ಇಲಾಖೆಯ ವತಿಯಿಂದ ₹ 3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ. ಒಂದು ವೇಳೆ ವರನು ಪರಿಶಿಷ್ಟ ಜಾತಿಗೆ ಸೇರಿದ್ದು, ವಧುವು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರೆ ₹ 2.5 ಲಕ್ಷ ಪ್ರೋತ್ಸಾಹಧನ ವಿತರಿಸಲಾಗುತ್ತದೆ. ಸರ್ಕಾರದಿಂದ ಮಂಜೂರಾಗುವ ಒಟ್ಟು ಮೊತ್ತದಲ್ಲಿ ಶೇಕಡಾ 50ರಷ್ಟು ಹಣವನ್ನು ನೇರವಾಗಿ ದಂಪತಿಯ ಜಂಟಿ ಬ್ಯಾಂಕ್ ಖಾತೆಗೆ ನಗದು ರೂಪದಲ್ಲಿ ಜಮಾ ಮಾಡಲಾಗುತ್ತದೆ.

ಮಾಗಡಿ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಂತರ್ಜಾತಿ ವಿವಾಹವಾದ ಧನುಶ್ರೀ, ನವೀನ್ ದಂಪತಿಗೆ ₹3 ಲಕ್ಷ ಪ್ರೋತ್ಸಾಹ ಧನ ವಿತರಣೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಉಮಾದೇವಿ ತಿಳಿಸಿದ್ದಾರೆ.

ಪಟ್ಟಣದ ಬೈಚಾಪುರದ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಬಾಂಡ್ ವಿತರಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತರ್ಜಾತಿ ವಿವಾಹವಾದ ದಂಪತಿಯಲ್ಲಿ ವಧುವು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ, ಇಲಾಖೆಯ ವತಿಯಿಂದ ₹ 3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ. ಒಂದು ವೇಳೆ ವರನು ಪರಿಶಿಷ್ಟ ಜಾತಿಗೆ ಸೇರಿದ್ದು, ವಧುವು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರೆ ₹ 2.5 ಲಕ್ಷ ಪ್ರೋತ್ಸಾಹಧನ ವಿತರಿಸಲಾಗುತ್ತದೆ. ಸರ್ಕಾರದಿಂದ ಮಂಜೂರಾಗುವ ಒಟ್ಟು ಮೊತ್ತದಲ್ಲಿ ಶೇಕಡಾ 50ರಷ್ಟು ಹಣವನ್ನು ನೇರವಾಗಿ ದಂಪತಿಯ ಜಂಟಿ ಬ್ಯಾಂಕ್ ಖಾತೆಗೆ ನಗದು ರೂಪದಲ್ಲಿ ಜಮಾ ಮಾಡಲಾಗುತ್ತದೆ. ಇನ್ನುಳಿದ ಶೇಕಡಾ 50 ರಷ್ಟು ಮೊತ್ತವನ್ನು ಬ್ಯಾಂಕಿನಲ್ಲಿ ಜಂಟಿ ಹೆಸರಿನಲ್ಲೇ 3 ವರ್ಷಗಳ ಕಾಲ ಆರ್‌ಡಿ ಅಥವಾ ಎನ್‌ಎಸ್‌ಸಿ ಬಾಂಡ್ ರೂಪದಲ್ಲಿ ಇಡಲಾಗುತ್ತದೆ. 3 ವರ್ಷಗಳ ಅವಧಿ ಮುಗಿದ ನಂತರ, ಅದಕ್ಕೆ ಬರುವ ಬಡ್ಡಿ ಸೇರಿ (ಅಂದಾಜು ₹30 ಸಾವಿರಕ್ಕೂ ಹೆಚ್ಚು ಬಡ್ಡಿ ಹಣ) ಸಂಪೂರ್ಣ ಮೊತ್ತವನ್ನು ದಂಪತಿಗೆ ನೀಡಲಾಗುತ್ತದೆ ಎಂದು ವಿವರಿಸಿದರು.

ಯೋಜನೆಗೆ ಬೇಕಾದ ಅಗತ್ಯವಿರುವ ದಾಖಲೆಗಳು: ಈ ಯೋಜನೆಯ ಸೌಲಭ್ಯ ಪಡೆಯಲು ದಂಪತಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ವಧು- ವರರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಉಪನೋಂದಣಾಧಿಕಾರಿಗಳ ಕಚೇರಿಯಿಂದ ಪಡೆದ ವಿವಾಹ ನೋಂದಣಿ ಪ್ರಮಾಣ ಪತ್ರ, ವಿದ್ಯಾರ್ಹತೆಯ ದಾಖಲೆಗಳು (ಮಾರ್ಕ್ಸ್‌ಕಾರ್ಡ್ ಮತ್ತು ಟಿಸಿ), ದಂಪತಿಗಳ ಜಂಟಿ ಬ್ಯಾಂಕ್ ಖಾತೆ ಪುಸ್ತಕ , ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್, ತಾಲೂಕಿನಲ್ಲಿ ಹಿರಿತನದ ಆಧಾರದ ಮೇಲೆ ಹಾಗೂ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವ ಮುಖಾಂತರ ಹಂತಹಂತವಾಗಿ ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯವನ್ನು ತಲುಪಿಸಲಾಗುತ್ತಿದೆ. ನಾನು ಅಧಿಕಾರ ವಹಿಸಿಕೊಂಡ ನಂತರ ಮೊದಲ ಫಲಾನುಭವಿಗಳು ಇವರಾಗಿದ್ದು, ಸರ್ಕಾರದಲ್ಲಿ ಅನುದಾನ ಅನುಸಾರ ಪ್ರೋತ್ಸಾಹ ಧನ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.