಲಿ ಶಿಲ್ಪಿಗಳಂತೆ ಕಾರ್ಯನಿರ್ವಹಿಸುವ ಮೂಲಕ ಅತ್ಯಂತ ಹೆಚ್ಚಿನ ಪಾತ್ರವನ್ನು ವಹಿಸುತ್ತಾರೆ. ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಫಲಿತಾಂಶಕ್ಕಾಗಿ ಶ್ರಮಿಸಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ನವೀಕರಣಗೊಂಡ ಕಾರ್ಯಾಲಯವನ್ನು ಲೋಕಾರ್ಪಣೆ ಹಾಗೂ ಪೋಷಕರನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ ಮಾಡಿ ಮಾತನಾಡಿದರು.

ರಾಜ್ಯ ಸರ್ಕಾರವು ೧ ರಿಂದ ೧೪ ವರ್ಷದ ಮಕ್ಕಳ ಶಿಕ್ಷಣವನ್ನು ಕಡ್ಡಾಯಗೊಳಿಸಿ ಪ್ರಾಥಮಿಕ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ, ಬಿಸಿಯೂಟ, ಪಠ್ಯಪುಸ್ತಕ, ಇನ್ನಿತರೆ ಸವಲತ್ತುಗಳನ್ನು ಒದಗಿಸುತ್ತಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದೆ. ಪೋಷಕರು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸುವಂತಹ ವಾತಾವರಣವನ್ನು ಶಿಕ್ಷಕರು ನಿರ್ಮಿಸಬೇಕು ಎಂದರು.

ನಿವೃತ್ತರಿಗೆ ಬೀಳ್ಕೊಡುಗೆ

ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇಸಿಓಗಳಾಗಿ ಕೆಲಸ ನಿರ್ವಹಿಸಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಶಾಲೆಗಳಿಗೆ ವರ್ಗಾವಣೆಗೊಂಡ ಪ್ರಭಾರಿ ಬಿಆರ್‌ಸಿ ಸಮನ್ವಯ ಅಧಿಕಾರಿ ನಂಜುಂಡೇಗೌಡ, ಶಿಕ್ಷಣಾಧಿಕಾರಿಗಳಾದ ರೋಷನ್ ಜಮೀರ್, ಬಾಬಾ ಜಾನ್, ಸೇರಿದಂತೆ ಬಿ ಆರ್ ಸಿ ಗಳನ್ನು ಅಭಿನಂದಿಸಿ ಬೀಳ್ಕೊಡುಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿ.ಕೃಷ್ಣಪ,್ಪ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ ಮುನೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್.ಚಂದ್ರಕಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಗಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಂತಿ, ಶಿಕ್ಷಣ ಸಂಯೋಜಕ ವೆಂಕಟಸ್ವಾಮಿ, ಬಿ ಆರ್ ಸಿ ಜಗದಾಂಬ, ಇನ್ನಿತರರು ಹಾಜರಿದ್ದರು.