ಸಾರಾಂಶ
ಫೆ. 1ರಂದು ಬೆಳಗ್ಗೆ 8.30ಕ್ಕೆ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಹಂಪಿಯವರೆಗೆ ಬೈಕ್ ರ‍್ಯಾಲಿ ಜರುಗಲಿದ್ದು, ಈಗಾಗಲೇ ನಗರದ 50ಕ್ಕೂ ಹೆಚ್ಚು ವಿವಿಧ ಸಂಘ- ಸಂಸ್ಥೆಗಳು ಈ ರ‍್ಯಾಲಿಯಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿವೆ.
ಹೊಸಪೇಟೆ: ಫೆ. 2, 3 ಮತ್ತು 4ರಂದು ನಡೆಯುವ ಹಂಪಿ ಉತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಫೆ. 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ. 1ರಂದು ಬೆಳಗ್ಗೆ 8.30ಕ್ಕೆ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಹಂಪಿಯವರೆಗೆ ಬೈಕ್ ರ‍್ಯಾಲಿ ಜರುಗಲಿದ್ದು, ಈಗಾಗಲೇ ನಗರದ 50ಕ್ಕೂ ಹೆಚ್ಚು ವಿವಿಧ ಸಂಘ- ಸಂಸ್ಥೆಗಳು ಈ ರ‍್ಯಾಲಿಯಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿವೆ. ಫೆ. 1ರಂದು ಬೆಳಗ್ಗೆ 10 ಗಂಟೆಗೆ ಆಕಾಶದಿಂದ ಹಂಪಿ ನೋಡುವ ಆಸಕ್ತರಿಗೆ ಹಂಪಿ ಬೈ ಸೈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅಂದು ಮಧ್ಯಾಹ್ನ 3 ಗಂಟೆಗೆ ವಡಕರಾಯನ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ವಸಂತ ವೈಭವ ಭವ್ಯ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ ಎಂದರು.ಫೆ. 2ರಂದು ಬೆಳಗ್ಗೆ 10 ಗಂಟೆಗೆ ಎತ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಬೆಳಗ್ಗೆ 10.30ಕ್ಕೆ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಹಂಪಿ ಇತಿಹಾಸದ ಕುರಿತು ವಿಚಾರಸಂಕಿರಣ ಹಾಗೂ ಕವಿಗೋಷ್ಠಿ ಜರುಗಲಿದೆ. ಬೆಳಗ್ಗೆ 11ಕ್ಕೆ ವಸ್ತು ಪ್ರದರ್ಶನ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು ಎಂದರು.
ಫೆ. 4ರಂದು ರಾತ್ರಿ 11 ಗಂಟೆಯವರೆಗೆ ಉತ್ಸವದ ನಾಲ್ಕು ವೇದಿಕೆಗಳಲ್ಲಿ ವಿಭಿನ್ನವಾದ ಹಾಗೂ ಆಕರ್ಷಕ ಕಲಾ ತಂಡಗಳಿಂದ ಹಾಗೂ ಮುಖ್ಯ ವೇದಿಕೆಯಾದ ಗಾಯತ್ರಿ ಪೀಠದಲ್ಲಿ ಚಲನಚಿತ್ರ ನಟರಾದ ಅರ್ಮುಗಂ ರವಿಶಂಕರ್, ಅಜಯ್ ರಾವ್, ನೆನಪಿರಲಿ ಪ್ರೇಮ್, ರಾಗಿಣಿ ದ್ವಿವೇದಿ. ನಮ್ರತಾ ಗೌಡ. ನಿಮಿಕಾ ರತ್ನಾಕರ್, ನಿಶ್ವಿಕಾ ನಾಯ್ಡು, ಜಾಹಿದ್ ಅಹಮ್ಮದ್ ಖಾನ್, ಸಂಯುಕ್ತಾ ಹೆಗ್ಡೆ ಹಾಗೂ ದಿಗಂತ್ ಅವರಿಂದ ವಿವಿಧ ನೃತ್ಯ ಹಾಗೂ ಗಾಯನಗಳು ನಡೆಯಲಿವೆ. ಅದೇ ದಿನ 10 ಗಂಟೆಯ ನಂತರ ಖ್ಯಾತ ಸಂಗೀತ ಸಂಯೋಜಕ ಸಾಧು ಕೋಕಿಲ ಮತ್ತು ಗಾಯಕರಾದ ಕಲಾವತಿ, ಸುನೀತಾ, ವಾಣಿ ಹರಿಹರನ್, ಉಷಾ, ಮಂಗಳಾ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.ಶಾಸಕ ಎಚ್.ಆರ್. ಗವಿಯಪ್ಪ, ಜಿಪಂ ಸಿಇಒ ಸದಾಶಿವ ಪ್ರಭು ಬಿ., ಎಸ್ಪಿ ಶ್ರೀಹರಿಬಾಬು, ಎಡಿಸಿ ಅನುರಾಧ ಜಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.